ಕೃಷಿ ಸಾಲ ಪಡೆಯದ 28 ಲಕ್ಷ ರೈತರಿಗೆ ಬೆಳೆ ಸಾಲ
ಮೈಸೂರು

ಕೃಷಿ ಸಾಲ ಪಡೆಯದ 28 ಲಕ್ಷ ರೈತರಿಗೆ ಬೆಳೆ ಸಾಲ

August 14, 2018
  • ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ವಿವರಣೆ
  • 22 ಲಕ್ಷ ರೈತರು ಸಹಕಾರಿ ಬ್ಯಾಂಕ್, 28 ಲಕ್ಷ ಮಂದಿ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದಾರೆ

ಬೆಂಗಳೂರು: ಇದುವರೆಗೂ ಕೃಷಿ ಸಾಲ ಪಡೆಯಲು ವಿಫಲರಾಗಿರುವ 28 ಲಕ್ಷ ರೈತ ಕುಟುಂಬಗಳಿಗೆ ಬೆಳೆ ಸಾಲ ನೀಡುವುದಾಗಿ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ಇಂದಿಲ್ಲಿ ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ 78 ಲಕ್ಷ ರೈತ ಕುಟುಂಬಗಳಿದ್ದು, ಅದರಲ್ಲಿ 22 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಲ್ಲಿ, 28 ಲಕ್ಷ ಕುಟುಂಬಗಳು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿವಿಧ ಸಾಲಗಳನ್ನು ಪಡೆದಿದ್ದಾರೆ. ಇನ್ನುಳಿದ ಅತೀ ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ 28 ಲಕ್ಷ ರೈತರು ರಾಷ್ಟ್ರೀಕೃತ ಇಲ್ಲವೆ ಸಹಕಾರಿ ಬ್ಯಾಂಕುಗಳಲ್ಲಿ ಇದುವರೆಗೂ ಸಾಲ ಪಡೆದಿಲ್ಲ. ಅಂತಹ ಕುಟುಂಬಗಳಿಗೆ ಅವರ ಜಮೀನು ಒಡೆತನದ ಆಧಾರದ ಮೇಲೆ ಬೆಳೆ ಸಾಲ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ನಬಾರ್ಡ್ ವತಿಯಿಂದ ರೈತರಿಗೆ ಸಾಲ ವಿತರಣೆ ಸಂಬಂಧ ರೀ ಫೈನಾನ್ಸಿಂಗ್ ಶೇ.40 ಕ್ಕೆ ಇಳಿಸಲಾಗಿದೆ. ಅದನ್ನು ಶೇ. 75 ರಷ್ಟು ಹೆಚ್ಚಿಸಲು ಈಗಾಗಲೇ ಮುಖ್ಯಮಂತ್ರಿಯವರು ಕೇಂದ್ರ ಸಚಿವರಿಗೆ ನಿಯೋಗದಲ್ಲಿ ಮನವಿ ಮಾಡಿದ್ದಾರೆ. ಆದರೆ, ಶೇ.60 ರಷ್ಟು ಮಂಜೂರಾತಿಗೆ ಒಪ್ಪಿಗೆ ದೊರೆತಿದೆ. ಅಷ್ಟು ಪ್ರಮಾಣ ಸಿಕ್ಕರೂ ಮುಂದಿನ ಒಂದು ವರ್ಷದಲ್ಲಿ ಇನ್ನು 10 ರಿಂದ 15 ಲಕ್ಷ ಹೊಸ ರೈತರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಬಾರ್ಡ್‍ನಿಂದ ಹೆಚ್ಚುವರಿಯಾಗಿ ದೊರೆಯುವ 2500 ಕೋಟಿ ರೂ.ಗಳನ್ನು ಸಾಲ ಪಡೆಯದ ರೈತ ಕುಟುಂಬಗಳಿಗೆ ಕೃಷಿ ಸಾಲ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು. ಸಮ್ಮಿಶ್ರ ಸರ್ಕಾರ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿ ಸೇರಿ ಒಂದು ವರ್ಷದಲ್ಲಿ 17613 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಇಂದು ಒಂದು ರೀತಿಯಲ್ಲಿ ಸಹಕಾರಿ ಸಂಘದ ಸಂಪೂರ್ಣ ಸಾಲ ಮನ್ನಾ ಆಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸಾಲ ಮನ್ನಾ ಕುರಿತು ಯಾವುದೇ ಗೊಂದಲ ಅಗತ್ಯವಿಲ್ಲ. ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು 50 ಸಾವಿರ ರೂ.ವರೆಗೆ ಮನ್ನಾದ ಲಾಭ ಪಡೆದಿರುವ ರೈತರು ಸಾಲ ನವೀಕರಣ ಮಾಡಿಕೊಂಡಿದ್ದರೆ ಈಗ ಕುಮಾರಸ್ವಾಮಿಯವರು ಘೋಷಿಸಿರುವ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲದ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದರು. ಸಾಲಮನ್ನಾ ಕುರಿತು ರೈತರಿಗೆ ಏಕಕಾಲದಲ್ಲಿ ಋಣಮುಕ್ತ ಪತ್ರ ವಿತರಿಸಲಾಗುವುದು. ರೈತರ ಸಾಲ ಮನ್ನಾ ಮುಂದಿನ ಜುಲೈ ಒಳಗೆ ಉಳಿಕೆ ಸಾಲ ಮರುಪಾವತಿ ಆಧಾರದಲ್ಲಿ ಆಗಲಿದೆಯಾದರೂ ಒಂದು ಲಕ್ಷ ರೂ. ಚಾಲ್ತಿ ಸಾಲ ಮನ್ನಾ ಕುರಿತು ಋಣಮುಕ್ತ ಪತ್ರ ನೀಡಲಾಗುವುದು.

ಪ್ರತಿ ಸಹಕಾರ ಸಂಘದಲ್ಲೂ ಎಷ್ಟು ರೈತರು ಎಷ್ಟೆಷ್ಟು ಸಾಲ ಪಡೆದಿದ್ದಾರೆ. ಎಷ್ಟು ಮನ್ನಾ ಆಗಿದೆ. ಉಳಿದದ್ದು ಎಷ್ಟು ಪಾವತಿಸಬೇಕು ಎಂಬ ಪಟ್ಟಿ ಮಾಹಿತಿ ಫಲಕದ ಮೇಲೆ ಅಂಟಿಸಲು ಸೂಚಿಸಲಾಗಿದೆ. ಅಕ್ರಮ ನಡೆದಿದ್ದರೂ ಇದರಿಂದ ಪತ್ತೆಯಾಗಲಿದೆ. ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್‍ಗಳಿಗೆ ಸಾಲಮನ್ನಾ ಬಾಬ್ತು ಹಣ ಜಮೆ ಮಾಡುವ ವಿಚಾರದಲ್ಲೂ ಯಾವುದೇ ಗೊಂದಲ ಇಲ್ಲ. ಸಾಲಮನ್ನಾ ಕುರಿತು ಡಿಸಿಸಿ ಬ್ಯಾಂಕುಗಳಿಂದ ಮಾಹಿತಿ ಬರುತ್ತಿದ್ದಂತೆ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. 2018ರ ಜು.10ರವರೆಗೆ ಹೊಂದಿರುವ ಒಂದು ಲಕ್ಷದವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದೆ. ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕುಗಳು, ಪಿಕಾರ್ಡ್ ಬ್ಯಾಂಕುಗಳು ವಿತರಿಸಿರುವ ಒಂದು ಲಕ್ಷದವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮನ್ನಾ ಮಾಡಲಾಗಿದೆ.

Translate »