ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ
ಮೈಸೂರು

ಭಾರೀ ಮಳೆಗೆ ಕೊಚ್ಚಿ ಹೋದ ಬೆಳೆ

June 4, 2018

ಹನಗೋಡು: ಹನಗೋಡು ಹೋಬಳಿಯ ಗ್ರಾಮಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಜಲಾವೃತವಾಗಿ, ಕೆರೆಗಳಂತೆ ಗೋಚರಿಸುತ್ತಿದ್ದರೆ, ಕೆಲವೆಡೆ ಕೊಚ್ಚಿ ಹೋಗಿದೆ. ಹತ್ತಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ.

ಹನಗೋಡಿಗೆ ಸಮೀಪದ ಕಿರಂಗೂರು, ಹಿಂಡಗುಡ್ಲು, ದಾಸನಪುರ, ದೊಡ್ಡ ಹೆಜ್ಜೂರು, ಭಾರತವಾಡಿ, ಮಾದಹಳ್ಳಿ, ಹರಳಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಮಧ್ಯಾಹ್ನ 1.30 ರಿಂದ 2.30ರವರೆಗೆ ಸುರಿದ ಭಾರೀ ಮಳೆಯು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳ, ತಂಬಾಕು, ಶುಂಠಿ, ಮೆಣಸಿನಕಾಯಿ,ಬಾಳೆಬೆಳೆ ಸೇರಿದಂತೆ ಇತರೆ ಬೆಳೆಗಳು ಕೊಚ್ಚಿ ಹೋಗಿವೆ, ಇಲ್ಲವೇ ಜಮೀನಿನಲ್ಲಿ ಸಾಕಷ್ಟು ನೀರು ನಿಂತು ಬೆಳೆ ಹಾನಿ ಸಂಭವಿಸಿದೆ.

ಒಂದೇ ಗಂಟೆಯಲ್ಲಿ ಸುರಿದ ಮಳೆಗೆ ಹನಗೋಡು ಬಳಿಯ ಮಾದಳ್ಳಿಕೆರೆ, ಕಿರಂಗೂರಿನ ಮಠದಕಟ್ಟೆ, ದೊಡ್ಡಹೆಜ್ಜೂರಿನ ಕೆರೆ, ದಾಸನಪುರದ ಹೊಸಕೆರೆ, ಭಾರತವಾಡಿಯ ಗರಿಕೆ ಕಟ್ಟೆ, ಕಲ್ಲೂರಪ್ಪನಬೆಟ್ಟದಕೆರೆ, ಹುಲಿಕೆರೆ ಸೇರಿದಂತೆ ಸಣ್ಣಪುಟ್ಟ ಕೆರೆ-ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತರಲ್ಲಿ ಹರ್ಷ ಮೂಡಿದ್ದರೂ, ಕಷ್ಟಪಟ್ಟು ಬೇಸಾಯಮಾಡಿದ್ದ ಬೆಳೆಗಳು ಕಣ್ಮುಂದೆಯೇ ನಾಶವಾಗುತ್ತಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

Translate »