ಕೊರೊನಾ ವೈರಸ್:  ಹೆಚ್.ಡಿ.ಕೋಟೆ ಗಡಿ ಭಾಗದಲ್ಲಿ ಕಟ್ಟೆಚ್ಚರ
ಮೈಸೂರು

ಕೊರೊನಾ ವೈರಸ್: ಹೆಚ್.ಡಿ.ಕೋಟೆ ಗಡಿ ಭಾಗದಲ್ಲಿ ಕಟ್ಟೆಚ್ಚರ

March 5, 2020

ಮೈಸೂರು, ಮಾ. 4(ಆರ್‍ಕೆ)- ಎಲ್ಲೆಡೆ ಕೊರೊನಾ ವೈರಸ್ ಭೀತಿ ಹರಡಿರುವ ಬೆನ್ನಲ್ಲೇ ಕೇರಳದ ಮಾನಂದವಾಡಿ ಮತ್ತು ವೈನಾಡ್‍ನಲ್ಲಿ ಎರಡು ಮಂಗನ ಕಾಯಿಲೆ (ಏಈಆ) ಪ್ರಕರಣಗಳು ಪತ್ತೆಯಾಗಿವೆ.

ಮಂಗನ ಕಾಯಿಲೆಯ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಭಾಗದ ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್‍ಪೋಸ್ಟ್ ಹಾಗೂ ಹಾಡಿಗಳಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ನೇತೃತ್ವದ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಬುಡಕಟ್ಟು ಜನಾಂಗ, ಅರಣ್ಯದಂಚಿನ ನಿವಾಸಿಗಳು ಹಾಗೂ ಅರಣ್ಯದೊಳಗೆ ಕೆಲಸ ಮಾಡುವ ಅರಣ್ಯ ಸಿಬ್ಬಂದಿಗಳಿಗೆ ಮಂಗನ ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್ ಹಾಕಲಾಗುತ್ತಿದ್ದು, ವಲಸಿಗರನ್ನು ತೀವ್ರ ಆರೋಗ್ಯ ತಪಾಸಣೆಗೊಳಪಡಿಸಿ ವೈರಸ್ ಹರಡದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ.

ಫೆಬ್ರವರಿ 29ರಂದು ಶನಿವಾರ ಮೈಸೂರು ಡಿಸ್ಟ್ರಿಕ್ಟ್ ವೆಕ್ಟರ್-ಬಾರ್ನ್ ಡಿಸೀಸಸ್ ಕಂಟ್ರೋಲ್ ಆಫೀಸರ್ ಡಾ.ಚಿದಂಬರ, ಹೆಚ್.ಡಿ. ಕೋಟೆ ತಾಲೂಕು ಆರೋಗ್ಯಾ ಧಿಕಾರಿ ಡಾ. ರವಿಕುಮಾರ್ ಹಾಗೂ ಆರೋಗ್ಯ ಸಿಬ್ಬಂದಿ ಕೇರಳದ ಮಾನಂದ ವಾಡಿಗೆ ತೆರಳಿ ಅಲ್ಲಿನ ಸಬ್ ಕಲೆಕ್ಟರ್ ಆದ ಐಎಎಸ್ ಅಧಿಕಾರಿ ವಿಕಾಲ್ ಭಾರದ್ವಾಜ್‍ರೊಂದಿಗೆ ಕ್ರಾಸ್ ಬಾರ್ಡರ್ ಸಭೆ ನಡೆಸಿದರು.

ಕಾಡಿನಲ್ಲಿ ಕೆಎಫ್‍ಡಿಗೆ ತುತ್ತಾಗಿ ಮರಣ ಹೊಂದಿದ ಮಂಗಗಳ ಕಚ್ಚುವ ಉಣ್ಣೆಗಳು ಮನುಷ್ಯನನ್ನು ಕಚ್ಚಿ ರಕ್ತ ಹೀರುವುದರಿಂದ ಮಂಗನ ಕಾಯಿಲೆ ಎಂದು ಕರೆಯಲಾಗುತ್ತಿದೆ.

ಮಂಗನ ಕಾಯಿಲೆ ಹರಡದಂತೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮ, ಔಷಧಿ, ಜಾಗೃತಿ ಮೂಡಿಸುವುದು, ಎರಡೂ ರಾಜ್ಯಗಳ ಗಡಿ ಜಿಲ್ಲೆಗಳಲ್ಲಿ ಕೆಎಫ್‍ಡಿ ಸೋಂಕು ಕುರಿತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಡಾ. ಚಿದಂಬರ ಅವರು ತಿಳಿಸಿದರು.

ಮಾನಂದವಾಡಿಯಲ್ಲಿನ ಕೇರಳ ಆರೋಗ್ಯ ಇಲಾಖೆ ಅಸಿಸ್ಟೆಂಟ್ ಡೈರೆಕ್ಟರ್ ಡಾ. ನೊನಾ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅಶೋಕ್‍ಕುಮಾರ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Translate »