ಮೈಸೂರು,ಜೂ.20(ಆರ್‍ಕೆ)- ಕೊರೊನಾ ಸೋಂಕಿತ ಮಹಿಳೆಯೊಬ್ಬರು ಮೈಸೂರಿನ ವಿವಿಪುರಂ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಚೆಲುವಾಂಬ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯರ ತಂಡವು ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯರಿಗಾಗಿ ಕೋವಿಡ್ ಆಸ್ಪತ್ರೆಯಾಗಿ ಸಜ್ಜುಗೊಳಿಸಿರುವ ಜಯಲಕ್ಷ್ಮೀಪುರಂನಲ್ಲಿರುವ ವಿವಿಪುರಂ ಹೆರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಮಹಿಳೆಗೆ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಕೆ.ಆರ್.ಪೇಟೆಯವರಾದ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ಸೋಂಕು ಬಂದ ಕಾರಣ ಅವರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲ ದಿನಗಳ ನಂತರ ರಿಪೀಟೆಡ್ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಡಿಸ್‍ಚಾರ್ಜ್ ಮಾಡಲಾಗಿತ್ತು.
ಕೆ.ಆರ್.ಪೇಟೆಯ ತಮ್ಮ ಮನೆಯಲ್ಲಿದ್ದ ಅವರು, ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಚೆಲುವಾಂಬ ಆಸ್ಪತ್ರೆಗೆ ಬಂದರು. ಆಕೆಯಲ್ಲಿ ಕೋವಿಡ್ ಇತಿಹಾಸವಿದ್ದ ಹಿನ್ನೆಲೆಯಲ್ಲಿ ಸ್ವ್ಯಾಬ್ ತೆಗೆದು ಪರೀಕ್ಷಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಶನಿವಾರ ಬೆಳಿಗ್ಗೆ ಜಯಲಕ್ಷ್ಮೀಪುರಂನ ಹೆರಿಗೆ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ (ಸಿಜರಿಯನ್) ಮಾಡಿ ಹೆರಿಗೆ ಮಾಡಿಸಿದರು. ತಾಯಿ ಮತ್ತು ಜನಿಸಿದ ಗಂಡು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.