ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ ಹಾವಳಿ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಪ್ರವಾಹ ಹಾವಳಿ

August 10, 2019

ಮೈಸೂರು,ಆ.9(ಆರ್‍ಕೆ)-ಕೊಡಗು ಹಾಗೂ ವೈನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿರುವುದ ರಿಂದ ಮೈಸೂರು ಜಿಲ್ಲೆಯಾದ್ಯಂತ ಪ್ರವಾಹ ಮುಂದುವರೆದಿದೆ.

ಕಬಿನಿ, ಹಾರಂಗಿ ಹಾಗೂ ತಾರಕ ಜಲಾಶಯ ಗಳಿಂದ ಭಾರೀ ಪ್ರಮಾಣದ ನೀರನ್ನು ನದಿಗಳಿಗೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ಈ ಮಾರ್ಗ ವಾಹನ ಸಂಚಾರ ಸ್ಥಗಿತಗೊಂಡಿದೆ.

ಹಾಗಾಗಿ ಮೈಸೂರಿನಿಂದ ಹೊರಡುವ ಬಸ್ಸು ಹಾಗೂ ಇತರ ವಾಹನಗಳು, ತಿ.ನರಸೀಪುರ ರಸ್ತೆ ಯಲ್ಲಿ ಸಾಗಿ ವರುಣ, ಕುಪ್ಪೆಗಾಲ, ತಾಯೂರು ಮೂಲಕ ನಂಜನಗೂಡು ತಲುಪಿ ಮುಂದೆ ಸಾಗಲು ಬದಲು ಮಾರ್ಗ ವ್ಯವಸ್ಥೆ ಮಾಡಲಾಗಿದೆ.

ನಂಜನಗೂಡು ಸಮೀಪ ಕಪಿಲಾ ನದಿ ತುಂಬಿ ಹರಿಯುತ್ತಿರುವುದರಿಂದ ನೀರು ಸೇತುವೆ ಮೇಲೆ ಹೆದ್ದಾರಿ ಮಟ್ಟದಲ್ಲಿರುವ ಮಲ್ಲನಮೂಲೆ ಬಳಿ ಅಪಾಯ ಪರಿಸ್ಥಿತಿ ಉಂಟಾಗಿದ್ದು, ಸುರಕ್ಷತಾ ಕ್ರಮವಾಗಿ ನಂಜನಗೂಡು ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಆದೇಶ ಹೊರಡಿಸಿದ್ದಾರೆ.

ಅದೇ ರೀತಿ ಹೆಜ್ಜಿಗೆ ಸೇತುವೆ, ರಾಂಪುರ ಬ್ರಿಡ್ಜ್, ಸುತ್ತೂರು ಬಳಿಯ ಸೇತುವೆಗಳೂ ನೀರಿ ನಿಂದಾ ವೃತವಾಗಿರುವುದರಿಂದ ಮಾರ್ಗಗಳಲ್ಲೂ ವಾಹನ ಸಂಚಾರ ಬಂದ್ ಮಾಡಿ ಮಾರ್ಗ ಬದಲಿಸಲಾಗಿದೆ.

ಅದೇ ರೀತಿ ಹೆಚ್.ಡಿ.ಕೋಟೆ ತಾಲೂಕಿನ ಸರಗೂರು -ತಿಂಡಸೋಗೆ ರಸ್ತೆಯ ಸೇತುವೆ ಕುಸಿದಿದ್ದು, ಹೆಚ್.ಡಿ.ಕೋಟೆ-ಹ್ಯಾಂಡ್‍ಪೋಸ್ಟ್ ರಸ್ತೆಯೂ ಜಲಾವೃತಗೊಂಡಿದೆ. ಹ್ಯಾಂಡ್ ಪೋಸ್ಟ್-ಸರಗೂರು ರಸ್ತೆ, ತುಂಬಸೋಗೆ, ಮಾದಾಪುರ, ಚೆಕ್ಕೂರು, ಹೊಮ್ಮರಗಳ್ಳಿ, ಎಂಸಿ ತಳಲು ಹಾಗೂ ಹೊಸ ಕೋಟೆ ರಸ್ತೆಯ ಸೇತುವೆ ಗಳೂ ಸಹ ನೀರಿನಿಂದ ಮುಳುಗಡೆ ಯಾಗಿವೆ. ಹುಣಸೂರು ತಾಲೂಕಿನ ಹನಗೋಡು -ಬಿಲ್ಲ ಹೊಸಹಳ್ಳಿ ರಸ್ತೆ, ಅಬ್ಬೂರು, ನಿಲುವಾಗಿಲು, ಶಿಂಡೇನ ಹಳ್ಳಿ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಹುಣಸೂರು-ಹನಗೂಡು ರಸ್ತೆ, ಹನಗೂಡು-ಕಿರಂಗೂರು ಸೇತುವೆ ಮುಳುಗಡೆಯಾಗಿದ್ದು ಅಲ್ಲಿನ ಜಮೀನುಗಳೂ ಸಹ ಜಲಾವೃತಗೊಂಡಿರುವುದಲ್ಲದೆ, ಅಬ್ಬರು, ನೇಗತ್ತೂರು, ಬಿಲ್ಲೇನ ಹೊಸಹಳ್ಳಿ ಗ್ರಾಮ ಗಳಿಗೆ ನೀರು ನುಗ್ಗಿರುವುದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬೋಟ್‍ಗಳನ್ನು ಬಳಸಿ ಸ್ಥಳಾಂತರಿಸಲಾಗಿದೆ.

ಮಹಾ ಮಳೆಗೆ ಪಿರಿಯಾಪಟ್ಟಣ ತಾಲೂಕಿನಾ ದ್ಯಂತ ಪ್ರವಾಹ ಉಂಟಾಗಿದ್ದು, ಕೊಪ್ಪ-ಗೋಲ್ಡನ್ ಟೆಂಪಲ್ ರಸ್ತೆ ಸಂಚಾರ ಬಂದ್ ಮಾಡಿ ಚಿಕ್ಕೊ ಸೂರು ರಸ್ತೆ ಮೂಲಕ ಮಾರ್ಗ ಬದಲಿಸಲಾಗಿದೆ. ಆವರ್ತಿ, ಕೊಪ್ಪ, ದಿಂಡಗಾಡು ರಸ್ತೆಗಳಿಗೂ ಬದಲಿ ಮಾರ್ಗ ಕಲ್ಪಿಸಲಾಗಿದೆ.

ಸಂತ್ರಸ್ತರಿಗಾಗಿ ನಂಜನಗೂಡಿನ ಗಿರಿಜಾ ಕಲ್ಯಾಣ, ಸೀತಾರಾಮ ಕಲ್ಯಾಣ, ರಾಜಾಜೀ ಕಾಲೋನಿ, ಅಂಗನವಾಡಿ ಕೇಂದ್ರ ಬೊಕ್ಕಹಳ್ಳಿ ಸರ್ಕಾರಿ ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಧಿಕಾರಿಗಳು ಅವರಿಗೆ ನೆರವು ನೀಡುತ್ತಿದ್ದಾರೆ.

ಹೆಚ್.ಡಿ.ಕೋಟೆಯ ಮಚ್ಚೂರು, ಡಿಬಿ.ಕುಪ್ಪೆ, ಹೆಚ್.ಡಿ.ಕೋಟೆ ಟೌನಿನ ಡಾ.ಅಂಬೇಡ್ಕರ್ ಭವನ ದಲ್ಲಿ, ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಶಾಲೆ ಸೇರಿದಂತೆ ಪ್ರವಾಹ ಭೀತಿ ಎದುರಿಸುತ್ತಿರುವ ಸ್ಥಳ ಗಳಲ್ಲೂ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ನಿರಂತರ ಮಳೆಯಿಂದಾಗಿ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ವ್ಯಾಪಾರ ವಹಿವಾಟುಗಳಿಗೆ ತೊಂದರೆಯಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಸೇತುವೆಗಳು ಕುಸಿದಿರುವುದರಿಂದ ಮೈಸೂರಿನಿಂದ ಕೇರಳಕ್ಕೆ ಸಾರಿಗೆ ಸಂಸ್ಥೆ ಬಸ್ ಸಂಚಾರ ರದ್ದುಗೊಳಿಸಿದ್ದು, ಈಗಾಗಲೇ ಕೇರಳಗೆ ಹೋಗಿರುವ ನಾಲ್ಕು ಬಸ್ಸುಗಳು ವಾಪಸ್ಸಾಗದೇ ಬರಲಾಗಿದೆ ಅಲ್ಲೇ ಉಳಿದಿವೆ ಎಂದು ಕೆಎಸ್ ಆರ್‍ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಸಂತ್ರಸ್ತರ ಆರೋಗ್ಯ ಕಾಪಾಡಲು ಮೈಸೂರು ಜಿಲ್ಲೆಯಲ್ಲಿ 13 ವೈದ್ಯರ ತಂಡ ಸಜ್ಜು
ಮೈಸೂರು,ಆ.9(ಎಂಟಿವೈ)-ಮೈಸೂರು ಜಿಲ್ಲೆ ಹಾಗೂ ಕೇರಳದ ವೈನಾಡ್‍ನಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಪಿಲಾ ಹಾಗೂ ಕಾವೇರಿ ನದಿ ಅಪಾಯ ಪ್ರಮಾಣ ದಲ್ಲಿ ಉಕ್ಕಿ ಹರಿಯುತ್ತಿದ್ದು, ನೀರಿನಿಂದ ಅನಾ ಹುತಕ್ಕೆ ಸಿಲುಕಿದವರ ಆರೋಗ್ಯ ರಕ್ಷಣೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯಲ್ಲಿ 13 ವೈದ್ಯರ ತಂಡ ರಚಿಸಿದೆ.

ನೆರೆ ಹಾವಳಿಯಿಂದ ಹೆಚ್.ಡಿ.ಕೋಟೆ, ಪಿರಿಯಾ ಪಟ್ಟಣ, ಹುಣಸೂರು, ಕೆ.ಆರ್.ನಗರ, ನಂಜನ ಗೂಡು, ಟಿ.ನರಸೀಪುರ ತಾಲೂಕುಗಳಲ್ಲಿ ಹಲವೆಡೆ ನೀರು ನುಗ್ಗಿದ್ದು, ನೂರಾರು ಕುಟುಂಬ ಗಳು ಸಂತ್ರಸ್ಥರಾಗಿವೆ. ಈ ಹಿನ್ನೆಲೆಯಲ್ಲಿ ನೆರೆ ಯಿಂದ ಜನರ ಆರೋಗ್ಯದ ಮೇಲಾಗುವ ದುಷ್ಪರಿಣಾಮ ತಡೆಯಲು ಆರೋಗ್ಯ ಇಲಾಖೆ ಒಟ್ಟು 13 ತಂಡಗಳನ್ನು ರಚಿಸಿದೆ. ಹೆಚ್.ಡಿ. ಕೋಟೆ ತಾಲೂಕಿನಲ್ಲಿ ನೆರೆ ಸಂತ್ರಸ್ಥರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಅವರ ನೇತೃತ್ವದಲ್ಲಿ ಆರೋಗ್ಯ ವೈದ್ಯರ ತಂಡ ಕಾರ್ಯೋನ್ಮುಖವಾಗಿದ್ದು, ವೈದ್ಯಾಧಿಕಾರಿಗಳಾದ ಡಾ.ಸಲೀಂ ನೇತೃತ್ವದಲ್ಲಿ ಒಂದು ತಂಡ ಡಿ.ಬಿ. ಕುಪ್ಪೆ, ಡಾ.ಮೋಹನ್ ನೇತೃತ್ವದಲ್ಲಿ ಮಚ್ಚೂರು, ಡಾ.ಹೇಮಲತಾ ನೇತೃತ್ವದಲ್ಲಿ ಹೆಚ್.ಮಟಗೇರಿ ವೈದ್ಯರ ತಂಡ ಸೇವೆ ಒದಗಿಸಲು ಸಜ್ಜಾಗಿವೆ. ಈ ತಂಡಕ್ಕೆ ನೀಡಲಾಗಿರುವ ಮೂರು ಆಂಬ್ಯು ಲೆನ್ಸ್‍ನೊಂದಿಗೆ ಹೆಚ್ಚುವರಿಯಾಗಿ ಮೂರು ಆಂಬ್ಯುಲೆನ್ಸ್ ಅನ್ನು ಆಯಾಕಟ್ಟಿನ ಸ್ಥಳದಲ್ಲಿ ಸಂತ್ರಸ್ಥರ ನೆರವಿಗಾಗಿ ಅಣಿಗೊಳಿಸಲಾಗಿದೆ. ಈ ಕುರಿತಂತೆ ತಾಲೂಕು ವೈದ್ಯಾಧಿಕಾರಿ ಡಾ.ಟಿ.ರವಿ ಕುಮಾರ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಎಲ್ಲಾ ವೈದ್ಯರ ತಂಡ ಹಾಗೂ ಆಂಬ್ಯು ಲೆನ್ಸ್‍ಗಳಲ್ಲಿ ಶೀತ, ಜ್ವರ, ಮೈ-ಕೈ ನೋವು, ಸಾಂಕ್ರಮಿಕ ರೋಗಗಳು ಹರಡಿದರೆ ಬೇಕಾಗುವ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಇದುವರೆಗೂ ಅನಾರೋಗ್ಯಕ್ಕೀಡಾಗಿರುವ ಯಾವುದೇ ಪ್ರಕರಣಗಳು ಚಿಕಿತ್ಸೆಗೆ ಬಂದಿಲ್ಲ. ಆದರೂ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸನ್ನದ್ಧವಾಗಿದ್ದೇವೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಮಾತನಾಡಿ, ಪಿರಿಯಾ ಪಟ್ಟಣ, ಹುಣಸೂರು, ಕೆ.ಆರ್.ನಗರದ ಕೆಲವೆಡೆ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿ ನೀರಿನಿಂದ ಸಮಸ್ಯೆಯಾಗಿದೆ. ಕಪಿಲಾ ನದಿಯಿಂದ ಹೆಚ್.ಡಿ.ಕೋಟೆ, ನಂಜನಗೂಡು ತಾಲೂಕಿನಲ್ಲಿ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಮೂರು ಹಾಗೂ ಉಳಿದ ತಾಲೂಕಿನಲ್ಲಿ ತಲಾ ಎರಡೆರಡು ವೈದ್ಯರ ತಂಡ ನಿಯೋಜಿಸ ಲಾಗಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಕಂಡು ಬರುವ ಆನಾರೋಗ್ಯ ಸಮಸ್ಯೆಗೆ ಬೇಕಾದ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ಎಲ್ಲಾ ತಾಲೂಕುಗಳಿಗೂ ರವಾನಿಸಲಾಗಿದೆ. ಇದು ವರೆಗೂ ಒಂದೇ ಒಂದು ಪ್ರಕರಣವೂ ಆಸ್ಪತ್ರೆ ಗಳಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

Translate »