ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಸಿ
ಚಾಮರಾಜನಗರ

ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಸಿ

March 19, 2019

ಚಾಮರಾಜನಗರ: ಲೋಕಸಭಾ ಕ್ಷೇತ್ರದಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಅಧಿಕಾರಿಗಳು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ ಕಾವೇರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚಾ.ನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅವಧಿ ಆರಂಭಗೊಂಡಿದ್ದು, ನಿಯೋಜಿಸಿರುವ ಕೆಲಸವನ್ನು ಎಲ್ಲೆಡೆ ಅತ್ಯಂತ ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಚೆಕ್‍ಪೋಸ್ಟ್ ಗಳಲ್ಲಿ ತಪಾಸಣೆ ಕಾರ್ಯ ತೀವ್ರಗೊಳಿಸ ಬೇಕು. ನೀತಿ ಸಂಹಿತೆ ಪಾಲನೆಗೆ ನಿಗಾ ವಹಿಸಬೇಕಿರುವ ಎಲ್ಲಾ ತಂಡಗಳು ಚುರುಕಾಗಿ ಕಾರ್ಯ ನಿರ್ವಹಿಸ ಬೇಕೆಂದು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಭೆ, ಸಮಾರಂಭಗಳನ್ನು ನಡೆಸಲು ಅನುಮತಿ ನೀಡುವ ಸಿಂಗಲ್ ವಿಂಡೋ ಕೇಂದ್ರಗಳು ನಿಗದಿತ ಅವಧಿ ಯೊಳಗೆ ಕರ್ತವ್ಯ ಪಾಲನೆ ಮಾಡಬೇಕು. ಮತಗಟ್ಟೆಗಳಿಗೆ ಅಗತ್ಯವಾಗಿರುವ ವಾಹನಗಳ ವಿವರ, ರೂಟ್‍ಮ್ಯಾಪ್ ತಯಾರಿಸುವ ಕೆಲಸವನ್ನು ಕೈಗೊಳ್ಳಬೇಕು ಎಂದರು.

ಸಭೆ ಸಮಾರಂಭ, ರ್ಯಾಲಿಗಳನ್ನು ಚಿತ್ರೀಕರಣ ಮಾಡಲು ಅಗತ್ಯ ತರಬೇತಿಯನ್ನು ವಿಡಿಯೋ ಗ್ರಾಫರ್‍ಗಳಿಗೆ ನೀಡಲಾಗುತ್ತಿದೆ. ಒಂದನೇ ಹಂತದ ಪಿಆರ್‍ಒ, ಎಪಿಆರ್‍ಒ ಗಳಿಗೆ ತರಬೇತಿಗೆ ಅಗತ್ಯ ಸಿದ್ಧತೆ ಮಾಡಬೇಕು. ಪಿಆರ್‍ಒ, ಎಪಿಆರ್‍ಒ ಗಳಿಗೆ ನೇಮಕಾತಿ ಆದೇಶಗಳು ಸಕಾಲಕ್ಕೆ ತಲುಪಿಸಬೇಕು ಎಂದರು.

ಎಲ್ಲಿಯೂ, ಯಾವುದೇ ಲೋಪಗಳಿಗೆ ಅವಕಾಶ ವಾಗಬಾರದು, ಅಗತ್ಯವಿರುವ ವಾಹನ, ವಿಡಿಯೋ ಚಿತ್ರೀಕರಣ, ಸಿಬ್ಬಂದಿ ಸೇರಿದಂತೆ ಎಲ್ಲ ನೆರವು ಪಡೆದು ಕೊಳ್ಳಬೇಕು. ನೀತಿಸÀಂಹಿತೆ ಪಾಲನೆ ಕಟ್ಟುನಿಟ್ಟಾಗಿ ಆಗಬೇಕು. ಯಾವುದೇ ಭಾಗದಲ್ಲೂ ಉಲ್ಲಂಘನೆ ಕಂಡು ಬಂದರೆ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಉಪವಿಭಾಗಾಧಿಕಾರಿ ನಿಖಿತ ಚಿನ್ನಸ್ವಾಮಿ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »