ಸರ್ಕಾರಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಕೌನ್ಸಿಲಿಂಗ್ ಆರಂಭ
ಮೈಸೂರು

ಸರ್ಕಾರಿ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಕೌನ್ಸಿಲಿಂಗ್ ಆರಂಭ

May 22, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿರುವ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾಗಾಂಧಿ ಅಂಬೇಡ್ಕರ್ ವಸತಿ ಶಾಲೆಗಳಿಗೆ 2019-20ನೇ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಕೌನ್ಸಿಲಿಂಗ್ ಪ್ರಾರಂಭವಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಸಿಪಿಓ ಪ್ರಭುಸ್ವಾಮಿ ತಿಳಿಸಿದರು.

ನಜರ್‍ಬಾದ್‍ನಲ್ಲಿರುವ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ 6ನೇ ತರಗತಿ ಕೌನ್ಸಿಲಿಂಗ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 38 ವಸತಿ ಶಾಲೆಗಳಿದ್ದು 1840 ಸೀಟ್‍ಗಳಿಗೆ ಕೌನ್ಸಿಲಿಂಗ್ ನಡೆಯುತ್ತಿದೆ. ಒಂದು ಸೀಟ್‍ಗೆ ಇಬ್ಬರಂತೆ ಸಂದರ್ಶನಕ್ಕೆ ಕರೆಯಲಾಗಿದೆ. ಮೇ 21 ರಿಂದ ಮೇ 25 ರವರೆಗೆ ಕೌನ್ಸಿಲಿಂಗ್ ನಡೆಯುತ್ತಿದೆ. ಮೇ 23 ರಂದು ಲೋಕಸಭಾ ಚುನಾವಣೆಯ ಮತದಾನದ ಎಣಿಕೆ ಇರು ವುದರಿಂದ ಅಂದು ಕೌನ್ಸಿಲಿಂಗ್ ಇರುವುದಿಲ್ಲ ಎಂದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹೆಚ್.ಎಸ್. ಬಿಂದ್ಯಾ ಮಾತನಾಡಿ, ನಮ್ಮ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಉತ್ತಮ ಫಲಿತಾಂಶಗಳು ಬರುತ್ತಿವೆ. ಈ ದಿನ ಯಾರು ಕೌನ್ಸಿಲಿಂಗ್‍ಗೆ ಬಂದಿರುವುದಿಲ್ಲ. ಮೇ 25 ರಂದು ಅವಕಾಶ ಮಾಡಿಕೊಡಲಾಗುವುದು. ಆದ್ದರಿಂದ ಪೋಷಕರು ಆತಂಕಪಡಬೇಕಾಗಿಲ್ಲ. ಪ್ರತಿ ವಸತಿ ಶಾಲೆಗೆ 50 ಮಕ್ಕಳಂತೆ ಆಯ್ಕೆ ಮಾಡಲಾಗುತ್ತಿದ್ದು, ಸೀಟು ಸಿಕ್ಕಿರುವ ಮಕ್ಕಳು ಹಾಸ್ಟೆಲ್ ಊರಿಗೆ ದೂರವಿದೆ ಎಂದು ಬಿಟ್ಟುಹೋಗಬೇಡಿ. ಚೆನ್ನಾಗಿ ಓದಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.

ಕ್ರೈಸ್ಟ್ ಸಂಸ್ಥೆಯ ಆಡಳಿತ ವಿಭಾಗದ ಉಪನಿರ್ದೇಶಕ ಶಿವಕುಮಾರ್ ಮಾತನಾಡಿ, ಸೀಟು ಕೊಡಿಸುತ್ತೇವೆಂದು ಯಾರಾದರೂ ಹಣ ಕೇಳಿದರೆ ಕೊಡಬೇಡಿ. ನಿಮ್ಮ ಮಕ್ಕಳಿಗೆ ಅರ್ಹತೆ ಇದ್ದರೆ ಸೀಟು ಸಿಕ್ಕೆಸಿಗುತ್ತದೆ. ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜನಾಧಿಕಾರಿ ಹೇಮಕುಮಾರ್, ಸಿ. ರಂಗನಾಥ್ ಸೇರಿದಂತೆ 30 ವಸತಿ ಶಾಲೆಗಳ ಪ್ರಾಂಶುಪಾಲರುಗಳು ಕೌನ್ಸಿಲಿಂಗ್‍ನಲ್ಲಿ ಭಾಗವಹಿಸಿದ್ದರು.

Translate »