ಕೋಟ್ಯಾಂತರ ಅವ್ಯವಹಾರಕ್ಕೆ ಆಸ್ಪದ ಪಾಲಿಕೆ ಇಂಜಿನಿಯರ್‍ಗಳ ವರ್ಗಾವಣೆ
ಮೈಸೂರು

ಕೋಟ್ಯಾಂತರ ಅವ್ಯವಹಾರಕ್ಕೆ ಆಸ್ಪದ ಪಾಲಿಕೆ ಇಂಜಿನಿಯರ್‍ಗಳ ವರ್ಗಾವಣೆ

February 1, 2019

ಮೈಸೂರು: ಮೈಸೂರು ನಗರಪಾಲಿಕೆ ವಲಯ ಕಚೇರಿ-1ರ ಆಯುಕ್ತ ವಿ.ಸುನೀಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಎಂ.ಎನ್.ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಿ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಆದೇಶಿಸಿದ್ದಾರೆ. ಸುನೀಲ್ ಬಾಬು ಅವರನ್ನು ನರ್ಮ್ ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಹಾಗೂ ಮೋಹನ ಕುಮಾರಿಯನ್ನು ಸೂಯೇಜ್ ಫಾರಂ ಹಾಗೂ ರಾಯನ ಕೆರೆಯಲ್ಲಿನ ಮಲಿನ ನೀರು ಶುದ್ಧೀಕರಣ ಘಟಕ(ಎಸ್‍ಟಿಪಿ) ನಿರ್ವಹಣೆ ಮತ್ತು ಮೇಲ್ವಿಚಾರಣೆ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ವಲಯ ಕಚೇರಿ-8ರ ಆಯುಕ್ತ ಕೆ.ಕುಬೇರಪ್ಪ ಅವರಿಗೆ ವಲಯ ಕಚೇರಿ-1ರ ಕಾರ್ಯಬಾರವನ್ನೂ ಹೆಚ್ಚುವರಿಯಾಗಿ ವಹಿಸಲಾಗಿದೆ. ಅಲ್ಲದೆ ಕಿರಿಯ ಇಂಜಿನಿಯರ್‍ಗಳಾದ ಎ.ಆರ್.ಕಿರಣ್ ಹಾಗೂ ಬಿ.ಆರ್.ಸಂತೋಷ್‍ಕುಮಾರ್‍ಗೆ ತಲಾ ಒಂದೊಂದು ವಾರ್ಡ್ ಕಾರ್ಯ ಬಾರವನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನ 4 ಕೋಟಿ ರೂ. ವೆಚ್ಚದಲ್ಲಿ ಮೈಸೂರು ನ್ಯಾಯಾಲಯದ ಮುಂಭಾಗದಿಂದ ಅಗ್ರಹಾರ ವೃತ್ತದ ಮಾರ್ಗವಾಗಿ ರಾಷ್ಟ್ರೀಯ ಹೆದ್ಧಾರಿ 212ರ ನಡುವಿನ ಮಹಾತ್ಮಗಾಂಧಿ ರಸ್ತೆ ಹಾಗೂ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿಯಲ್ಲಿ 1.40 ಕೋಟಿ ರೂ. ಅವ್ಯವಹಾರ ನಡೆದಿದೆ. ಒಂದೇ ಕಾಮಗಾರಿಗೆ 2 ಬಿಲ್ ಮಾಡಿ, ಪಾಲಿಕೆಗೆ ವಂಚಿಸಲಾಗಿದೆ ಎಂದು ಅಧಿಕಾರಿಗಳಾದ ಸುನೀಲ್ ಬಾಬು, ಮೋಹನ ಕುಮಾರಿ ವಿರುದ್ಧ ಸದಸ್ಯರೊಬ್ಬರು ಕೌನ್ಸಿಲ್‍ನಲ್ಲಿ ಆರೋಪ ಮಾಡಿದ್ದರು. ಈ ಬಗ್ಗೆ ಸುದೀರ್ಘ ಚರ್ಚೆಯಾದ ಬಳಿಕ ಮೇಯರ್ ಪುಷ್ಪಲತಾ ಜಗನ್ನಾಥ್, ಈ ಇಬ್ಬರು ಅಧಿಕಾರಿಗಳನ್ನು ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳು ವಂತೆ ಸೂಚಿಸಿ, ತನಿಖೆಗೆ ಸದನ ಸಮಿತಿ ರಚನೆಗೆ ನಿರ್ಣಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »