ಇಂದ್ರ ಧನುಷ್ ಅಭಿಯಾನದಡಿ ಮೈಸೂರಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಇಂದ್ರ ಧನುಷ್ ಅಭಿಯಾನದಡಿ ಮೈಸೂರಲ್ಲಿ  ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ

July 17, 2018

ಮೈಸೂರು:  ಗರ್ಭಿಣಿಯರು ಮತ್ತು ಮಕ್ಕಳು ಅಗತ್ಯ ಲಸಿಕೆಗಳಿಂದ ವಂಚಿತರಾಗುವುದನ್ನು ತಡೆಗಟ್ಟುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ಇಂದ್ರಧನುಷ್ ಅಭಿಯಾನದಡಿ ಮೈಸೂರು ನಗರ ಲಸಿಕಾ ಅಭಿಯಾನಕ್ಕೆ ಸೋಮವಾರ ಚಾಲನೆ ದೊರೆಯಿತು.

ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರಿನ ರಾಮಾನುಜ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಎಸ್.ಎ.ರಾಮದಾಸ್ ಮೈಸೂರು ನಗರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ರಾಮದಾಸ್, ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳುವ ಮೂಲಕ ಆರೋಗ್ಯ ಭಾರತ ನಿರ್ಮಾಣ ಮಾಡಬೇಕಿದೆ. ಗರ್ಭಿಣಿಯರು ಮತ್ತು ಮಕ್ಕಳು ಆರೋಗ್ಯವಾಗಿರಲು ಹಾಗೂ ಮುಂದೆ ಯಾವುದೇ ಕಾಯಿಲೆ ಮತ್ತು ಸೋಂಕು ತಗುಲದಿರಲು ಇಂದ್ರಧನುಷ್ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ ಎಂದು ನುಡಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರ ಆರೋಗ್ಯ ಕಾಪಾಡಲು ಹೆಚ್ಚು ಒತ್ತು ನೀಡಿದ್ದು, ಔಷಧ ಹಾಗೂ ರೋಗಿಗೆ ಬೇಕಾಗುವ ಉಪಕರಣಗಳನ್ನು ಕೈಗೆಟಕುವ ದರದಲ್ಲಿ ನೀಡುವ ಸಲುವಾಗಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಉತ್ತೇಜನ ನೀಡುತ್ತಿದೆ. ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ದುಬಾರಿ ಔಷಧಿಗಳನ್ನು ಅತೀ ಕಡಿಮೆ ಬೆಲೆಯಲ್ಲಿ ಪಡೆಯಲು ಸಾಧ್ಯವಿದೆ. ಆರೋಗ್ಯ ಸ್ಥಿರವಾಗಿ ಇಟ್ಟುಕೊಳ್ಳಲು ಹೆಚ್ಚು ಆದ್ಯತೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಯೋಗಾಭ್ಯಾಸ ನಮ್ಮ ಜೀವನದ ಭಾಗವಾಗಬೇಕು. ವಿಶೇಷವಾಗಿ ಮಕ್ಕಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಬಸವರಾಜು ಮಾತನಾಡಿ, ಮಕ್ಕಳಿಗೆ ತಗಲುವ 9 ಮಾರಕ ರೋಗಗಳ ತಡೆಗೆ ಇಂದ್ರಧನುಷ್ ಅಭಿಯಾನ ಮಹತ್ವದ ಕಾರ್ಯಕ್ರಮ. ಲಸಿಕೆ ವಂಚಿತ ಗರ್ಭಿಣಿಯರು ಹಾಗೂ ಮಕ್ಕಳನ್ನು ಗುರುತಿಸಿ ಲಸಿಕೆ ನೀಡಲಾಗುತ್ತದೆ. ಹುಟ್ಟಿನಿಂದ ಈವರೆಗೆ ಪೆÇಲಿಯೋ, ದಡಾರ ಸೇರಿದಂತೆ ಯಾವುದೇ ರೀತಿಯ ಲಸಿಕೆಗಳನ್ನು ಹಾಕಿಸಿಕೊಳ್ಳದ ಮಕ್ಕಳಿಗೆ ಲಸಿಕೆಗಳನ್ನು ಹಾಕಲಾಗುವುದು. ಜೊತೆಗೆ ಲಸಿಕೆಯಿಂದ ವಂಚಿತರಾದ ಗರ್ಭಿಣಿಯರಿಗೂ ಈ ಅಭಿಯಾನದಡಿ ಲಸಿಕೆಗಳನ್ನು ಹಾಕಲಾಗುವುದು ಎಂದು ಹೇಳಿದರು. ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಸ್.ಗೋಪಿನಾಥ್ ಜಿಲ್ಲಾ ಅಶ್ರಿತ ರೋಗವಾಹಕ ರೋಗ ನಿಯಂತ್ರಣ ಅಧಿಕಾರಿ ಡಾ.ಚಿದಂಬರ, ಪಾಲಿಕೆ ಸದಸ್ಯ ಸುನೀಲ್ ಮತ್ತಿತರರು ಹಾಜರಿದ್ದರು.

ಇಂದ್ರಧನುಷ್ ಅಭಿಯಾನದಡಿ ನಗರ ಲಸಿಕಾ ಅಭಿಯಾನ ಮೈಸೂರು ನಗರದಲ್ಲಿ ಜು.20ರವರೆಗೆ ನಡೆಯಲಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿ 1,122 ಗರ್ಭಿಣಿಯರು, 2 ವರ್ಷದೊಳಗಿನ 3,542 ಮಕ್ಕಳು ಹಾಗೂ 5ರಿಂದ 6 ವರ್ಷದ 1,774 ಮಕ್ಕಳನ್ನು ಗುರುತಿಸಲಾಗಿದೆ. ಇವರಿಗೆ ಅಗತ್ಯವಾದ ಲಸಿಕೆಗಳನ್ನು ನೀಡಲಾಗುವುದು. ಇದಕ್ಕಾಗಿ ಅಂಗನವಾಡಿ ಕೇಂದ್ರಗಳು, ಸಮುದಾಯ ಭವನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 145 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಜು.19 ಹೊರತುಪಡಿಸಿ ಇಂದಿನಿಂದ ಜು.20ರವರೆಗೆ ಅಭಿಯಾನ ನಡೆಯಲಿದೆ. -ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಸ್.ಗೋಪಿನಾಥ್

Translate »