ಅನಾಥ ಶವಗಳಿಗೆ ಮುಕ್ತಿ ಕೊಡೋ ಪೊಲೀಸ್ ಪೇದೆ
ಮಂಡ್ಯ

ಅನಾಥ ಶವಗಳಿಗೆ ಮುಕ್ತಿ ಕೊಡೋ ಪೊಲೀಸ್ ಪೇದೆ

July 24, 2018

ಮಂಡ್ಯ: ಆಧುನಿಕತೆಯ ಬೆನ್ನೇರಿ ಎಲ್ಲವೂ ವ್ಯಾಪಾರೀಕರಣವಾಗಿ ರುವ ಈ ಸಂದರ್ಭದಲ್ಲಿ ಮಾನವೀಯತೆ ಅನ್ನೋದು ಮರೆಯಾಗಿ ಬಿಟ್ಟಿದೆ. ಅವರವರಿಗೆ ವಹಿಸಿದ ಕೆಲಸ ಮಾಡು ವುದೇ ದುಸ್ತರ ಅನ್ನುವಂತಹ ಸ್ಥಿತಿ ಇರುವ ಇಂದಿನ ದಿನಗಳಲ್ಲಿ, ಇಲ್ಲೊಬ್ಬ ಪೊಲೀಸ್ ಪೇದೆ ತನಗೆ ವಹಿಸಿರುವ ಸರ್ಕಾರಿ ಕೆಲಸದ ಜೊತೆಗೆ ಇನ್ನೊಂದು ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಾ ಬರುತ್ತಿದ್ದಾರೆ. ಕಳೆದ 6 ವರ್ಷಗಳಿಂದೀಚೆಗೆ ಬರೋಬರಿ 150ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಕ್ರಿಯೆ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಪೇದೆ ಡಿ.ವಿ.ಮುತ್ತುರಾಜು, ಅನಾಥ ಶವಗಳಿಗೆ ಸಂಪ್ರದಾಯಂತೆ ಅಂತ್ಯಕ್ರಿಯೆ ಮಾಡಿ ಮುಕ್ತಿ ಕೊಡುವ ಅಪರೂಪದ ಪೇದೆ. ಪೊಲೀಸ್ ಪೇದೆಯ ಈ ಕೆಲಸ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರು ವುದರ ಜೊತೆಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

ಡಿ.ವಿ.ಮುತ್ತುರಾಜು

ಶ್ರೀರಂಗಪಟ್ಟಣ ಪಟ್ಟಣ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ಮುತ್ತುರಾಜ್ ಕಳೆದ 6 ವರ್ಷಗಳಿಂದ 150ಕ್ಕೂ ಹೆಚ್ಚು ಅನಾಥ ಶವಗಳನ್ನು ಮಣ್ಣು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೂಲತಃ ಮಳವಳ್ಳಿ ತಾಲೂಕು ದೋರನ ಹಳ್ಳಿಯ ವೆಂಕಟರಮಣಾಚಾರ್ ಮತ್ತು ನಾಗಮ್ಮ ದಂಪತಿಗಳ ಪುತ್ರನಾದ ಮುತ್ತು ರಾಜ್ ಕಳೆದ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಮಂಡ್ಯ ತಾಲೂಕಿನ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸಿದ್ದ ಇವರು ಕಳೆದ ಆರೂವರೆ ವರ್ಷಗಳಿಂದ ಶ್ರೀರಂಗ ಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸದ್ಯಕ್ಕೆ ಪೊಲೀಸ್ ಇಲಾಖೆಯು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸುವುದು ಅಲ್ಲಿನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಇತರೇ ಕರ್ತವ್ಯಗಳಿಗಾಗಿ ಇವರನ್ನು ನಿಯೋಜಿಸಿದೆ.

ಮುಕ್ತಿತಾಣ ಶ್ರೀರಂಗಪಟ್ಟಣದಲ್ಲಿ ಸಾಯು ವವರೇ ಹೆಚ್ಚು: ಶ್ರೀರಂಗಪಟ್ಟಣ ಒಂದು ದ್ವೀಪವಾಗಿದ್ದು ಕಾವೇರಿ ನದಿ ಪಟ್ಟಣದ ಸುತ್ತಲೂ ಹರಿಯುತ್ತಿರುವುದರಿಂದ ಇಲ್ಲಿ ಮನುಷ್ಯ ತನ್ನ ಪ್ರಾಣ ಬಿಟ್ಟರೆ ಮುಕ್ತಿ ಸಿಗಲಿದೆ ಅನ್ನುವ ನಂಬಿಕೆ ಇಂದ ಸಾಕಷ್ಟು ಜನರು ಇಲ್ಲಿ ಬಂದು ಅನಾಥರಂತೆ ಪ್ರಾಣ ಬಿಡುತ್ತಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದ್ದು ಪೇದೆ ಮುತ್ತುರಾಜ್ ಹೇಳುವಂತೆ ಸತ್ತವರ ಜೇಬಿನಲ್ಲಿ ಒಂದು ಚೀಟಿಯೂ ದೊರೆಯದಂತೆ ಅವರ ವಿಳಾಸ ಅವರ ಮನೆಯವರಿಗೆ ತಿಳಿಯ ಬಾರದು ಅನ್ನೋ ಕಾರಣಕ್ಕೆ ಇಲ್ಲಿ ಬಂದು ಪ್ರಾಣ ಬಿಡುತ್ತಿದ್ದಾರೆ. ಹೀಗಾಗಿ ಕಳೆದ 6 ವರ್ಷಗಳಲ್ಲಿ ನಾನು ಎಷ್ಟು ಅನಾಥ ಶವಗಳನ್ನು ಮಣ್ಣು ಮಾಡಿದ್ದೇನೆಂಬುದು ಗೊತ್ತಿಲ್ಲ. ಆದರೂ ಇತ್ತೀಚೆಗೆ ಲೆಕ್ಕಹಾಕಿ ಕೊಳ್ಳಲು ಪ್ರಾರಂಭಿಸಿದ ನಂತರ ಅಂದಾಜು 150ಕ್ಕೂ ಹೆಚ್ಚು ಅನಾಥ ಶವಗಳನ್ನು ಮಣ್ಣು ಮಾಡಿದ್ದು ಆ ಮೂಲಕ ಅವರಿಗೆ ಮುಕ್ತಿ ಕೊಟ್ಟಿದ್ದೇನೆ ಎನ್ನುತ್ತಾರೆ.

ನೂರೈವತ್ತಕ್ಕೂ ಹೆಚ್ಚು ಶವಗಳನ್ನು ಮಣ್ಣು ಮಾಡಿ ಅಂತ್ಯಕ್ರಿಯೆ ನೆರವೇರಿಸಿರುವ ಪೇದೆ ಮುತ್ತುರಾಜ್ ಅನಾಥ ಶವಗಳು ಸಿಕ್ಕ ಕೂಡಲೇ ಏಕಾಏಕಿ ಮಣ್ಣು ಮಾಡುವುದಿಲ್ಲ. ಬದಲಾಗಿ ಆ ಶವಗಳ ವಾರಸುದಾರರು ಯಾರಾದರೂ ಇದ್ದಾರಾ ಅನುವುದನ್ನು ಪರಿಶೀಲನೆ ಮಾಡುವು ದಕ್ಕಾಗಿ ಶವಗಳ ಗುರುತು ಪತ್ತೆ ಹಚ್ಚುವಂತೆ ಠಾಣೆಗಳಿಗೆ ಮೆಸೆಜ್ ಮಾಡುತ್ತಾರೆ. ಜೊತೆಗೆ ತನ್ನದೇ ಫೇಸ್ ಬುಕ್ ಪೇಜ್‍ನಲ್ಲಿ ಇಂತಹ ದಿನ ಈ ರೀತಿ ವ್ಯಕ್ತಿಯ ಶವ ಸಿಕ್ಕಿದೆ ವಾರಸುದಾರರು ಯಾರಾದರೂ ಇದ್ದಲ್ಲಿ ನನ್ನಮ್ಮ ಸಂಪರ್ಕಿಸಿ ಎಂದು ತಮ್ಮ ನಂಬರ್ ಜೊತೆ ಫೇಸ್‍ಬುಕ್, ವಾಟ್ಸ್‍ಪ್‍ಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುತ್ತಾರೆ.

ನಾಲ್ಕೈದು ದಿನಗಳವರೆಗೂ ಕಾದು ಶವಗಳ ವಾರಸುದಾರರು ಯಾರೂ ಬಾರದಿದ್ದಾಗ ಶವವನ್ನು ಸ್ಥಳೀಯರ ನೆರವಿನಿಂದ ಸತ್ತ ವ್ಯಕ್ತಿಗಳನ್ನು ಆಳವಾದ ಗುಂಡಿ ತೆಗೆದು ಮಣ್ಣು ಮಾಡುವುದರ ಜೊತೆಗೆ ಸಮಾಧಿಯಾದ ನಂತರ ಹೂಗಳನ್ನು ಹಾಕಿ ಅರಿಶಿನ, ಕುಂಕುಮ ಇಟ್ಟು ಪೂಜೆ ಮಾಡುತ್ತಾರೆ. ನಂತರ ತಮ್ಮ ಕೈಯಲ್ಲಾದಷ್ಟು ತಿಂಡಿಗಳನ್ನು ತಂದು ಅವರ ಸಮಾಧಿ ಮೇಲಿಟ್ಟು, ಪ್ರಾರ್ಥಿಸಿ ನಂತರ ಅಲ್ಲಿಂದ ಹೊರಡುತ್ತಾರೆ. ಪೇದೆಯಾಗಿ ಮುತ್ತುರಾಜ್ ಅವರು ಮಾಡು ತ್ತಿರುವ ಈ ಜನಪರ ಕಾರ್ಯಕ್ಕೆ ಮಂಡ್ಯ ಎಸ್‍ಪಿ ರಾಧಿಕಾ ಅವರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪೊಲೀಸ್ ಇಲಾಖೆಯವರು ಜನರ ಬಳಿ ಸರಿಯಾಗಿ ನಡೆದುಕೊಳ್ಳು ವುದಿಲ್ಲ, ಅವರಿಗೆ ಮಾನವೀಯತೆ ಇಲ್ಲ ಎನ್ನುವಂಥಹ ಕಾಲದಲ್ಲಿ ಪೇದೆ ಮುತ್ತು ರಾಜ್ ಅವರ ಈ ಮಾನವೀಯ ಕೆಲಸಕ್ಕೆ ಶ್ರೀರಂಗಪಟ್ಟಣ ಠಾಣೆ ಎಸ್‍ಐ ಪುನೀತ್ ಸೇರಿದಂತೆ ಮೇಲಧಿಕಾರಿಗಳೂ ಸಹ ಪ್ರೋತ್ಸಾಹ ನೀಡುತ್ತಿದ್ದಾರೆ. ಇವರ ಈ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗು ತ್ತಿದ್ದು, ಇಲಾಖೆಯ ಅಧಿಕಾರಿಗಳು ಸೇರಿದಂತೆ ಶ್ರೀರಂಗಪಟ್ಟಣದ ಸಾರ್ವ ಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಎಸ್‍ಪಿಯಿಂದ ಗೌರವ: ಪೇದೆ ಡಿ.ವಿ. ಮುತ್ತುರಾಜ್ ಮತ್ತು ಸ್ವಯಂ ಸೇವಕ ಸೋಮಶೇಖರ್ ಅವರ ಈ ಮಾನವೀಯ ಕಾರ್ಯವನ್ನು ಗುರ್ತಿಸಿ 2016ರಲ್ಲಿ ಜಿಲ್ಲಾ ಎಸ್‍ಪಿಯಾಗಿದ್ದ ಸುಧೀರ್ ಕುಮಾರ್ ರೆಡ್ಡಿ ಅವರು ಮಂಡ್ಯದ ಪೊಲೀಸ್ ದಿನಾಚರಣೆಯ ವೇಳೆ ಸನ್ಮಾನ, ಕಾಣಿಕೆಯನ್ನೂ ನೀಡಿ ಗೌರವಿಸಿದ್ದಾರೆ.

ಸ್ವಯಂ ಸೇವಕನ ಸಾಥ್

ಪೇದೆ ಡಿ.ವಿ.ಮುತ್ತುರಾಜ್ ಅವರ ಈ ಮಾನವೀಯ ಕಾಯಕದಲ್ಲಿ ಶ್ರೀರಂಗ ಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ನಿವಾಸಿ ಸೋಮ ಶೇಖರ್ ಕೂಡ ಕೈ ಜೋಡಿಸಿದ್ದಾರೆ. ಸ್ವಯಂ ಸೇವಕನಾಗಿ ಶ್ರೀರಂಗಪಟ್ಟಣ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಈತನೂ ಕೂಡ ಜನಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಅಧಿಕಾರಿಗಳು ಕರೆದ ತಕ್ಷಣ ಎಂತಹ ಸ್ಥಳದಲ್ಲಿಯೇ ಇರಲಿ, ಯಾವ ರೀತಿಯ ಶವವೇ ಆಗಿದ್ದರೂ ಸಹ ಕೈನಿಂದ ಎತ್ತಿಕೊಂಡು ಬರುವ ಈತ, ಅನಾಥ ಶವಗಳಿಗೆ ಮುಕ್ತಿ ಕೊಡಿಸುವದರ ಲ್ಲಿಯೂ ಸಹ ಈತನ ಪಾತ್ರವೂ ದೊಡ್ಡದಿದೆ. 2012 ರಿಂದ ಪಟ್ಟಣದ ಠಾಣೆಯಲ್ಲಿ ಅನಾಥ ಶವಗಳಿಗೆ ಮುಕ್ತಿಕೊಡಿಸುವ ಕೆಲಸ ಸೇರಿದಂತೆ ಸಹಾಯಕನಾಗಿ ಕೆಲಸ ಮಾಡುತ್ತಾ ಬಂದಿರುವ ಈತ ಕುಟುಂಬದವರ ವಿರೋಧವಿದ್ದರೂ `ನನಗೆ ಅನಾಥ ಶವಗಳಿಗೆ ಮುಕ್ತಿ ಕೊಡಿಸುವ ಕಾಯಕ ತೃಪ್ತಿಯಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು. ಬದುಕಿರುವ ನಡುವೆ ಸಾರ್ಥಕ ಸೇವೆಯನ್ನು ಮಾಡಿ ಹೋಗಬೇಕು. ಅಂತೆಯೇ ಮನಃಪೂರ್ವಕವಾಗಿ ಈ ಕೆಲ ಮಾಡುತ್ತಿದ್ದೇನೆ. ಈ ವರೆಗೆ 600ಕ್ಕೂ ಅನಾಥ ಶವಗಳಿಗೆ ಮುಕ್ತಿ ತೋರಿಸಿದ್ದೇನೆ ಎನ್ನುತ್ತಾರೆ ಸೋಮಶೇಖರ್.

Translate »