ವಸತಿ ಗೃಹ ಖಾಲಿ ಮಾಡಿಸಲು ಮಾಜಿ  ಪೊಲೀಸನ ಬೆನ್ನತ್ತಿದ ಪೊಲೀಸರು
ಮೈಸೂರು

ವಸತಿ ಗೃಹ ಖಾಲಿ ಮಾಡಿಸಲು ಮಾಜಿ  ಪೊಲೀಸನ ಬೆನ್ನತ್ತಿದ ಪೊಲೀಸರು

September 8, 2018

ಮೈಸೂರು: ಅಧಿಕೃತ ವಸತಿ ಗೃಹದಿಂದ ಮಾಜಿ ಪೊಲೀಸ್ ಕಾನ್ಸ್ ಟೇಬಲ್‍ನನ್ನು ತೆರವುಗೊಳಿಸಲು ಪೊಲೀಸರು ಆತನ ಬೆನ್ನತ್ತಿದ್ದಾರೆ. ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ಸ್ ಟೇಬಲ್ (ಎಪಿಸಿ) ಪ್ರಸನ್ನ ಕುಮಾರ್ ಪೊಲೀಸ್ ಇಲಾಖೆಯ ಅಧಿಕೃತ ವಸತಿ ಗೃಹ ಖಾಲಿ ಮಾಡದೇ ಸತಾಯಿಸುತ್ತಿರುವವರು. ಕರ್ತವ್ಯ ಲೋಪದ ಮೇಲೆ ಪ್ರಸನ್ನ ಕುಮಾರ್ನನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.

ಆದರೆ ಅವರು ತಮಗೆ ಮಂಜೂರಾಗಿದ್ದ ಮೈಸೂರಿನ ಹೂಟಗಳ್ಳಿಯ ಸರ್ಕಾರಿ ವಸತಿ ಸಮುಚ್ಛಯದ ಮನೆಯನ್ನು ಇದುವರೆಗೂ ತೆರವುಗೊಳಿಸಿಲ್ಲ. ಮನೆ ಖಾಲಿ ಮಾಡುವಂತೆ ತಿಳಿಸಲಾಗಿತ್ತಲ್ಲದೆ, 2017ರ ಏಪ್ರಿಲ್ 21, ಜೂನ್ 24 ಹಾಗೂ ಸೆಪ್ಟೆಂಬರ್ 2ರಂದು ಲಿಖಿತ ನೋಟೀಸ್ ನೀಡಲಾಗಿತ್ತು. ಅಲ್ಲದೇ 2017ರ ಡಿಸೆಂಬರ್ 4 ಮತ್ತು 2018ರ ಜೂನ್ 23ರಂದು ರಿಮೈಂಡರ್ ಲೆಟರ್ ನೀಡಿದ್ದರೂ ಜಗ್ಗದ ಆತ ಕ್ವಾರ್ಟರ್ಸ್ ತೆರವುಗೊಳಿಸಿರಲಿಲ್ಲ. 2018ರ ಆಗಸ್ಟ್ 27ರಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮತ್ತು ಎಸ್ಟೇಟ್ ಆಫೀಸರ್ ಡಾ. ವಿಕ್ರಂ ಅಮಟೆ ಅವರು ತೆರವು ಆದೇಶ ಹೊರಡಿಸಿದ್ದಾರೆ. ಆತ ಮನೆ ಖಾಲಿ ಮಾಡದಿದ್ದಲ್ಲಿ ಬಲವಂತವಾಗಿಯಾದರೂ ತೆರವುಗೊಳಿಸುವಂತೆ ವಿಜಯನಗರ ಠಾಣೆ ಇನ್ಸ್‍ಪೆಕ್ಟರ್‍ಗೆ ಡಿಸಿಪಿ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ನಗರ ಪೊಲೀಸ್ ಕಮೀಷ್ನರ್ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್, ಅನಧಿಕೃತವಾಗಿ ಇಲಾಖೆ ವಸತಿ ಗೃಹದಲ್ಲಿ ವಾಸ್ತವ್ಯ ಹೂಡುವುದು ನಿಯಮ ಬಾಹಿರವಾಗಿರುವುದರಿಂದ ಎಸ್ಟೇಟ್ ಆಫೀಸರ್ ಆದ ಡಿಸಿಪಿ ಡಾ. ಅಮಟೆ ತೆರವು ಆದೇಶ ಹೊರಡಿಸಿದ್ದಾರೆ ಎಂದರು.

Translate »