ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ
ಹಾಸನ

ಕಲುಷಿತ ನೀರು ಪೂರೈಕೆ: ಪುರಸಭೆ ವಿರುದ್ಧ ಆಕ್ರೋಶ

July 24, 2018

ಬೇಲೂರು: ಪಟ್ಟಣದ ವಿವಿಧ ಬಡಾವಣೆಯ ಕೊಳಾಯಿಯಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಬರುತ್ತಿದ್ದು, ಆತಂಕಗೊಂಡ ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಕೋಟೆ, ಕೆರೆ ಬೀದಿ, ಚನ್ನನಾಯಕ ಗಲ್ಲಿ, ಕೊಟ್ನಿಕೆರೆ ಬೀದಿಯ ಸಾರ್ವಜನಿಕ ಹಾಗೂ ಮನೆಗಳಲ್ಲಿ ಅಳವಡಿಸಿರುವ ಕೊಳಾಯಿ ಯಲ್ಲಿ ಕೆಂಪು ಮಿಶ್ರಿತ ಗಲೀಜು ನೀರು ಬರುತ್ತಿದೆ. ವಾರದಿಂದ ಎಲ್ಲಾ ನಿವಾಸಿಗಳು ಈ ನೀರನ್ನೇ ಕುಡಿಯುವಂತಾಗಿದ್ದು, ಮಾರಕ ರೋಗಗಳು ಬರಬಹುದೆಂಬ ಚಿಂತೆಯಲ್ಲಿದ್ದಾರೆ. ನಲ್ಲಿಗೆ ಬಟ್ಟೆ ಕಟ್ಟಿ ನೀರನ್ನು ಸೋಸಿ ಹಿಡಿದರೂ ಮಣ್ಣು ಮಿಶ್ರಿತವಾಗಿರುತ್ತದೆ. ಈ ಬಗ್ಗೆ ಪುರಸಭೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದರು. ವಾರದಿಂದ ಕೊಳಕು ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯದಂತಹ ರೋಗಗಳು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಕಲುಷಿತ ನೀರು ಸೇವನೆಯಿಂದ ರೋಗಗಳು ಹರಡುವ ಭೀತಿ ಕಾಡುತ್ತಿದೆ. ಪರುಸಭೆ ಕೆಲ ವಾರ್ಡ್‍ನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಚರಂಡಿ, ಉತ್ತಮ ರಸ್ತೆ ಸೇರಿದಂತೆ ಶುದ್ಧ ಕುಡಿಯುವ ನೀರೂ ದೊರಕುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ರಾಜಕಾರಣಿಗಳು ಗೆದ್ದ ನಂತರ ಸಂಪೂರ್ಣ ಮರೆತು ಬಿಡುತ್ತಾರೆ. ಮನೆ ಕಂದಾಯ, ನಲ್ಲಿ ಕಂದಾಯ ವಸೂಲಿ ಮಾಡು ಪುರಸಭೆಯವರು ಮೂಲಸೌಕರ್ಯ ಕಲ್ಪಿಸಲು ಮಾತ್ರ ಮೀನಾಮೇಷ ಎಣಿಸುತ್ತಾರೆ ಎಂದು ಕಿಡಿಕಾರಿದರಲ್ಲದೆ, ಶುದ್ಧ ನೀರು ಸರಬರಾಜು ವ್ಯವಸ್ಥೆ ಮಾಡದಿದ್ದರೆ ಪುರಸಭೆ ಎದುರು ಪ್ರತಿಭಟನೆ ಮಾಡುವುದಾಗಿ ನಿವಾಸಿಗಳಾದ ಜಯಂತಿ, ಉಷಾ, ಭಾಗ್ಯಮ್ಮ, ನಾಗರತ, ಕೋಮಲಾ ಮುಂತಾದವರು ಎಚ್ಚರಿದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಪ್ರತಿಕ್ರಿಯಿಸಿ 11ನೇ ವಾರ್ಡ್ ಸೇರಿದಂತೆ ಕೆಲವೆಡೆ ನೀರು ಕಲುಷಿತಗೊಂಡಿರುವ ದೂರುಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಶುದ್ಧೀಕರಣ ಘಟಕವನ್ನು ಪರಿಶೀಲಿಸಿದಾಗ ಅಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ. ಹಾಗಾಗಿ ಜೆ.ಪಿ ನಗರದ ನೀರಿನ ಟ್ಯಾಂಕ್ ಪರಿಶೀಲಿಸಿ ಟ್ಯಾಂಕ್ ಸ್ವಚ್ಛಗೊಳಿಸಲಾಗುವುದು ಎಂದು ಹೇಳಿದರು.

Translate »