ಕನ್ನಡದ ಮೌಖಿಕ ಮಹಾಕಾವ್ಯಗಳಿಗೆ  ಜಾಗತಿಕ ಸ್ಪರ್ಶ ನೀಡುವ ಕಾರ್ಯವಾಗಬೇಕಿದೆ
ಮೈಸೂರು

ಕನ್ನಡದ ಮೌಖಿಕ ಮಹಾಕಾವ್ಯಗಳಿಗೆ ಜಾಗತಿಕ ಸ್ಪರ್ಶ ನೀಡುವ ಕಾರ್ಯವಾಗಬೇಕಿದೆ

March 19, 2019

ಮೈಸೂರು: ಮಂಟೇ ಸ್ವಾಮಿ, ಮಲೆ ಮಾದೇಶ್ವರ ಮೊದಲಾದ ಕನ್ನಡ ಮೌಖಿಕ ಮಹಾಕಾವ್ಯಗಳು ಕನ್ನ ಡದ ಅಸ್ಮಿತೆಯಾಗಿದ್ದು, ಇವುಗಳಿಗೆ ಜಾಗತಿಕ ಸ್ಪರ್ಶ ನೀಡುವಂತಹ ಮಹತ್ತರ ಕಾರ್ಯ ವಾಗಬೇಕಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ದಲ್ಲಿರುವ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ವತಿ ಯಿಂದ ಭಾಷಾ ಸಂಸ್ಥಾನದ ಸಭಾಂಗಣ ದಲ್ಲಿ `ಕನ್ನಡ ಮಹಾಕಾವ್ಯಗಳು : ಲಿಖಿತ ಮತ್ತು ಮೌಖಿಕ ಪರಂಪರೆಯ ತೌಲನಿಕ ಅಧ್ಯಯನ’ ಕುರಿತಂತೆ ಐದು ದಿನಗಳು ಹಮ್ಮಿಕೊಂಡಿರುವ ಕಮ್ಮಟವನ್ನು ಸೋಮ ವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಅಥವಾ ಮೌಖಿಕ ಮಹಾಕಾವ್ಯ ಗಳು ಕನ್ನಡದ ಅಸ್ಮಿತೆ ಎತ್ತಿ ಹಿಡಿದಿದ್ದು, ಜಗತ್ತಿನ ಯಾವುದೇ ಭಾಷೆಯಲ್ಲಿ ಕನ್ನ ಡದ ಮೌಖಿಕ ಮಹಾಕಾವ್ಯಗಳಷ್ಟು ವೈವಿ ಧ್ಯತೆ ಕಾಣಲಾಗದು. ಮಂಟೇಸ್ವಾಮಿ, ಮಲೆ ಮಾದೇಶ್ವರ, ಜುಂಜಪ್ಪ, ಹಾಲುಮತ, ಮೈಲಾರಲಿಂಗ, ಸವದತ್ತಿ ಎಲ್ಲಮ್ಮ, ಕುಮಾರ ರಾಮ, ಕೃಷ್ಣಗೊಲ್ಲರ ಕಾವ್ಯ ಸೇರಿದಂತೆ ಹಲವಾರು ಮಹಾಕಾವ್ಯಗಳು ಹಾಗೂ ಜನ ಪದ ಹಿನ್ನೆಲೆಯ ಹಲವು ಬಗೆಯ ರಾಮಾ ಯಣ ಹಾಗೂ ಮಹಾಭಾರತ ಮಹಾಕಾವ್ಯ ಗಳು ಕನ್ನಡದ ಬಹುಸಂಸ್ಕøತಿಯ ಅದ್ಭುತ ಚಿತ್ರಣ ಕಟ್ಟಿಕೊಡಲಿವೆ. ಇವುಗಳಿಗೆ ಜಾಗತಿಕ ಆಯಾಮ ನೀಡುವಲ್ಲಿ ನಾವು ಹಿಂದೆ ಉಳಿ ದಿದ್ದು, ಇಂಗ್ಲಿಷ್‍ಗೆ ಅನುವಾದಗೊಳಿಸಿ ಶಿಷ್ಟ ಪ್ರಕಾರದಲ್ಲಿ ಜಗತ್ತಿಗೆ ಇವುಗಳ ಬಗ್ಗೆ ತಿಳಿಸಿ ಕೊಡುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದು ಹೇಳಿದರು.

ರಾಜಸ್ತಾನ, ತಮಿಳುನಾಡು ಹಾಗೂ ಮರಾಠಿ ಭಾಷೆಗಳ ಕೆಲವು ಮೌಖಿಕ ಕಾವ್ಯಗಳು ಭಾರತದ ಪರವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಆದರೆ ಕನ್ನಡ ಮೌಖಿಕ ಕಾವ್ಯಗಳು ಈ ಮಟ್ಟ ದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಫಿನ್‍ಲ್ಯಾಂಡ್‍ನಂತಹ ಚಿಕ್ಕ ದೇಶ ತನ್ನ ಜನ ಪದ ಕಾವ್ಯಕ್ಕೆ ಜಾಗತಿಕ ಮಟ್ಟದ ಆಯಾಮ ನೀಡಿದೆ. 1836ರಲ್ಲಿ ರಷ್ಯಾದಿಂದ ಸ್ವಾತಂತ್ರ್ಯ ಪಡೆದ ಫಿನ್‍ಲ್ಯಾಂಡ್‍ಗೆ ತಮ್ಮದೇ ರಾಷ್ಟ್ರೀಯ ಮಹಾಕಾವ್ಯದ ಕೊರತೆ ಎದುರಾಯಿತು. ಇದನ್ನು ನೀಗಿಸಲು ಫಿನ್‍ಲ್ಯಾಂಡ್‍ನ ಗುಡ್ಡ ಗಾಡು ಪ್ರದೇಶದ ಫಿನ್ನಿಸ್ ಭಾಷೆಯ ಜನ ಪದ ಹಾಡುಗಳನ್ನು ಸಂಗ್ರಹಿಸಿ `ಕಲೇ ವಾಲ’ ಮಹಾಕಾವ್ಯ ಸಂಪಾದಿಸಲಾಯಿತು. ಇಷ್ಟಕ್ಕೆ ಸುಮ್ಮನಾಗದೇ ತನ್ನ ರಾಜತಾಂತ್ರಿಕ ಸಂಬಂಧವಿರುವ ದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ `ಕಲೇವಾಲ’ ಕಾವ್ಯ ಪ್ರಚುರಪಡಿಸಲಾಯಿತು. ಆದರೆ ನಾವು ನಮ್ಮ ಮೌಖಿಕ ಮಹಾಕಾವ್ಯಗಳನ್ನು ಹೊರ ದೇಶದಲ್ಲಿರಲೀ, ನಮ್ಮ ನೆರೆ ರಾಜ್ಯಕ್ಕೂ ಪರಿಚಯಿಸುವ ಪ್ರಯತ್ನ ಮಾಡಿಲ್ಲ ಎಂದು ವಿಷಾದಿಸಿದರು.

ಜನಪದ ಮೌಖಿಕ ಕಾವ್ಯಗಳ ಮೂಲ ಕವೇ ಶಿಷ್ಟ ಕಾವ್ಯಗಳು ಮೂಡಿದ್ದು, ಪಂಪನ ಕಾವ್ಯದಲ್ಲಿ ಅನೇಕ ಜನಪದ ಗಾದೆ, ನಂಬಿಕೆ ಗಳನ್ನು ಬಳಸಿರುವುದನ್ನು ಕಾಣಬಹುದು. ಮಂಟೇಸ್ವಾಮಿ ಹಾಗೂ ಮಾದೇಶ್ವರ ಪರಂ ಪರೆಯಲ್ಲಿ ಒಂದು ಸಮುದಾಯದ ಅಸ್ಮಿತೆ ಯನ್ನು ಕಾಣಬಹುದು. ಪಶುಪಾಲನೆ ಹಾಗೂ ಸಂಚಾರ ಪ್ರವೃತ್ತಿ ಉಳ್ಳವರು ಜನಪದ ಕಾವ್ಯಗಳನ್ನು ಕಟ್ಟಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಮಾತನಾಡಿ, ಕೇಂದ್ರ ಸರ್ಕಾರವು ಶಾಸ್ತ್ರೀಯ ಸ್ಥಾನಮಾನಕ್ಕೆ ಭಾಜನವಾಗಿರುವ ಭಾಷೆ ಗಳಲ್ಲಿ ಸಂಶೋಧನೆಗಳಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸುತ್ತಿರುತ್ತದೆ. ಆದರೆ ಕನ್ನಡ ಸೇರಿದಂತೆ ಯಾವುದೇ ಭಾಷೆಗೆ ಸಂಬಂ ಧಿಸಿಯೂ ನಿರೀಕ್ಷಿತ ಮಟ್ಟದಲ್ಲಿ ಅರ್ಜಿ ಗಳೇ ಬರುತ್ತಿಲ್ಲ. ಅದರಲ್ಲೂ ಯುವ ಸಮುದಾಯದಿಂದ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿಲ್ಲ ಎಂದು ಅವರು ವಿಷಾದಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತ ನಾಡಿದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ಕೆ.ಆರ್.ದುರ್ಗಾದಾಸ್, ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಲಿಖಿತ ಸಾಹಿತ್ಯಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಮೌಖಿಕ ಸಾಹಿತ್ಯಕ್ಕೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಕಮ್ಮಟ ಮಹತ್ವದ ಪಾತ್ರ ವಹಿಸಲಿದೆ. ಐದು ದಿನ ಗಳ ಕಮ್ಮಟದಲ್ಲಿ 18 ಮಂದಿ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧ ಮಂಡಿಸಲಿದ್ದಾರೆ ಎಂದು ಹೇಳಿದರು. ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಕನ್ನಡ ಅಧ್ಯಾಪಕರು, ಸಂಶೋಧಕರು ಸೇರಿದಂತೆ 40ಕ್ಕೂ ಮಂದಿ ಕಮ್ಮಟದಲ್ಲಿ ಪಾಲ್ಗೊಂಡಿದ್ದು, ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಭಾರ ತೀಯ ಭಾಷಾ ಸಂಸ್ಥಾನದ ಉಪ ನಿರ್ದೇ ಶಕ ಪ್ರೊ.ಪಿ.ಆರ್.ಡಿ.ಫರ್ನಾಂಡಿಸ್, ಕಮ್ಮಟ ಸಂಚಾಲಕಿ ಡಾ.ಎನ್.ಎಸ್. ಅನ್ನ ಪೂರ್ಣ ಮತ್ತಿತರರು ಹಾಜರಿದ್ದರು.

Translate »