ಕೊಡಗಿನಲ್ಲಿ ಕೊರೊನಾ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ
ಮೈಸೂರು

ಕೊಡಗಿನಲ್ಲಿ ಕೊರೊನಾ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ

March 16, 2020

ಮಡಿಕೇರಿ,ಮಾ.15-ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ ಯಾಗಿದೆ. ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂ ತರಿಸಿ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗಿತ್ತು. ಈವರೆಗೆ ವಿದೇಶದಿಂದ ಬಂದ ಮೂವರು ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಮತ್ತು ಇವರೊಂದಿಗೆ ಸಂಪರ್ಕದಲ್ಲಿದ್ದ ಇತರ ಮೂವರು ಸೇರಿದಂತೆ ಒಟ್ಟು 6 ಜನರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾ ವಹಿಸಲಾಗಿದೆ. ಶಂಕಿತ ವ್ಯಕ್ತಿಗಳನ್ನು ವೈದ್ಯಕೀಯ ಪರೀಕೆÀ್ಷಗೆ ಒಳಪಡಿಸಿ ಅದರ ಸ್ಯಾಂಪಲ್‍ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದ್ದು, ಸೋಂಕು ತಗುಲಿರುವ ಶಂಕೆ ಇರುವ ಪ್ರಕರಣಗಳಲ್ಲಿ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯಿಂದ ವಿದೇಶಗಳಿಗೆ ಹೋಗಿ ಬಂದಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಅದರಂತೆ ಇಂದು ಸಂಜೆಯವರೆಗೆ ಮಡಿಕೇರಿ ತಾಲೂಕಿನಲ್ಲಿ 37, ವಿರಾಜಪೇಟೆ ತಾಲೂಕಿನಲ್ಲಿ 19 ಮತ್ತು ಸೋಮವಾರ ಪೇಟೆ ತಾಲೂಕಿನಲ್ಲಿ 21 ಜನರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 74 ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಇರುವಂತೆ ವ್ಯವಸ್ಥೆ ಮಾಡಲಾಗಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Translate »