ಕಾಂಕ್ರಿಟ್ ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿ ಆರಂಭ
ಮೈಸೂರು

ಕಾಂಕ್ರಿಟ್ ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿ ಆರಂಭ

October 24, 2019

ಮೈಸೂರು, ಅ.23(ಆರ್‍ಕೆ)-ಮಳೆಯಿಂದಾಗಿ ಮಂಗಳವಾರ ಭೂ ಕುಸಿತವಾಗಿದ್ದ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯ ಸ್ಥಳದಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಕಾಮಗಾರಿ ಇಂದು ಆರಂಭವಾಯಿತು.

ವಿಷಯ ತಿಳಿಯುತ್ತಿದ್ದಂತೆಯೇ ಮಂಗಳವಾರ ಸಂಜೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು, ಇಂದು ಬೆಳಿಗ್ಗೆಯೇ ತಡೆಗೋಡೆ ನಿರ್ಮಿಸಲು ಕಾಮಗಾರಿ ಆರಂಭಿಸಿದರು. ಮುಂಜಾಗ್ರತಾ ಕ್ರಮವಾಗಿ ವ್ಯೂ ಪಾಯಿಂಟ್ ಮತ್ತು ನಂದಿ ಬಳಿ ಬ್ಯಾರಿ ಕೇಡ್ ಹಾಕಿ, ಆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡ ಲಾಗಿದೆ. ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನಯ್‍ಕುಮಾರ್, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜು ಹಾಗೂ ಇತರ ಅಧಿಕಾರಿಗಳು ತುರ್ತಾಗಿ ದುರಸ್ತಿ ಮಾಡಲು ಅಂದಾಜು ಪಟ್ಟಿ ತಯಾರಿಸಿ, ಜೆಸಿಬಿ ತರಿಸಿ ಇಂದೇ ಕಾಮಗಾರಿ ಆರಂಭಿಸಿದರು.

50 ಅಡಿ ಉದ್ದ, 22 ಅಡಿ ಆಳಕ್ಕೆ ಭೂಕುಸಿತವಾಗಿರುವುದರಿಂದ ಯಂತ್ರದ ಮೂಲಕ ಕುಸಿದಿರುವ ಮಣ್ಣನ್ನು ತೆಗೆದು ಗುಂಡಿ ಮಾಡಿ ತಳಮಟ್ಟದಿಂದ ಪಿಲ್ಲರ್ ಹಾಕಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸ ಬೇಕಾಗಿರುವುದರಿಂದ ಜೆಸಿಬಿಯಿಂದ ಕೆಲಸ ಆರಂಭಿಸಿದ್ದೇವೆ. 15 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಲುದ್ದೇಶಿಸಿದ್ದು, ತ್ವರಿತಗತಿಯಲ್ಲಿ ಮಾಡುತ್ತಿದ್ದೇವೆ ಎಂದು ರಾಜು ತಿಳಿಸಿದ್ದಾರೆ.

ಅಲ್ಲಿಯವರೆಗೆ ವ್ಯೂ ಪಾಯಿಂಟ್ ಮತ್ತು ನಂದಿ ಪ್ರತಿಮೆವರೆಗೆ ವಾಹನ ಸಂಚಾರವನ್ನು ಬಂದ್ ಮಾಡಿದ್ದೇವೆ. ಎರಡೂ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಿ ಪ್ರವಾಸಿಗರಿಗೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಭೂ ಕುಸಿತವಾಗಿರುವ ಸ್ಥಳದಲ್ಲಿ ಮೇಲಿಂದ ಹರಿದು ಬರುತ್ತಿರುವ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿ ಕಾಮಗಾರಿಗೆ ಅನುವು ಮಾಡುವುದರ ಜೊತೆಗೆ ನೀರು ಡಾಂಬರ್ ರಸ್ತೆ ಮೇಲೆ ಹರಿಯದಂತೆ ತಡೆಯಲಾಗಿದೆ ಎಂದು ಅವರು ಹೇಳಿದರು.

Translate »