ಮೇಲುಕೋಟೆ ಆಂಬ್ಯುಲೆನ್ಸ್ ಸ್ಥಿತಿ ಅಯೋಮಯ….
ಮಂಡ್ಯ

ಮೇಲುಕೋಟೆ ಆಂಬ್ಯುಲೆನ್ಸ್ ಸ್ಥಿತಿ ಅಯೋಮಯ….

July 24, 2018

ಮೇಲುಕೋಟೆ: ಸಂಪೂರ್ಣ ಸವೆದ ಗಾಲಿಗಳು. ಪ್ರಾಥಮಿಕ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣವಿಲ್ಲದೇ ರೋಗಿಗಳನ್ನು ಕರೆತರುವ ಸಿಬ್ಬಂದಿ. ಜೀವ ರಕ್ಷಣೆಗಾಗಿ ಪರಿತಪಿಸುವ ರೋಗಿಗಳು…

ಇದು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ನೆರವಾಗುವ 108 ಆಂಬ್ಯುಲೆನ್ಸ್ ನ ದೋಷಗಳ ಸ್ಯಾಂಪಲ್ ಸ್ಟೋರಿ. ಮೇಲುಕೋಟೆಯ 40 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಅಪಘಾತ, ಹೆರಿಗೆ ಸೇರಿದಂತೆ ಯಾವುದೇ ತುರ್ತು ಚಿಕಿತ್ಸೆಗೆ ರೋಗಿಗಳನ್ನು ಆಸ್ಪತ್ರೆಗೆ ಸರಿಯಾದ ವೇಳೆಗೆ ಕರೆದೊಯ್ಯಬೇಕಾದ 108 ಆಂಬ್ಯುಲೆನ್ಸ್ ವಾಹನ ದುರಸ್ತಿಗೊಂಡು ಕಳೆದ ಎರಡು ದಿನಗಳಿಂದ (ಜು.22) ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಪರ ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ 108 ವಾಹನ ಟೈರ್‍ಗಳು ದುರಸ್ತಿ ಹಂತ ತಲುಪಿದ್ದು, ನಾಲ್ಕೂ ಟೈರ್‍ಗಳು ತಂತಿ ಬರುವಂತೆ ಕಾಣುತ್ತಿದೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ತುರ್ತು ಸಂದರ್ಭದಲ್ಲಿ ಸಿಬ್ಬಂದಿ ಈ ದುರಸ್ತಿಗೊಂಡ ವಾಹನ ದಲ್ಲಿಯೇ ರೋಗಿಗಳನ್ನು ಕರೆದೊಯ್ಯುತ್ತಿ ದ್ದಾರೆ. ಇದರಿಂದ ಯಾವುದಾದರೂ ಅವಘಡ ಸಂಭವಿಸಿದರೆ ಯಾರು ಜವಾಬ್ದಾರರು’ ಎನ್ನುವುದು ರೋಗಿಗಳ ಪ್ರಶ್ನೆ.

ಮೇಲುಕೋಟೆ ಸುತ್ತಲಿನ ಪ್ರದೇಶದ ಜನರು ಪ್ರಾಥಮಿಕ ಕೇಂದ್ರಕ್ಕೆ ಖಾಸಗಿ ವಾಹನದಲ್ಲಿ ಬರುತ್ತಾರೆ. ಆದರೆ ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರು, ಮಂಡ್ಯ, ಬೆಳ್ಳೂರಿನ ಆಸ್ಪತ್ರೆಗಳಿಗೆ ಹೋಗುವವರು ಅನಿವಾರ್ಯವಾಗಿ ಈ ವಾಹನದಲ್ಲಿಯೇ ಪ್ರಯಾಣಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

ಮಂಡ್ಯ ಜಿಲ್ಲೆಯ ಮೇಲುಕೋಟೆ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಜೊತೆಗೆ, ಸುತ್ತಲ ಗ್ರಾಮೀಣ ಪ್ರದೇಶದಲ್ಲಿ ಬಡ ಜನರೇ ಹೆಚ್ಚಾಗಿದ್ದಾರೆ. ಆದರೆ, ಇಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ತೆರಳಲು ಯಾವುದೇ ವಾಹನದ ವ್ಯವಸ್ಥೆ ಇಲ್ಲ. ಹೀಗಾಗಿ, ಮೇಲುಕೋಟೆಗೆ 108 ಸೇವೆ ವರದಾನವಾಗಿದೆ. ಸರ್ಕಾರ ಪ್ರತಿ ಕಿ.ಮೀ.ಗೆ 48 ರೂ. ನೀಡುತ್ತಿದೆ. ಆದರೆ, ಆರೋಗ್ಯ ಸೇವೆ ಒದಗಿಸಲು ಒಪ್ಪಂದ ಮಾಡಿಕೊಂಡ ಸಂಸ್ಥೆ ತುರ್ತು ವಾಹನಗಳ ದುರಸ್ಥಿಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ. ಇದರಿಂದ ಪ್ರತಿನಿತ್ಯ ರೋಗಿಗಳು ಪರದಾಡುತ್ತಿದ್ದಾರೆ. ಇನ್ನಾದರೂ ಹಳೆಯದಾದ 108 ವಾಹನವನ್ನು ಬದಲಿಸಿ ಸುಸಜ್ಜಿತವಾದ ಹೊಸ ವಾಹನವನ್ನು ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮೇಲು ಕೋಟೆಗೆ ನೀಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

ಪ್ರಸ್ತುತ ಮೇಲುಕೋಟೆ ಆರೋಗ್ಯ ಕೇಂದ್ರದಲ್ಲಿರುವ ಆಂಬ್ಯುಲೆನ್ಸ್ ಹಳೆಯದಾಗಿದ್ದು, ಅದನ್ನು ಬದಲಿಸಿ ಹೊಸ ಆಂಬ್ಯುಲೆನ್ಸ್ ನೀಡಬೇಕು. ಅಲ್ಲದೇ ಬನ್ನಾಂಗಾಡಿ ಹಾಗೂ ಚಿನಕುರಳಿ ಗ್ರಾಮಗಳ ಒಂದು ಆರೋಗ್ಯ ಕೇಂದ್ರಕ್ಕೆ ಮತ್ತೊಂದು ಆಂಬ್ಯುಲೆನ್ಸ್ ನೀಡುವಂತೆ ಸಚಿವ ಪುಟ್ಟರಾಜು ಅವರಲ್ಲಿ ಮನವಿ ಸಲ್ಲಿಸಲಾಗಿದೆ. – ತಾಲೂಕು ಆರೋಗ್ಯಾಧಿಕಾರಿ ಅರವಿಂದ್

 

ಹೊಸ ಟೈರ್‍ಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಪೂರೈಕೆಯಾಗಲಿದೆ. ಸದ್ಯ ನಮ್ಮಲ್ಲಿ ಲಭ್ಯವಿರುವ ಟೈರ್‍ಗಳನ್ನು ಬಳಸಲು ಸಿಬ್ಬಂದಿಗೆ ಸೂಚಿಸಿದ್ದೇನೆ. – ಉಮೇಶ್, ಜಿಲ್ಲಾ ವ್ಯವಸ್ಥಾಪಕರು. 108 ಮಂಡ್ಯ ಜಿಲ್ಲೆ

Translate »