ಫೋಟೋ ತೆಗೆಯುತ್ತಿದ್ದ ಯುವಕರ ಮೇಲೆ ಸಲಗ ದಾಳಿ
ಚಾಮರಾಜನಗರ

ಫೋಟೋ ತೆಗೆಯುತ್ತಿದ್ದ ಯುವಕರ ಮೇಲೆ ಸಲಗ ದಾಳಿ

July 7, 2018

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಮುಂದೆ ಫೋಟೋ ತೆಗೆಯಲು ಮುಂದಾದ ಯುವಕರ ಗುಂಪಿನ ಮೇಲೆ ಆನೆ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಮದ್ದೂರು ವಲಯದ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ಇದರ ಫೋಟೋ ತೆಗೆಯಲು ಪ್ರವಾಸಕ್ಕೆ ಬಂದಿದ್ದ ಕೆಲವು ಯುವಕರ ಮುಂದಾಗಿದ್ದಾರೆ. ಈ ವೇಳೆ ಆನೆ ಯುವಕರ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ದಾಳಿಯಿಂದ ಯುವಕರು ತಪ್ಪಿಸಿಕೊಂಡಿದ್ದಾರೆ.

ಮದ್ದೂರು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಮೂಲಕ ಕಲ್ಲಿಕೋಟೆಗೆ ಹೋಗುತ್ತಿದ್ದ ಕೇರಳ ಮೂಲದ ಯುವಕರು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಆನೆಯನ್ನು ನೋಡಿದ್ದಾರೆ. ತಕ್ಷಣವೇ ಅದರ ಫೋಟೋ ತೆಗೆಯಲು ತಮ್ಮ ಕಾರಿ ನಿಂದ ಕೆಳಗಿಳಿದು ಆನೆ ಹತ್ತಿರಕ್ಕೆ ಹೋದಾಗ ಅದು ದಿಢೀರ್ ದಾಳಿ ನಡೆಸಿದೆ.

ಇದರಿಂದ ಹೆದರಿದ ನಾಲ್ವರು ಯುವಕರು ಜೀವ ಉಳಿಸಿಕೊಳ್ಳಲು ಜೋರಾಗಿ ಕಿರುಚುತ್ತಾ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದರೂ ಸಹ ಬಿಡದ ಆನೆಯು ಇವರನ್ನು ಸ್ವಲ್ಪ ದೂರ ಅಟ್ಟಾಡಿಸಿಕೊಂಡು ಬಂದಿದೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನಗಳ ಸವಾರರು ಯುವಕರನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಅಪಾಯದಿಂದ ಪಾರು ಮಾಡಿದ್ದಾರೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಆನೆಯು ಕಾಡಿನತ್ತ ತೆರಳಿದ ನಂತರ ಯುವಕರು ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

Translate »