ಕೊರೊನಾ; ಜಿಲ್ಲಾಡಳಿತದ ಕ್ರಮಕ್ಕೆ ಸಚಿವ ಸೋಮಣ್ಣ ಮೆಚ್ಚುಗೆ
ಕೊಡಗು

ಕೊರೊನಾ; ಜಿಲ್ಲಾಡಳಿತದ ಕ್ರಮಕ್ಕೆ ಸಚಿವ ಸೋಮಣ್ಣ ಮೆಚ್ಚುಗೆ

April 1, 2020

ಮಡಿಕೇರಿ, ಮಾ.31- ಕೊಡಗಿನಲ್ಲಿ ಕೊರೊನಾ ಸೋಂಕು ಹರಡದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಇದಕ್ಕಾಗಿ ಹಗಲು ರಾತ್ರಿ ಶ್ರಮಿಸಿದ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ ಎಂದು ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದ್ದು, ಮುಖ್ಯಮಂತ್ರಿಗಳ ಪರವಾಗಿ ತಾವು ಇದನ್ನು ಅಭಿನಂದಿಸುವುದಾಗಿ ತಿಳಿಸಿ ದರು. ಮಡಿಕೇರಿಯ ಜಿಪಂ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ, ಕೊಡಗು ಜಿಲ್ಲೆಯ ಆರೋಗ್ಯ ಸ್ಥಿತಿ ಆಶಾದಾಯಕ ವಾಗಿದ್ದು, ಯಾವುದೇ ಆತಂಕ ಇಲ್ಲ. ಎಲ್ಲವೂ ನಿಯಂತ್ರಣದಲ್ಲಿ ಇದೆ ಎಂದು ಹೇಳಿದರು.

ಒಟ್ಟು 359 ಮಂದಿ ಗೃಹ ಸಂಪರ್ಕ ತಡೆಯಲ್ಲಿ ದ್ದಾರೆ. ಈವರೆಗೆ ಸೋಂಕು ಶಂಕಿತ 46 ಮಂದಿಯ ರಕ್ತ ಮತ್ತು ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸ ಲಾಗಿದ್ದು, ಈ ಪೈಕಿ 45 ಮಂದಿಯಲ್ಲಿ ಸೋಂಕು ಕಂಡು ಬಂದಿಲ್ಲ. ಸೋಂಕು ತಗುಲಿದ ಓರ್ವ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತ ಚೇತರಿಸಿ ಕೊಳ್ಳುತ್ತಿದ್ದಾನೆ. ಅದರೊಂದಿಗೆ ಸೋಂಕಿನ ಲಕ್ಷಣವಿರುವ ಇತರ 4 ಮಂದಿ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡ್‍ನಲ್ಲಿ ದಾಖಲಾಗಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಗೆ 10 ವೆಂಟಿಲೇಟರ್ ಒದಗಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ಜಿಲ್ಲೆಯ ಜನರ ಅನುಕೂಲಕ್ಕೆ ತಕ್ಕಂತೆ ಕಫ್ರ್ಯೂ ಸಡಿಲಿಕೆ ಮಾಡಲಾಗಿದೆ. ಪ್ರತಿ ದಿನವೂ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ದಿನ ಪತ್ರಿಕೆ, ಹಾಲು ಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಸೋಮ ವಾರ ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಮತ್ತು ತರಕಾರಿ ಖರೀದಿಗೆ ಅವಕಾಶ ಮಾಡಿಕೊಡ ಲಾಗಿದೆ. ವಾರದ ಈ 3 ದಿನ ಕೊಡಗು ಜಿಲ್ಲೆಯಲ್ಲಿ ಮೀನು, ಕೋಳಿ, ಕುರಿ, ಹಂದಿ ಮಾಂಸ ಮಾರಾಟಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಕಾಫಿ ಬೆಳೆಗಾರರ ಹಿತದೃಷ್ಟಿಯಿಂದ ಕಾಫೀ ಮತ್ತು ಕರಿಮೆಣಸು ಮಾರಾಟಕ್ಕೂ 3 ದಿನಗಳ ಕಾಲ ಅವಕಾಶವಿದೆ. ಇದಕ್ಕಾಗಿ ಕೊಡಗು ಜಿಲ್ಲೆಗೆ ಸೀಮಿತವಾಗಿ ಕಾಫಿ, ಕರಿಮೆಣಸು ಕೊಂಡೊಯ್ಯಲು ಅನುಮತಿ ನೀಡಲಾಗುತ್ತದೆ ಎಂದು ಹೇಳಿದರು. ಇನ್ನು ಕೇರಳ ರಾಜ್ಯಕ್ಕೆ ಕಾಫಿ ಕರಿಮೆಣಸು ಕೊಂಡೊಯ್ಯಲು ಕೊಡಗು ಜಿಲ್ಲೆಯ ಚೆಕ್‍ಪೋಸ್ಟ್‍ಗಳನ್ನು ಹೊರತು ಪಡಿಸಿ ಮೈಸೂರು ಮೂಲಕವೇ 3 ಹೆದ್ದಾರಿಗಳಿವೆ. ಅವುಗಳ ಮೂಲಕ ಕೊಂಡೊಯ್ಯಬಹುದು ಎಂದು ಸೋಮಣ್ಣ ಹೇಳಿದರು.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ 1900 ಮಂದಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯು ತ್ತಿದ್ದು, ಅವರ ಬಳಿ ಪ್ರಸ್ತುತ ಪಡಿತರ ಚೀಟಿ, ಆಧಾರ್ ಕಾರ್ಡ್ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ಆ ಕಾರ್ಮಿಕ ರಿಗೆ ಜಿಲ್ಲಾಡಳಿತದ ಮೂಲಕ ಪಡಿತರ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ತರಕಾರಿಗಳು ಮತ್ತು ದಿನಸಿ ವಸ್ತುಗಳನ್ನು ಗ್ರಾಮ ಮಟ್ಟದಲ್ಲಿ ವಿತರಣೆಗೆ ಕ್ರಮಕೈಗೊಳ್ಳಲಾಗಿದ್ದು, ಇದಕ್ಕಾಗಿ 16 ಮಂದಿ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಮೂಲಕ 21 ದಿನಗಳ ಕಾಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಮೂಲಕ ಶಾಲಾ ಮಕ್ಕಳಿಗೆ ಬಿಸಿ ಊಟ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಮಗುವಿಗೆ ಅಥವಾ ಮಗುವಿನ ಪೋಷಕರಿಗೆ ಆಯಾ ಶಾಲೆಯಲ್ಲಿಯೇ ತಲಾ 2 ಕೆ.ಜಿ. ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಪಂ ಅಧ್ಯಕ್ಷ ಕೆ.ಜಿ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಡಿಸಿ ಅನೀಸ್ ಕಣ್ಮಣಿ ಜಾಯ್, ಎಸ್ಪಿ ಡಾ. ಸುಮನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಹಾಜರಿದ್ದರು.

ಗಡಿ ಬಂದ್: ಜನಪ್ರತಿನಿಧಿಗಳ ಸಮರ್ಥನೆ
ಕೊಡಗು ಜಿಲ್ಲಾಡಳಿತ ಕೇರಳ ರಾಜ್ಯ ಸಂಪರ್ಕಿಸುವ ಅಂತರ್ ರಾಜ್ಯ ಗಡಿಗಳನ್ನು ಬಂದ್ ಮಾಡಿದ ಕ್ರಮವನ್ನು ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ ಅವರುಗಳು ಸಮರ್ಥಿಸಿಕೊಂಡರು. ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದ ಸಂದರ್ಭ ಕೊಡಗು ಜಿಲ್ಲಾಡಳಿತ ಗಡಿ ಬಂದ್ ಮಾಡಿದೆ. ಇದು ಜಿಲ್ಲೆ ಮತ್ತು ರಾಜ್ಯದ ಜನರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಮಾಡಿದ ಕಾರ್ಯವಾಗಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನೇ ಜಿಲ್ಲಾಡಳಿತ ತೆಗೆದುಕೊಂಡಿದೆ ಎಂದು ಸಮರ್ಥಿಸಿಕೊಂಡರು. ಕೇರಳಕ್ಕೆ ಸಂಪರ್ಕಿಸಲು ಮೈಸೂರು-ಗುಂಡ್ಲುಪೇಟೆ, ಹೆಚ್.ಡಿ.ಕೋಟೆ-ಬಾವಲಿ, ಹೆಚ್.ಡಿ.ಕೋಟೆ-ಗೂಡ್ಲೂರು ಹೆದ್ದಾರಿಗಳು ತೆರೆದಿದೆ. ಹೀಗಿದ್ದರೂ ಕೇರಳ ರಾಜ್ಯದ ಸಂಸದರೊಬ್ಬರು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ತನ್ನ ರಾಜ್ಯದ ಹಾಗೂ ಜನರ ಹಿತದೃಷ್ಟಿಯನ್ನು ಕಾಪಾಡಿಕೊಳ್ಳುವ ಅಧಿಕಾರ ಕರ್ನಾಟಕ ರಾಜ್ಯಕ್ಕೆ ಇದೆ ಎಂದು ಸಚಿವ ಸೋಮಣ್ಣ ಸಮರ್ಥಿಸಿಕೊಂಡರು.

ಕೇರಳಕ್ಕೆ ಕಣ್ಣೂರು ಏರ್‍ಪೋರ್ಟ್ ವ್ಯವಹಾರ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಗಡಿ ಬಂದ್‍ಗೆ ಕೇರಳ ಕ್ಯಾತೆ ತೆಗೆದಿದೆ. ಇದನ್ನು ಕರ್ನಾಟಕ ಸರಕಾರದ ವಕೀಲರೇ ನೋಡಿಕೊಳ್ಳುತ್ತಾರೆ. ಕೇರಳದಲ್ಲಿ ಕೊರೋನಾ ಸೋಂಕು ಪರಿಸ್ಥಿತಿ ಶಮನವಾಗುವವರೆಗೂ ಈಗಾಗಲೇ ಬಂದ್ ಮಾಡಿರುವ ಕೊಡಗು-ಕೇರಳ ಗಡಿಯನ್ನು ತೆರೆಯುವುದಿಲ್ಲ ಎಂದು ಕೆ.ಜಿ. ಬೋಪಯ್ಯ ಸ್ಪಷ್ಟಪಡಿಸಿದರು.

Translate »