ಸುಮಲತಾ ಬೆಂಬಲಿಸಿದರೆ ಶಿಸ್ತುಕ್ರಮ
ಮೈಸೂರು

ಸುಮಲತಾ ಬೆಂಬಲಿಸಿದರೆ ಶಿಸ್ತುಕ್ರಮ

March 23, 2019

ಮಂಡ್ಯ: ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇಂದು ಮಂಡ್ಯದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಅಸಮಾಧಾನಿತ ಕಾಂಗ್ರೆಸ್ಸಿಗರನ್ನು ಮನವೊಲಿಸುವ ಜವಾಬ್ದಾರಿ ತನ್ನದು ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸುವ ಕಾಂಗ್ರೆಸ್ ಮುಖಂಡರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಘೋಷಿಸಿದರು.

ಮಂಡ್ಯ ಪತ್ರಕರ್ತರ ಭವನದಲ್ಲಿ ಇಂದು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಎಸ್. ಪುಟ್ಟರಾಜು, ಮಾ.25ರಂದು ಜನ ಸಾಗರದ ನಡುವೆ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ಅಂದಿನ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ ಅವರು, ನಮ್ಮ ಪ್ರತಿಸ್ಪರ್ಧಿಯಾಗಿರು ವವರು ಮತದಾರರನ್ನು ಸೆಳೆಯಲು ಅನುಸರಿಸುತ್ತಿರುವ ತಂತ್ರಕ್ಕಿಂತಲೂ ಉತ್ತಮವಾದ ತಂತ್ರಗಾರಿಕೆಯ ಆಟ ಮಾ.25ರ ನಂತರ ಆರಂಭವಾಗಲಿದೆ ಎಂದು ಹೇಳಿದರು.

ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಿರುವಂತೆಯೇ ಸ್ಥಳೀಯವಾಗಿ ಯಾವುದೇ ಭಿನ್ನಾ ಭಿಪ್ರಾಯವಿದ್ದರೂ, ಅದನ್ನು ಶಮನಗೊಳಿಸಿ ಉಭಯ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತದೆ. ಕಾಂಗ್ರೆಸ್‍ನ ಎನ್.ಚಲುವರಾಯಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇ ಗೌಡ ಸೇರಿದಂತೆ ಆ ಪಕ್ಷದ ಎಲ್ಲಾ ಮಾಜಿ ಶಾಸಕರು, ಅಸಮಾಧಾನಿತ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಹೊಣೆಯನ್ನು ನಾನೇ ಹೊತ್ತುಕೊಂಡಿ ದ್ದೇನೆ. ಎಲ್ಲರ ಮನೆ ಬಾಗಿಲಿಗೂ
ನಾನೇ ಹೋಗುತ್ತೇನೆ ಎಂದರು.

ಸ್ವಾಭಿಮಾನದ ಬಗ್ಗೆ ಬೇರೆಯವರಿಂದ ಹೇಳಿಸಿ ಕೊಳ್ಳುವ ಅವಶ್ಯಕತೆ ಮಂಡ್ಯ ಜನರಿಗಿಲ್ಲ ಎಂದ ಸಚಿವರು, ಸುಮಲತಾ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಹಾಸನದಲ್ಲಿ ನಿನ್ನೆ ಸಿದ್ದರಾಮಯ್ಯನವರು ಅತೃಪ್ತ ಕಾಂಗ್ರೆಸ್ ಮುಖಂಡರನ್ನು ಹ್ಯಾಗೆ ಬೆಂಡೆತ್ತಿದ್ದಾರೆ ಎಂಬುದನ್ನು ನೋಡಿದರೆ, ಅವರು ಮೈತ್ರಿ ಧರ್ಮ ಪಾಲಿಸುತ್ತಿರುವುದು ಅರ್ಥವಾಗುತ್ತದೆ ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಗುರುತಿಸಿಕೊಂಡಿರುವ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಪಕ್ಷ ವಿರೋಧಿ ಚಟುವಟಿಕೆಯನ್ನು ಸಹಿಸಲಾಗುವುದಿಲ್ಲ. ಒಂದು ವೇಳೆ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡುವುದಾದರೆ ಅಂತಹವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೋಗಬಹುದು ಎಂದರಲ್ಲದೆ, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರ ಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದ್ದು, ಮೈತ್ರಿ ಧರ್ಮದಂತೆ ನಾವು ಅವರನ್ನು ಬೆಂಬಲಿಸಲಿದ್ದೇವೆ ಎಂದರು.

ಅಂಬರೀಷ್ ಆಪ್ತರಾದ ಅಮರಾವತಿ ಚಂದ್ರಶೇಖರ್ ಮಾತನಾಡಿ, ನಾನು ಅಂಬರೀಷ್ ಆಪ್ತ. ಅವರ ಮೇಲಿನ ಪ್ರೀತಿ ಈ ಹಿಂದೆ ಹ್ಯಾಗಿತ್ತೋ ಹಾಗೆ ಮುಂದೆಯೂ ಇರುತ್ತದೆ. ಆದರೆ ನಾನು ಅಪ್ಪಟ ಕಾಂಗ್ರೆಸ್ಸಿಗನಾಗಿದ್ದು, ಪಕ್ಷ ಸೂಚಿಸುವ ಅಭ್ಯರ್ಥಿಗೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಒಂದು ವೇಳೆ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ, ಅವರ ಪರವಾಗೇ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸುಮಲತಾ ಈವರೆಗೆ ನನ್ನನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಅವರು ಸಂಪರ್ಕಿಸಿದರೂ ಕೂಡ ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗೇ ಕೆಲಸ ಮಾಡುತ್ತೇನೆ. ಅಂಬರೀಷ್ ಬದುಕಿದ್ದಾಗ ಅವರ ಜೊತೆಗಿದ್ದೆ. ಈಗ ಅವರಿಲ್ಲ. ಅವರ ಪತ್ನಿ ಕಾಂಗ್ರೆಸ್‍ನಲ್ಲಿಲ್ಲ. ಹೀಗಿರುವಾಗ ನನಗೆ ಪಕ್ಷವೇ ಮುಖ್ಯ. ಹೈಕಮಾಂಡ್ ಆದೇಶವನ್ನು ಪಾಲಿಸುವುದು ನನ್ನ ಧರ್ಮ ಎಂದರು.

Translate »