ಬೈಲುಕುಪ್ಪೆ ಟಿಬೆಟಿಯನ್ನರ ಶಿಬಿರ ಸೇರಿ ಮೈಸೂರು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣವಿಲ್ಲ
ಮೈಸೂರು

ಬೈಲುಕುಪ್ಪೆ ಟಿಬೆಟಿಯನ್ನರ ಶಿಬಿರ ಸೇರಿ ಮೈಸೂರು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣವಿಲ್ಲ

March 16, 2020

ಮೈಸೂರು, ಮಾ.15(ಪಿಎಂ)- ಬೈಲುಕುಪ್ಪೆಯ ಟಿಬೆಟಿಯನ್ನರ ನಿರಾಶ್ರಿತರ ಕೇಂದ್ರದಲ್ಲಿ ಹಲವರು ಚೀನಾಕ್ಕೆ ಹೋಗಿ ಬಂದಿದ್ದಾರೆ. ಕೊರೊನಾ ಹಿನ್ನೆಲೆ ಯಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಲು ಜಿಲ್ಲಾ ಡಳಿತ ತಿಳಿಸಿದೆ ಎಂಬ ವದಂತಿ ವಾಟ್ಸಪ್‍ನಲ್ಲಿ ಹರಿ ದಾಡುತ್ತಿದ್ದು, ಇಂತಹ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂ ನಾತ್ಮಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚ ರಿಸಿದರು. ಮೈಸೂರಿನ ತಮ್ಮ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿರಿಯಾ ಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ನ ರಿಂದ ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತ ತಿಳಿಸಿದೆ ಎಂಬ ಸಂದೇಶ ಶನಿವಾರದಿಂದ ವಾಟ್ಸಪ್‍ನಲ್ಲಿ ವೈರಲ್ ಆಗುತ್ತಿದೆ. ಇದು ಸುಳ್ಳು ಸುದ್ದಿಯಾಗಿದ್ದು, ಮೈಸೂರು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾ ಗಿಲ್ಲ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು. ಬೈಲುಕುಪ್ಪೆಯ ಟಿಬೆಟಿಯನ್ನರು ತುಂಬ ವರ್ಷಗಳಿಂದ ಅಲ್ಲೇ ಇರುವವರು.

ಚೀನಾ ಗಡಿಭಾಗದಿಂದ ಈಗಷ್ಟೇ ಬಂದವರೇನಲ್ಲ. ಹೀಗಾಗಿ ಅವರಿಂದ ಅಂತರ ಕಾಯ್ದುಕೊಳ್ಳುವ ಯಾವ ಅಗತ್ಯವೂ ಇಲ್ಲ. ಅಂತರ ಕಾಯ್ದುಕೊಳ್ಳಲು ಜಿಲ್ಲಾಡಳಿತವೂ ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು. ವಿದೇಶ ಹಾಗೂ ಹೊರ ರಾಜ್ಯದಿಂದ ಹಿಂತಿರುಗಿ ರಾಜ್ಯಕ್ಕೆ ಬಂದವರು ಹಾಗೂ ವಿದೇಶಿ ಮತ್ತು ಅಂತರ ರಾಜ್ಯದವರು ರಾಜ್ಯಕ್ಕೆ ಆಗಮಿಸಿದಾಗ ಕೊರೊನಾ ಹಿನ್ನೆಲೆಯಲ್ಲಿ ವಿಚಾರಣೆ ಹಾಗೂ ತಪಾಸಣೆ ಮಾಡಲು ರಾಜ್ಯ ಸರ್ಕಾರದ ನಿರ್ದೇಶನವಿದೆ. ಅದರಂತೆ ಜಿಲ್ಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸೋಂಕು ಇರಲಿ, ಇಲ್ಲದೇ ಇರಲಿ ತಪಾಸಣೆ ಮಾಡಲೇಬೇಕು ಎಂದರು.

ಹೊರಗಿನಿಂದ ಬಂದ ಕಾರಣಕ್ಕೆ ಕೆಆರ್ ನಗರದಲ್ಲಿ ಒಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅವರು ಸೋಂಕಿತರಲ್ಲ. ಆದರೂ 14 ದಿನಗಳು ಅವರ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸಲಾಗುತ್ತದೆ. ಅವರ ವಿವರಗಳನ್ನು ಬಹಿರಂಗ ಪಡಿಸುವಂತಿಲ್ಲ. ಹೊರಗಿನಿಂದ ಬಂದವರಿಗೆ ಈ ರೀತಿ ಪ್ರಕ್ರಿಯೆ ನಿರಂತರವಾಗಿ ನಡೆಸಲಾಗುತ್ತದೆ. ಸೋಂಕು ಕಂಡು ಬಂದಲ್ಲಿ ಅವರಿಗೆ ಪ್ರತ್ಯೇಕ ಹಾಗೂ ಎಚ್ಚರಿಕೆಯಿಂದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

Translate »