ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ
ಮೈಸೂರು

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ

April 30, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿ ದ್ದರೂ, ತೀವ್ರ ತೆರನಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ತಲೆದೋರಿದ್ದು, ಅದನ್ನು ಸಮರ್ಪಕವಾಗಿ ನಿಭಾ ಯಿಸುವಂತೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜಿ. ಕಲ್ಪನಾ ತಿಳಿಸಿದ್ದಾರೆ.

ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಸೂಚನೆಯಂತೆ ಸೋಮವಾರ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳ ಲ್ಲಿಯೂ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಭೆ ನಡೆಸಿ, ಮಾಹಿತಿ ಕಲೆ ಹಾಕುವು ದರೊಂದಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆ ನೀಡಲಾಗುತ್ತದೆ. ಅದರಂತೆ ಇಂದು ಮೈಸೂರು ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲು ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ.17ರಷ್ಟು ಕಡಿಮೆ ಮಳೆಯಾಗಿದೆ. ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಆದರೂ ಆ ಎರಡೂ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಂಡು ಬಂದಿಲ್ಲ. ಮೈಸೂರು ನಗರದಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕೆಲವೆಡೆ ಅಲ್ಪ
ಪ್ರಮಾಣದ ನೀರಿನ ಸಮಸ್ಯೆ ಕಂಡು ಬಂದಿದೆ. ಆದರೂ ಅದನ್ನು ನಿಭಾಯಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅಂತಹ ಗ್ರಾಮಗಳಿಗೆ ತಾತ್ಕಾಲಿಕವಾಗಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ, ಒಡೆದು ಹೋಗಿರುವ ಪೈಪ್‍ಲೈನ್ ದುರಸ್ತಿ, ಕೆಟ್ಟಿರುವ ಬೋರ್‍ವೆಲ್‍ಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ನೀರಿನ ಬವಣೆ ನೀಗಿಸಲು ಜಿಲ್ಲಾಡಳಿತ ಸೂಕ್ತ ರೀತಿ ಸ್ಪಂದಿಸಿದೆ ಎಂದರು.

ಇದಕ್ಕೂ ಮುನ್ನ ಡಾ. ಕಲ್ಪನಾ ಸ್ಥಳೀಯ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆಬೇಸಿಗೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಗೊಳ್ಳದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಸಭೆಯಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮಾತನಾಡಿ, ಕಾವೇರಿ ಮತ್ತು ಕಬಿನಿ ಯಿಂದ ಗ್ರಾಮಾಂತರ ಪ್ರದೇಶಗಳಿಗೂ ನೀರು ಸರಬ ರಾಜು ಮಾಡಲಾಗುತ್ತಿದೆ. ನಗರದ ಮುಡಾ ಬಡಾ ವಣೆಗಳಿಗೂ ನೀರನ್ನು ಹರಿಸಲಾಗುತ್ತಿದೆ. ಹಾಗಾಗಿ ನಗರ ಪ್ರದೇಶPದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ. ನಗರ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಅದಕ್ಕಾಗಿ ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಮೈಸೂರು ನಗರದಲ್ಲಿ ಅಮೃತ್ ಯೋಜನೆ ಶೀಘ್ರ ಅನುಷ್ಠಾನಗೊಂಡರೆ 40 ಎಂಎಲ್‍ಡಿ ನೀರು ದೊರೆಯುತ್ತದೆ. ಇದರಿಂದ ಬಹಳಷ್ಟು ನಗರ ಪ್ರದೇಶ ಹಾಗೂ ನಗರ ಪ್ರದೇಶಗಳಿಗೆ ಹೊಂದಿ ಕೊಂಡಿರುವ ಗ್ರಾಮೀಣ ಪ್ರದೇಶ ಹಾಗೂ ಮುಡಾ ಬಡಾವಣೆಗಳ ನೀರಿನ ಸಮಸ್ಯೆ ಪರಿಹರಿಸಬಹುದು. ಸದ್ಯದ ಮಟ್ಟಿಗೆ ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ಕೆಲವು ಪ್ರದೇಶಗಳಿಗೆ ಎರಡು, ಮೂರು ದಿನಕ್ಕೊಮ್ಮೆ ನೀರು ಕೊಡುತ್ತಿದ್ದೇವೆ ಎಂದು ಹೇಳಿದರು.

ತಾ.ಪಂ ಇಒ ಲಿಂಗರಾಜಯ್ಯ ಮಾತನಾಡಿ, ಹಿನಕಲ್, ಹೂಟಗಳ್ಳಿ, ದಟ್ಟಗಳ್ಳಿ, ತಾವರೆಕಟ್ಟೆ, ಬೀರಿಹುಂಡಿ, ಹೌಸಿಂಗ್ ಬೋರ್ಡ್ ಕಾಲೋನಿ ಸೇರಿದಂತೆ ಕೆಲವೆಡೆ ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಬತ್ತಿ ಹೋಗಿರುವ ಬೋರ್‍ವೆಲ್‍ಗಳಿಗೆ ರೀಡ್ರಿಲ್ ಮಾಡಿಸಲಾಗುತ್ತಿದೆ. ಇದರಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆ. ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ಈಗಾಗಲೇ ನೀರು ಪೂರೈಸಲಾಗುತ್ತಿದೆ. ಎಲ್ಲಾ ಪ್ರದೇಶಕ್ಕೂ ಎರಡೆರಡು ಟ್ಯಾಂಕ್ ಹೆಚ್ಚುವರಿಯಾಗಿ ನೀರು ಸರಬರಾಜು ಮಾಡಿದರೆ ಸಮಸ್ಯೆ ನೀಗಿಸಬಹುದು. ಹೂಟಗಳ್ಳಿ ಸೇರಿದಂತೆ ನೀರು ಸಮಸ್ಯೆ ಇರುವ ಪ್ರದೇಶಗಳಲ್ಲಿ ಟ್ಯಾಂಕ್(ನೀರು ಸಂಗ್ರಹಗಾರ)ಗಳಿಲ್ಲದ ಕಾರಣ ಪೈಪ್‍ಲೈನ್ ಮೂಲಕ ಬಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕ್‍ಗಳಿದ್ದರೆ ನೀರನ್ನು ಸಂಗ್ರಹಿಸಿ ಅಗತ್ಯಕ್ಕನುಸಾರ ಸರಬರಾಜು ಮಾಡಬಹು ದಾಗಿತ್ತು ಎಂದು ಅಭಿಪ್ರಾಯಪಟ್ಟರು. ವಾಣಿವಿಲಾಸ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಜಿ.ಹರೀಶ್ ಮಾತನಾಡಿ, ಕಬಿನಿ ಯೋಜನೆಯಿಂದ ಮೊದಲು 32 ಹಳ್ಳಿಗಳಿಗೆ ನೀರು ಕಲ್ಪಿಸುವ ಉದ್ದೇಶವಿತ್ತು. ಈಗ ಅದನ್ನು 42 ಗ್ರಾಮಗಳಿಗೆ ವಿಸ್ತರಿಸಲು ತಳ್ಳೂರು-ಬಿದರಗೂಡು ಕಡೆಯಿಂದ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದೆ. ಇದು ಮುಗಿದರೆ 6.5 ಎಂಎಲ್‍ಡಿ ನೀರು ಸಿಗಲಿದ್ದು, ಬೀರಿಹುಂಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ ನೀಗಲಿದೆ ಎಂದು ತಿಳಿಸಿದರು.

Translate »