ವರುಣಾ ನಾಲೆಗೆ ನವೀಕರಣ ಭಾಗ್ಯ
ಮೈಸೂರು

ವರುಣಾ ನಾಲೆಗೆ ನವೀಕರಣ ಭಾಗ್ಯ

July 17, 2018
  • 75 ಕೋಟಿ ವೆಚ್ಚದಲ್ಲಿ 3 ಪ್ಯಾಕೇಜ್‍ಗಳಲ್ಲಿ ಕಾಮಗಾರಿ

ಮೈಸೂರು: ಮೈಸೂರಿನ ನಾಲ್ಕು ಹಾಗೂ ಮಂಡ್ಯದ ಒಂದು ತಾಲೂಕು ಸೇರಿ ಐದು ತಾಲೂಕುಗಳ ಕೃಷಿಭೂಮಿಗೆ ನೀರುಣಿಸುತ್ತಿರುವ ವರುಣಾ ನಾಲೆಯ ನವೀಕರಣ ಕಾಮಗಾರಿ ಆರಂಭಗೊಂಡಿದ್ದು, ಕೃಷಿ ಭೂಮಿಗೆ ಸಮರ್ಪಕ ನೀರು ದೊರೆಯುವ ವಿಶ್ವಾಸ ಮೂಡಿದೆ.

ವರುಣಾ ನಾಲೆಯು 82 ಗ್ರಾಮಗಳ ಕೃಷಿ ಭೂಮಿಗೆ ಜೀವಸೆಲೆಯಾಗಿದೆ. ಇದರ ನಿರ್ಮಾಣಕ್ಕೆ 1979ರಲ್ಲಿ ಚಾಲನೆ ನೀಡಲಾಗಿತ್ತು. ನಿರ್ಮಾಣಗೊಂಡ ಬಳಿಕ ರೈತರ ನೀರಾವರಿ ಕೃಷಿ ಚಟುವಟಿಕೆಗಳಿಗೆ ಆಸರೆಯಾಗಿ ಹೊಸ ಭರವಸೆ ಮೂಡಿಸಿದ್ದ ವರುಣಾ ನಾಲೆ ಕಾಲ ಕಳೆದಂತೆ ಅಲ್ಲಲ್ಲಿ ಶಿಥಿಲಗೊಂಡು, ನೀರು ಹಿಂಗುವುದು ಇಲ್ಲವೇ ಸೋರಿಕೆ ಆಗುವ ಮೂಲಕ ನಿರ್ದಿಷ್ಟ ಅಂತರಕ್ಕೆ ತಲುಪದೇ ರೈತರನ್ನು ಕಂಗಾಲಾಗಿಸಿತ್ತು.

ಇದೀಗ ಇದೇ ಮಾರ್ಚ್‍ನಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಹಾಗೂ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ. ಒಟ್ಟು ಮೂರು ಹಂತಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಕೆಆರ್‌ಎಸ್‌ ಜಲಾಶಯದಿಂದ 25 ಕಿ.ಮೀ.ವರೆಗೆ, 26ರಿಂದ 45 ಕಿ.ಮೀ.ವರೆಗೆ ಹಾಗೂ 49ರಿಂದ 75 (46 ಕಿ.ಮೀ.ನಿಂದ 48 ಕಿ.ಮೀ.ವರೆಗೆ ಸುಸ್ಥಿತಿಯಲ್ಲಿರುವ ಕಾರಣ ಕಾಮಗಾರಿಯಿಂದ ಹೊರಗಿಡಲಾಗಿದೆ) ಕಿ.ಮೀ.ವರೆಗೆ ಹಾನಿಗೀಡಾಗಿರುವ ಭಾಗಗಳನ್ನು ಗುರುತಿಸಿ ದುರಸ್ಥಿ ಹಾಗೂ ನವೀಕರಣಕ್ಕೆ ಚಾಲನೆ ನೀಡಲಾಗಿದೆ.

ಕಾವೇರಿ ನೀರಾವರಿ ನಿಗಮದ ಉಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ನಾಲೆಯ ಪ್ರಾರಂಭದಿಂದ 25 ಕಿ.ಮೀ.ವರೆಗೆ ಹಾಗೂ 26ರಿಂದ 45 ಕಿ.ಮೀ.ವರೆಗೆ ತಲಾ 21 ಕೋಟಿ ರೂ. ವೆಚ್ಚ ಮತ್ತು 49ರಿಂದ 75 ಕಿ.ಮೀ.ವರೆಗೆ 24.8 ಕೋಟಿ ರೂ. ವೆಚ್ಚ ಸೇರಿದಂತೆ ಒಟ್ಟಾರೆ 75 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ದುರಸ್ಥಿಗೆ ಅಗತ್ಯವಿರುವ ಭಾಗಗಳನ್ನು ಗುರುತಿಸಿ ಮೂರು ಪ್ಯಾಕೇಜ್‍ಗಳಲ್ಲಿ ಕಾಮಗಾರಿಯ ರೂಪುರೇಷೆ ಸಿದ್ಧಪಡಿಸಲಾಗಿದೆ.

ನಾಲೆ ಆರಂಭವಾಗುವ ಕೆಆರ್‍ಎಸ್ ಜಲಾಶಯದಿಂದ 25 ಕಿ.ಮೀ.ವರೆಗೆ ರಮ್ಮನಹಳ್ಳಿ ಸಮೀಪಕ್ಕೆ ಬರಲಿದೆ. ಈ ವ್ಯಾಪ್ತಿಯಲ್ಲಿ 12.7 ಕಿ.ಮೀ. ಹಾನಿಯಾಗಿದೆ ಎಂದು ಗುರುತಿಸಲಾಗಿದ್ದು, ಶೇ.60ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದೆ ಎನ್ನುತ್ತಾರೆ ವರುಣಾ ನಾಲೆ ಉಪವಿಭಾಗ 4ರ ಎಇಇ ಡಿ.ಕುಮಾರಸ್ವಾಮಿ. ಅದೇ ರೀತಿ 26ರಿಂದ 45 ಕಿ.ಮೀ. ಭಾಗದಲ್ಲೂ (ರಮ್ಮನಹಳ್ಳಿಯಿಂದ ಮಾದಾಪುರದವರೆಗೆ) 13.86 ಕಿ.ಮೀ. ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಗುರುತಿಸಿ ಕಾಮಗಾರಿ ನಡೆಸಿದ್ದು, ಕಾಮಗಾರಿ ಬಹುತೇಕ ಪೂರ್ಣಗೊಂಡು 2.2 ಕಿ.ಮೀ. ವ್ಯಾಪ್ತಿಯಷ್ಟು ಬಾಕಿ ಉಳಿದಿದೆ. ಅಂತೆಯೇ 49ರಿಂದ 75 ಕಿ.ಮೀ.ವರೆಗೆ (ಹೊಸಹುಂಡಿ ಗ್ರಾಮದಿಂದ ದೊಡ್ಡಕಾಟೂರು ಗ್ರಾಮದವರೆಗೆ) 21.70 ಕಿ.ಮೀ. ಹಾನಿಯಾಗಿದ್ದು, ಒಂದು ವಾರದಲ್ಲಿ 2.4 ಕಿ.ಮೀ.ವರೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ವರುಣಾ ನಾಲೆಯ ಒಟ್ಟು ಉದ್ದ 126 ಕಿ.ಮೀ. ಆಗಿದ್ದು, ಒಟ್ಟು ಅಚ್ಚುಕಟ್ಟು 32375 ಹೆಕ್ಟೆರ್‍ನಷ್ಟಿದೆ. ನೀರಿನ ಹರಿವು 980 ಕ್ಯೂಸೆಕ್ಸ್ ಇದ್ದು, ಒಟ್ಟು 82 ಹಳ್ಳಿಗಳ ಕೃಷಿ ಭೂಮಿಗೆ ನೀರು ಹರಿಸುತ್ತಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ 3056 ಹೆಕ್ಟೆರ್, ಮೈಸೂರು ತಾಲೂಕಿನ 18,235 ಹೆಕ್ಟೆರ್, ತಿ.ನರಸೀಪುರ ತಾಲೂಕಿನ 3085 ಹೆಕ್ಟೆರ್ ಸೇರಿದಂತೆ ನಂಜನಗೂಡು ಹಾಗೂ ಹೆಚ್‍ಡಿ ಕೋಟೆ ತಾಲೂಕಿನ ಹಲವು ಕೃಷಿ ಭೂಮಿ ಈ ನಾಲೆಯ ನೀರಾವರಿಗೆ ಪ್ರದೇಶಕ್ಕೆ ಒಳಪಟ್ಟಿದೆ. ಕೆಆರ್‍ಎಸ್ ಜಲಾಶಯದಿಂದ ಬೆಳಗೊಳ, ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರ ಹಾಗೂ ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಸಮೀಪದ ನಾಲೆಗೆ ಮೇಲ್ಸೇತುವೆ ನಿರ್ಮಿಸಿದ್ದು, ಒಟ್ಟು 126 ಕಿ.ಮೀ. ಉದ್ದದ ನಾಲೆಯಲ್ಲಿ ಈ ರೀತಿ 1.8 ಕಿ.ಮೀ. ಮೇಲ್ಸೇತುವೇ ಇದೆ. ಜು.20ರ ಬಳಿಕ ವರುಣಾ ನಾಲೆಗೆ ನೀರು ಹರಿಸುವ ಸಾಧ್ಯತೆ ಇದ್ದು, ಮತ್ತೆ ನೀರು ನಿಲ್ಲಿಸುವವರೆಗೆ ಕಾಮಗಾರಿ ಸ್ಥಗಿತಗೊಳ್ಳಲಿದೆ.

ಡಿ.ದೇವರಾಜ ಅರಸು ನಾಲೆಯೂ ಹೌದು

ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಅರಸು ಅವರ ಕನಸಿನ ಕೂಸಾಗಿ ವರುಣಾ ನಾಲೆ ನಿರ್ಮಾಣವಾಯಿತು. ಹೀಗಾಗಿ ಇದಕ್ಕೆ ಈಗಲೂ ದೇವರಾಜ ಅರಸು ನಾಲೆ ಎಂಬ ಹೆಸರೇ ಇದೆ. ಆದರೆ ನಾಲೆಯ ಕಾಮಗಾರಿ ಚುರುಕುಗೊಳಿಸಿ ಒಂದು ರೂಪ ನೀಡಿದ ಶ್ರೇಯಸ್ಸು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.

ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದಾಗ ಹೆಚ್ಚಿನ ಅನುದಾನ ದೊರೆತು, ವರುಣಾ ನಾಲೆಯು ಐದು ತಾಲೂಕಿನ ಕೃಷಿ ಪ್ರದೇಶಕ್ಕೆ ನೀರು ಹರಿಯುವಂತಾಯಿತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಜಲಸಂಪನ್ಮೂಲ ಸಚಿವ ಹೆಚ್.ಕೆ.ಪಾಟೀಲ್ ಇದರ ಉದ್ಘಾಟನೆ ನೆರವೇರಿಸಿದರು. ವರುಣಾ ನಾಲೆ ನಿರ್ಮಾಣದ ವಿರುದ್ಧ ಮಂಡ್ಯ ಜಿಲ್ಲೆಯ ಘಟಾನುಘಟಿ ನಾಯಕರ ನೇತೃತ್ವದಲ್ಲಿ ಹೋರಾಟವೂ ನಡೆಯಿತು.

ಇದಕ್ಕೆ ಜಗ್ಗದೇ ನಾಲೆ ನಿರ್ಮಾಣದ ಮಹತ್ವದ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು, ಮಂಡ್ಯ ಜನತೆಯ ಮನ ಗೆದ್ದ ಡಿ.ದೇವರಾಜ ಅರಸು, ನಾಲೆ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಕಾರಣೀಭೂತರಾದರು. ಡಿ.ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಕೈಗಾರಿಕಾ ಸಚಿವರಾಗಿದ್ದ ಎಸ್.ಎಂ.ಕೃಷ್ಣ, ವರುಣಾ ನಾಲೆ ನಿರ್ಮಾಣ ವಿರೋಧಿಸಿ ರಾಜಿನಾಮೆ ಸಲ್ಲಿಸಿದ್ದರು. ಮುಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೇ ವರುಣಾ ನಾಲೆಯ ಉದ್ಘಾಟನೆ ನೆರವೇರಿದ್ದು ಒಂದು ವಿಶೇಷ.

Translate »