ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ ಮೃತದೇಹಕ್ಕಾಗಿ ಮುಂದುವರೆದ ಶೋಧ
ಮೈಸೂರು

ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ ಮೃತದೇಹಕ್ಕಾಗಿ ಮುಂದುವರೆದ ಶೋಧ

August 21, 2018

ಮೈಸೂರು: ಗೆಳೆಯರೊಂದಿಗೆ ಈಜಲು ಹೋಗಿ ಬಾಲಕನೋರ್ವ ಪಂಪ್‍ಹೌಸ್ ಸಮೀಪದ ವರುಣಾ ನಾಲೆಯಲ್ಲಿ ನೀರು ಪಾಲಾಗಿರುವ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ಮೇಟಗಳ್ಳಿ ನಿವಾಸಿ ಸುಧಾಕರ್ ಶೆಟ್ಟಿ ಅವರ ಮಗ ಗಗನ್(16) ವರುಣಾ ನಾಲೆಯಲ್ಲಿ ನೀರುಪಾಲಾದ ಬಾಲಕ. ಮೇಟಗಳ್ಳಿಯ ಕುವೆಂಪು ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಗಗನ್ ಶನಿವಾರ ಶಾಲೆ ಬಿಟ್ಟ ನಂತರ ಮನೆಗೆ ಹಿಂದಿರುಗಿ ವಾಲಿಬಾಲ್ ಆಟ ಆಡುತ್ತೇನೆಂದು ಹೇಳಿ ಸಹೋದರ ಸುಜನ ಹಾಗೂ ಇತರ 5 ಮಂದಿ ಗೆಳೆಯರೊಂದಿಗೆ ಹೊರಗೆ ಹೋಗಿದ್ದ. ಸ್ಕೂಟರ್‍ಗಳಲ್ಲಿ ಕೆಆರ್‍ಎಸ್ ರಸ್ತೆಯ ಬೆಳಗೊಳ ಪಂಪ್‍ಹೌಸ್ ಬಳಿ ವರುಣಾ ನಾಲೆಯಲ್ಲಿ ಈಜಲು ಇಳಿದಿದ್ದರು. ಮಧ್ಯಾಹ್ನ ಗಗನ್ ನೀರಿನಲ್ಲಿ ಕಣ್ಮರೆಯಾದ ಎಂದು ಸಹೋದರ ಸುಜನ ಪೋಷಕರಿಗೆ ತಿಳಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಆತನ ಪೋಷಕರು, ಸಂಬಂಧಿಕರೆಲ್ಲರೂ ಕಾಲುವೆಯಲ್ಲಿ ಶೋಧಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಆರ್‍ಎಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಬ್ಯಾಟರಾಯಗೌಡ, ಈಜು ತಜ್ಞರನ್ನು ಕರೆಸಿ ಉತ್ತನಹಳ್ಳಿವರೆಗೂ ಶೋಧ ನಡೆಸಿದರೂ ಮೂರು ದಿನ ಕಳೆದರೂ ಗಗನ್ ಮೃತದೇಹ ಪತ್ತೆಯಾಗಲಿಲ್ಲ.

ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಗಗನ್ ಮೃತದೇಹ ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. ಮೈಸೂರು ಸೌತ್ ಪೊಲೀಸ್ ಠಾಣೆ ಮತ್ತು ವರುಣಾ ಠಾಣಾ ಪೊಲೀಸರಿಗೂ ಗಗನ್ ಭಾವಚಿತ್ರ ಕೊಟ್ಟು ಶೋಧ ನಡೆಸುವಂತೆ ಕೆಆರ್‍ಎಸ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಬಾಲಕನ ಕಡೆಯವರೂ ಮೂರು ದಿನಗಳಿಂದ ನಾಲಾ ಉದ್ದಕ್ಕೂ ಶೋಧ ನಡೆಸುತ್ತಿದ್ದಾರೆ. ಬಾಲಕ ಜೀವಂತವಾಗಿಯಾಗಲೀ ಅಥವಾ ಮೃತದೇಹವಾಗಲೀ ಪತ್ತೆಯಾದಲ್ಲಿ ಕೆಆರ್‍ಎಸ್ ಪೊಲೀಸ್ ಠಾಣೆ(08236257233) ಅಥವಾ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್(9480804856)ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

Translate »