ಸಾರ್ವಜನಿಕ ಸೇವಾ ರಸ್ತೆಯಲ್ಲಿ ತಲೆ ಎತ್ತಿವೆ `ನಿಗೂಢ’ ಮಳಿಗೆಗಳು!
ಮೈಸೂರು

ಸಾರ್ವಜನಿಕ ಸೇವಾ ರಸ್ತೆಯಲ್ಲಿ ತಲೆ ಎತ್ತಿವೆ `ನಿಗೂಢ’ ಮಳಿಗೆಗಳು!

July 17, 2018
  • ಮೈಸೂರು ಪಾಲಿಕೆ ಅಧಿಕಾರ ವರ್ಗಕ್ಕೆ ಇದರ ಬಗ್ಗೆ ಅರಿವಿಲ್ಲವಂತೆ!

ಮೈಸೂರು: ಅತ್ತೆ ಕೊಟ್ಟ ಬಂಗಾರದ ಉಡುಗೊರೆಯನ್ನು ಅಳಿಯ ಬೇರೊಬ್ಬರಿಗೆ ದಾನ ಮಾಡಿದ ಎಂಬ ನಾಣ್ಣುಡಿಯಂತೆ, ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರ ಹೋರಾಟದ ಫಲವಾಗಿ ಉಳಿದಿರುವ ಸಾರ್ವಜನಿಕ ಸೇವಾ ರಸ್ತೆಯಲ್ಲಿ, ಅನಧಿಕೃತ ಮಳಿಗೆಗಳ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು.. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವೀಸ್ ರಸ್ತೆ ಮತ್ತೆ ಸಾರ್ವಜನಿಕರ ಕೈತಪ್ಪುವಂತಿದೆ. ರಾಜಕಾಲುವೆ ಪಕ್ಕದ ಈ ಸರ್ವಿಸ್ ರಸ್ತೆಯಲ್ಲಿ 13 ಅನಧಿಕೃತ ಮಳಿಗೆಗಳು ತಲೆಯೆತ್ತಿವೆ. ಈ ಮಳಿಗೆಗಳನ್ನು ಯಾರು?, ಯಾರಿಗಾಗಿ? ನಿರ್ಮಿಸುತ್ತಿದ್ದಾರೆ ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ನಗರ ಪಾಲಿಕೆಯವರು ರಸ್ತೆ ಬದಿ ವ್ಯಾಪಾರಿಗಳಿಗೆ ನಿರ್ಮಿಸುತ್ತಿದ್ದಾರೆ ಎಂಬುದು ಸ್ಥಳೀಯರ ಮಾತಾದರೆ, ನಮಗೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ದಿಢೀರ್ ಬೆಳವಣಿಗೆ ಈ ಹಿಂದೆ ಹೋರಾಟ ಮಾಡಿ, ಸಾರ್ವಜನಿಕ ಜಾಗವನ್ನು ಉಳಿಸಿದ್ದ ಸಾಮಾಜಿಕ ಕಾರ್ಯಕರ್ತರನ್ನು ಕೆರಳಿಸಿದೆ.

ವಲಯ ಕಚೇರಿ-3ರ ವ್ಯಾಪ್ತಿಗೆ ಬರುವ ಈ ಸರ್ವೀಸ್ ರಸ್ತೆಯನ್ನು ಎಸ್‍ಬಿಐ ಬ್ಯಾಂಕ್‍ನವರು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿಕೊಂಡಿದ್ದರು. ಇದನ್ನು ಪತ್ತೆಹಚ್ಚಿದ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ಮಾಡಿ, ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ನಂತರ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತ ಒತ್ತುವರಿಯನ್ನು ತೆರವುಗೊಳಿಸಿ, ಸಾರ್ವಜನಿಕ ಉಪಯೋಗಕ್ಕೆ ಮುಕ್ತಗೊಳಿಸಿತ್ತು. ಅಲ್ಲದೆ ಮೂವತ್ತು ಅಡಿ ಸರ್ವಿಸ್ ರಸ್ತೆಯನ್ನು ಅಭಿವೃದ್ಧಿಗೊಳಿಸಿ, ಕಾಮಾಕ್ಷಿ ಆಸ್ಪತ್ರೆಗೆ ನೇರ ಸಂಪರ್ಕ ನೀಡುವ ಉದ್ದೇಶವಿದೆ ಎಂದು ವಲಯ ಕಚೇರಿ-3ರ ಅಂದಿನ ಅಭಿವೃದ್ಧಿ ಅಧಿಕಾರಿ ಗೋವಿಂದಪ್ಪ ಭರವಸೆ ನೀಡಿದ್ದರು. ಆದರೆ ಅವರೀಗ ಸೇವೆಯಿಂದ ನಿವೃತ್ತರಾಗಿದ್ದು, ಇಂದಿನ ಅಭಿವೃದ್ಧಿ ಅಧಿಕಾರಿಗೆ ಈ ಸಂಬಂಧ ಯಾವುದೇ ಮಾಹಿತಿಯಿಲ್ಲ ಎಂದು ತೊಣಚಿಕೊಪ್ಪಲಿನ ನಿವಾಸಿ ಎಂ.ಎಸ್.ಸತ್ಯಾನಂದ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮಿನಿ ರಾಜಕಾಲುವೆ ಪಕ್ಕದ ಸರ್ವಿಸ್ ರಸ್ತೆಯಲ್ಲೇ 13 ಮಳಿಗೆಗಳನ್ನು ನಿರ್ಮಾಣ ಮಾಡು ತ್ತಿರುವುದು ಕಾನೂನು ಬಾಹಿರ. ಅದು ಜಿಲ್ಲಾಡಳಿತದಿಂದಾಗಲೀ, ಸ್ಥಳೀಯ ಆಡಳಿತದಿಂದಾಗಲೀ ಅಥವಾ ಖಾಸಗಿ ಯವರಿಂದಾಗಲೀ ಆಗಬಾರದು. ಮಳಿಗೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ, ತೆರವು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. – ಭಾನುಮೋಹನ್, ಪರಿಸರ ಹೋರಾಟಗಾರ್ತಿ

ಇದೀಗ ಇದ್ದಕ್ಕಿದ್ದಂತೆ ಮಿನಿ ರಾಜಕಾಲುವೆ ಗೋಡೆ ಸೇರಿಸಿಕೊಂಡು 13 ಮಳಿಗೆಗಳನ್ನು ನಿರ್ಮಿಸಲಾಗಿದೆ. ಯಾರು ನಿರ್ಮಿಸುತ್ತಿದ್ದಾರೆ ಎಂಬುದೂ ಸ್ಪಷ್ಟವಾಗಿಲ್ಲ. ಮತ್ತಷ್ಟು ಮಂದಿ ಹೀಗೆಯೇ ಅತಿಕ್ರಮಿಸಿಕೊಂಡಿದ್ದಾರೆ. ರಾಜಕಾಲುವೆ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳವನ್ನು ಹೀಗೆ ಒತ್ತುವರಿ ಮಾಡಿಕೊಂಡರೆ ಮುಂದೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಸಾರ್ವಜನಿಕ ರಸ್ತೆ, ಉದ್ಯಾನವನ, ರಾಜಕಾಲುವೆ ಅಕ್ಕ-ಪಕ್ಕದ ಜಾಗವನ್ನು ಒತ್ತುವರಿ ಅಥವಾ ಅತಿಕ್ರಮಿಸಿಕೊಳ್ಳದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಗಂಭೀರ ವಿಚಾರದ ಬಗ್ಗೆ ಜಾಣ ಕುರುಡು ಪ್ರದರ್ಶಿಸದೆ ನಗರ ಪಾಲಿಕೆ ಅನಧಿಕೃತ ಮಳಿಗೆಗಳನ್ನು ತೆರವು ಮಾಡಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Translate »