34.25 ಕೋಟಿ ರೂ.ಗಳ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಯೋಜನೆ ನೆನೆಗುದಿಗೆ
ಮೈಸೂರು

34.25 ಕೋಟಿ ರೂ.ಗಳ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಯೋಜನೆ ನೆನೆಗುದಿಗೆ

October 24, 2019

ಮೈಸೂರು, ಅ. 23(ಆರ್‍ಕೆ)- 2015ರಲ್ಲೇ ಯೋಜಿಸಿದ್ದ 34.25 ಕೋಟಿ ರೂ. ಅಂದಾಜು ವೆಚ್ಚದ ಚಾಮುಂಡಿಬೆಟ್ಟ ರಸ್ತೆ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯು ಪರಿಸರವಾದಿಗಳು ಆಕ್ಷೇಪದಿಂದ ನೆನೆಗುದಿಗೆ ಬಿದ್ದಿದೆ.

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಮೈಸೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಿಂದ 2015ರ ಜುಲೈ 21ರಂದೇ ಚಾಮುಂಡಿಬೆಟ್ಟದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು 34.25 ಕೋಟಿ ರೂ.ಗಳಿಗೆ ಅಂದಾಜುಪಟ್ಟಿ ತಯಾರಿಸಿ ಅಧೀಕ್ಷಕ ಇಂಜಿನಿ ಯರ್ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಚಾಮುಂಡಿಬೆಟ್ಟದ ನಂದಿ ಪ್ರತಿಮೆ ವೃತ್ತ ದಿಂದ ಮಹಿಷಾಸುರ ಪ್ರತಿಮೆ ವೃತ್ತದವರೆಗೆ ಹಾಲಿ ಇರುವ ರಸ್ತೆಯನ್ನು 4 ಪಥದ ರಸ್ತೆ ಯನ್ನಾಗಿ ಅಭಿವೃದ್ಧಿಪಡಿಸುವುದು (575 ಲಕ್ಷ ರೂ.), ಚಾಮುಂಡಿಬೆಟ್ಟದ ಮುಖ್ಯ ರಸ್ತೆಯಲ್ಲಿ ತಡೆಗೋಡೆ ಚರಂಡಿ, ಫುಟ್‍ಪಾತ್ ನಿರ್ಮಾಣ (7 ಕೋಟಿ ರೂ.), ಹೊಸ ನಂದಿ ರಸ್ತೆಯಲ್ಲಿ ತಡೆಗೋಡೆ ಚರಂಡಿ, ಫುಟ್‍ಪಾತ್, ರಸ್ತೆ ಅಭಿವೃದ್ಧಿ (2.5 ಕೋಟಿ ರೂ.), ಹಳೆ ನಂದಿ ರಸ್ತೆ ಅಭಿವೃದ್ಧಿ (4 ಕೋಟಿ ರೂ.), ಜ್ವಾಲಾ ಮುಖಿ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ (4.75 ಕೋಟಿ ರೂ.), ವೆಂಕಟಸುಬ್ಬರಾವ್ ರಸ್ತೆ ಅಭಿವೃದ್ಧಿ (3 ಕೋಟಿ ರೂ.), ಕೊಣನೆರೆ ರಸ್ತೆ ಅಭಿವೃದ್ಧಿ (3.65 ಕೋಟಿ ರೂ.), ಹುಕ್ಕೇರಿ ರಸ್ತೆ (2.5 ಕೋಟಿ ರೂ.) ಹಾಗೂ ಬುಲ್‍ವ್ಯೂ ರಸ್ತೆ ಅಭಿವೃದ್ಧಿ (1.1 ಕೋಟಿ ರೂ.) ಸೇರಿ ಒಟ್ಟು 34.25 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಂದಾಜು ಪಟ್ಟಿ ತಯಾರಿಸ ಲಾಗಿತ್ತು. ಚಾಮುಂಡಿಬೆಟ್ಟದ ಮುಖ್ಯ ರಸ್ತೆಯು ಜಿಲ್ಲಾ ಮುಖ್ಯ ರಸ್ತೆಯಾಗಿರುವುದರಿಂದ ಒಟ್ಟು 8.20 ಉದ್ದವಿರುವ ರಸ್ತೆಯಲ್ಲಿ ಶುಕ್ರವಾರ, ಹಬ್ಬ ಹರಿದಿನ, ರಜಾದಿನಗಳಂದು ವಾಹನ ಸಂಚಾರ ಅಧಿಕವಾಗಿ ಟ್ರಾಫಿಕ್ ಜಾಮ್ ಆಗುತ್ತಿ ರುವುದರಿಂದ ನಂದಿ ತಿರುವು ಸರ್ಕಲ್‍ನಿಂದ ಮಹಿಷಾಸುರ ಪ್ರತಿಮೆವರೆಗೆ ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸಿ ಬೆಟ್ಟದಿಂದ ಇಳಿ ಯುವ ವಾಹನಗಳನ್ನು ನಂದಿ ತಿರುವು ವೃತ್ತ ದಿಂದ ನಂದಿ ಪ್ರತಿಮೆ ಮಾರ್ಗವಾಗಿ ಇಳಿಯು ವಂತೆ ಏಕಮುಖ ರಸ್ತೆಯನ್ನಾಗಿ ರೂಪಿಸಬಹು ದಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಸ್ತಾವನೆಯಲ್ಲಿ ತಿಳಿಸಿದ್ದರು.

ಚಾಮುಂಡಿಬೆಟ್ಟದ ರಸ್ತೆಯಲ್ಲಿ ಹಾಲಿ ಇರುವ ತಡೆಗೋಡೆಯನ್ನು (ಪ್ಯಾರಪೆಟ್) ಮಣ್ಣು ಮತ್ತು ಬೌಲ್ಡರ್‍ನಿಂದ ನಿರ್ಮಿಸಿದ್ದು, ಅವು ಶಿಥಿಲಾ ವಸ್ಥೆಯಲ್ಲಿರುವುದರಿಂದ ವಾಹನ ಅಪಘಾತ ಸಂದರ್ಭದಲ್ಲಿ ಹೆಚ್ಚಿನ ಹಾನಿಯಾಗುವ ಸಂಭವ ವಿರುವುದರಿಂದ ಆರ್‍ಸಿಸಿ ಕಾಂಕ್ರಿಟ್‍ನಿಂದ ತಡೆಗೋಡೆ ನಿರ್ಮಿಸುವುದು ಸೂಕ್ತವಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿ ಮಣ್ಣು ಕೊರೆ ಯುವುದರಿಂದ ಅಪಘಾತಗಳು ಸಂಭವಿಸು ತ್ತಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗಲು ರಸ್ತೆ ಬದಿ ಯಲ್ಲಿ ಇಂಟರ್ ಕಾಲಿಂಗ್ ಅಳವಡಿಸುವುದು ಸೂಕ್ತವೆನಿಸುತ್ತದೆ ಎಂದು ಅಧಿಕಾರಿಗಳು ಪ್ರಸ್ತಾವನೆಯಲ್ಲಿ ವಿವರಿಸಿದ್ದರು.

ಈ ಸಂಬಂಧ ಈ ಹಿಂದಿನ ಲೋಕೋಪ ಯೋಗಿ ಸಚಿವರಾಗಿದ್ದ ಡಾ.ಹೆಚ್.ಸಿ. ಮಹ ದೇವಪ್ಪ ಅವರ ಸಮ್ಮುಖದಲ್ಲಿ ಪರಿಸರವಾದಿ ಗಳಿಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಪರಿಸರಕ್ಕೆ ಹಾನಿಯಾಗದಂತೆ ಕಾಮಗಾರಿ ಮಾಡಲಾಗುವುದು ಎಂಬುದನ್ನು ಅಧಿಕಾರಿಗಳು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವರಿಕೆ ಮಾಡಿಕೊಟ್ಟರು.

ಆದರೆ ಮರಗಿಡಗಳು ನಾಶವಾಗುತ್ತವೆ, ರಸ್ತೆ ಅಗಲೀಕರಣಗೊಂಡರೆ ಅತೀ ಹೆಚ್ಚು ವಾಹನ ದಟ್ಟಣೆಯಾಗುತ್ತದೆಯಲ್ಲದೆ, ಚಾಮುಂಡಿ ಬೆಟ್ಟದ ನೈಸರ್ಗಿಕ ಸೌಂದರ್ಯಕ್ಕೆ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿದರೆ ಧಕ್ಕೆಯಾಗುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಪರಿಸರ ವಾದಿಗಳು ತೀವ್ರ ಆಕ್ಷೇಪ ಮಾಡಿದ್ದರಿಂದ ಈ ಕಾಮಗಾರಿಯನ್ನು ಕೈಬಿಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

Translate »