ಜೂನ್‍ವರೆಗೂ ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ
ಮೈಸೂರು

ಜೂನ್‍ವರೆಗೂ ಮೈಸೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ

May 1, 2019

ಬೆಂಗಳೂರು:  ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ, ಬೆಂಗಳೂರು, ಮೈಸೂರು ಸೇರಿ ದಂತೆ ಕೆಲವು ಪ್ರಮುಖ ನಗರ-ಪಟ್ಟಣಗಳಿಗೆ ಬರುವ ಜೂನ್‍ವರೆಗೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ 90 ಅಡಿಗಿಂತ ಹೆಚ್ಚು ನೀರು ಸಂಗ್ರಹವಿದ್ದು, ಬರುವ ಜೂನ್‍ವರೆಗೂ ಈ ನೀರನ್ನು ಕುಡಿಯಲು ಅಷ್ಟೇ ಬಳಕೆ ಮಾಡಲಾಗು ವುದು ಎಂದು ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ತಿಳಿಸಿದ್ದಾರೆ. ಕುಡಿಯುವ ನೀರಿಗೆ ಜನರು ಆತಂಕಪಡುವ ಅಗತ್ಯವಿಲ್ಲ. ಅದರಲ್ಲೂ ಈ ಭಾಗದಲ್ಲಿ ಎಂದಿನಂತೆ ಜಲಾಶಯದಿಂದ ಇನ್ನೂ ಎರಡು ತಿಂಗಳ ಕಾಲ ನೀರು ಹರಿಸಲಾಗುವುದು ಎಂದು ಹೇಳಿದ್ದಾರೆ. ಜೂನ್ ವೇಳೆಗೆ ಮಳೆಗಾಲ ಆರಂಭಗೊಂಡು ನಂತರ ಕಾವೇರಿ ಜಲಾನಯನ ಭಾಗದ ಜಲಾಶಯಗಳಿಗೆ ನೀರು ಹರಿದು ಬರುವ ನಿರೀಕ್ಷೆ ಇದೆ. ಇದು ಕೇವಲ ಕೆಆರ್‍ಎಸ್‍ಗೆ ಮಾತ್ರವಲ್ಲದೆ, ರಾಜ್ಯದ ಉಳಿದ ಜಲಾ ಶಯಗಳಲ್ಲಿರುವ ನೀರನ್ನು ಮುಂದಿನ ಎರಡು ಮೂರು ತಿಂಗಳ ಮಟ್ಟಿಗೆ ಕುಡಿಯುವ ನೀರಿಗೆ ಅಷ್ಟೇ ಬಳಕೆ ಮಾಡಲಾಗುವುದು ಎಂದಿದ್ದಾರೆ.

ಆದರೆ ಪ್ರಮುಖ ಜಲಾಶಯಗಳಿಲ್ಲದ, ಇದ್ದರೂ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಬೋರ್‍ವೆಲ್ ಗಳನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಅಗತ್ಯವಿರುವೆಡೆ ಬೋರ್‍ವೆಲ್‍ಗಳನ್ನು ದುರಸ್ತಿ ಮಾಡಿಸಿ, ಹೂಳು ತುಂಬಿದ್ದರೆ ತ್ವರಿತವಾಗಿ ಅದನ್ನು ತೆಗೆಸಿ ಎಂದು ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಾ ಹಣಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ ಮುಖ್ಯಕಾರ್ಯದರ್ಶಿಗಳು ಬರಗಾಲದ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಎದುರಿಸಬೇಕು ಮತ್ತು ಕುಡಿಯುವ ನೀರು ಒದಗಿಸಲು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂಗಳನ್ನು ಎಲ್ಲ ಜಿಲ್ಲಾ, ತಾಲೂಕುಗಳಲ್ಲಿ ಪ್ರಾರಂಭಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಆದೇಶಿಸಿ ದ್ದಾರೆ. ರಾಜ್ಯದಲ್ಲಿ ಆವರಿಸಿರುವ ಬರಗಾಲದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರು,ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆಯಾಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಸರ್ಕಾರಿ ಬೋರ್‍ವೆಲ್‍ಗಳಿದ್ದರೂ ಸಮರ್ಪಕ ಪ್ರಮಾಣದಲ್ಲಿ ಕುಡಿ ಯುವ ನೀರು ಪೂರೈಕೆ ಮಾಡಲು ಅನುಕೂಲವಾಗು ವಂತೆ ಖಾಸಗಿ ಬೋರ್‍ವೆಲ್‍ಗಳನ್ನು ಖರೀದಿ ಮಾಡಿ, ಸಮಸ್ಯೆ ನಿವಾರಣೆಯಾಗುವಂತೆ ನೋಡಿಕೊಳ್ಳಿ ಎಂದು ಆದೇಶಿಸಿದರು. ಪರಿಸ್ಥಿತಿ ತೀರಾ ಹದಗೆಟ್ಟ ಕಡೆ ಯಾವ ಮೂಲೆಯಿಂದಲಾದರೂ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿ, ಬೋರ್‍ವೆಲ್ ನೀರು ಸಿಗದಿದ್ದರೆ, ಮೇಲ್ಮೈ ಜಲ ಮೂಲಗಳಿಂದ ನೀರು ಪಡೆದು ಒದಗಿಸಿ. ಜಾನುವಾರುಗಳಿಗೆ ಅಗತ್ಯವಾಗುವಂತೆ ಎಲ್ಲೆಲ್ಲ ಅಗತ್ಯವಾಗುವಂತೆ ಗೋಶಾಲೆ ನಿರ್ಮಿಸಿ.ಯಾವ ರೈತರ ಬಳಿ ಹೆಚ್ಚುವರಿ ಮೇವು ಇದೆಯೋ? ಅದನ್ನು ಅವರಿಂದ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಿ.

ರಾಜ್ಯದಲ್ಲಿ ಬೇಸಿಗೆ ಝಳ ಹೆಚ್ಚಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕು. ಹೀಗಾಗಿ ನಿಮ್ಮ ನಿಮ್ಮ ಜಿಲ್ಲಾ ವ್ಯಾಪ್ತಿಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಿ ಎಂದಿದ್ದಾರೆ. ಹಾಗೆಯೇ ಜನಸಾಮಾನ್ಯರಿಗೆ ತುರ್ತು ಚಿಕಿತ್ಸೆ ಲಭ್ಯವಾಗುವಂತೆ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳೂ ನೋಡಿಕೊಳ್ಳಬೇಕು.ಈ ಎಲ್ಲ ಜವಾಬ್ದಾರಿ ನಿಮ್ಮದು ಎಂದು ಸೂಚಿಸಿದ್ದಾರೆ.

Translate »