ಹಾಸನದಲ್ಲಿ 7 ಅಂತಸ್ತಿನ ಅಕ್ರಮ ಕಟ್ಟಡ ತೆರವಿಗೆ ಡಿಸಿ ಸೂಚನೆ
ಹಾಸನ

ಹಾಸನದಲ್ಲಿ 7 ಅಂತಸ್ತಿನ ಅಕ್ರಮ ಕಟ್ಟಡ ತೆರವಿಗೆ ಡಿಸಿ ಸೂಚನೆ

July 24, 2018

ಹಾಸನ:  ನಗರ ಹೃದಯ ಭಾಗದ ಎನ್‍ಡಿಆರ್‍ಕೆ ಆಸ್ಪತ್ರೆ ಸಮೀಪ ಅಕ್ರಮವಾಗಿ ನಿರ್ಮಾಣವಾಗುತ್ತಿದ್ದ ಬೃಹತ್ ವಾಣಿಜ್ಯ ಕಟ್ಟಡ ತೆರವುಗೊಳಿಸಿ, ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನಿರ್ದೇಶಿಸಿದ್ದು, ಅದರಂತೆ ನಗರಸಭೆ ಆಯುಕ್ತ ಪರಮೇಶ್ ಅವರಿಂದು ಆದೇಶ ಹೊರಡಿಸಿದ್ದಾರೆ.

ನಗರದ ವಾರ್ಡ್ ನಂ.1ರ ಆಸ್ತಿ ಸಂಖ್ಯೆ 104ರಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡ(9859 ಚ.ಅಡಿ) ಎನ್.ಲೀಲಾಕುಮಾರ್ ಎಂಬುವವರಿಗೆ ಸೇರಿದ್ದು, ನಗರಸಭೆಯ ನಿಯಮಗಳ ಉಲ್ಲಂಘನೆ ಹಾಗೂ ಸ್ಥಳ ಒತ್ತುವರಿ ಮಾಡಿರುವ ಕುರಿತು ಸಾರ್ವಜನಿಕರು ದೂರಿದ್ದರು. ಮಾಹಿತಿ ಆಧರಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶನಿವಾರ (ಜು.21) ನಗರಸಭೆ ಆಯುಕ್ತರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ಈ ವೇಳೆ ಕಟ್ಟಡ ಮಾಲೀಕ ಯಾವುದೇ ದಾಖಲೆ ನೀಡದೆ ಹಾಗೂ ನಗರಸಭೆಯ ನಿಯಮಗಳನ್ನು ಗಾಳಿಗೆ ತೂರಿ, ಪರವಾನಗಿ ಪಡೆಯದೆ ಅಕ್ರಮವಾಗಿ 7 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿರುವುದು ದೃಢಪಟ್ಟಿತು. ಅಲ್ಲದೆ ನಗರಸಭೆ ಕೆಲ ಅಧಿಕಾರಿಗಳು ಕಟ್ಟಡ ಮಾಲೀಕರೊಂದಿಗೆ ಶಾಮೀಲಾಗಿರುವುದು ತಿಳಿದು ಬಂತು. ಈ ಹಿನ್ನೆಲೆ ಜಿಲ್ಲಾಧಿಕಾರಿ ಕೂಡಲೇ ಕಟ್ಟಡ ತೆರವುಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ನಿರ್ದೇಶನ ನೀಡಿದ್ದರು. ಕಟ್ಟಡ ತೆರವಿಗೆ ಆಗುವ ಖರ್ಚನ್ನು ಕಟ್ಟಡ ಮಾಲೀಕರಿಂದ ದಂಡದ ರೂಪದಲ್ಲಿ ವಸೂಲು ಮಾಡುವಂತೆಯೂ ಇದೇ ವೇಳೆ ಆದೇಶಿಸಿದ್ದರು. ಅದರಂತೆ ಇಂದು 7 ಅಂತಸ್ತಿನ ಕಟ್ಟಡ ತೆರವುಗೊಳಿಸಲು ನಗರಸಭೆ ಆಯುಕ್ತ ಪರಮೇಶ್ ಆದೇಶ ಹೊರಡಿಸಿದ್ದಾರೆ.

ಮಾಲೀಕ ಎನ್.ಲೀಲಾಕುಮಾರ್ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೂ ಮುನ್ನ ಪರವಾನಗಿ ಪಡೆಯದೆ ಕಾಮಗಾರಿ ಆರಂಭಿಸಿದ್ದು, ಕರ್ನಾಟಕ ಮುನಿಸಿಪಲ್ ಆಕ್ಟ್ 1964ರ ಸೆಕ್ಷನ್ 187ರಡಿ 915.93 ಚ.ಮೀ.(9,859 ಚ.ಅಡಿ)ನ 7ಅಂತಸ್ತಿನ ಕಟ್ಟಡ ತೆರವುಗೊಳಿಸಲು ನಗರಸಭೆ ಅಭಿಯಂತರರಿಗೆ ಆಯುಕ್ತರು ಸೂಚನೆ ರವಾನಿಸಿದ್ದಾರೆ.

ಯಾವುದೇ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿದ್ದ ಬೃಹತ್ ಕಟ್ಟಡಕ್ಕೆ ಡಿಸಿ ಕಟ್ಟುನಿಟ್ಟಿನ ಸೂಚನೆ ಶಾಪವಾಗಿ ಪರಿಣಮಿಸಿದ್ದು, ಶೀಘ್ರವೇ ಕಟ್ಟಡ ತೆರವು ಗೊಳಿಸುವ ಕಾರ್ಯಾಚರಣೆ ಆರಂಭಿಸುವುದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇಂತಹ ಅಕ್ರಮ ಕಟ್ಟಡ ತೆರವಿಗೆ ಜಿಲ್ಲಾಧಿಕಾರಿಗಳು ನೀಡಿರುವ ಸೂಚನೆ ಇತರ ಅಕ್ರಮ ಕಟ್ಟಡಗಳಿಗೂ ಅನ್ವಯವಾದರೆ ಮುಂದಿನ ದಿನಗಳಲ್ಲಿ ಇಂತಹ ಅದೆಷ್ಟೊ ಬೃಹತ್ ಕಟ್ಟಡಗಳು ನೆಲಸಮವಾಗವಾಗಲಿದೆ ಎಂಬ ಭಯ ನಗರಸಭೆ ನಿಯಮ ಉಲ್ಲಂಘಿಸಿದರಲ್ಲಿದ್ದು, ಜಿಲ್ಲಾಧಿಕಾರಿ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Translate »