ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ
ಮಂಡ್ಯ

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ

July 12, 2018

ಮಂಡ್ಯ: ‘ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿರುವ ಎಲ್ಲಾ ಕೆರೆಗಳಿಗೆ ನಾಲೆಗಳ ನೇರ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಧಿಕಾರಿ ಗಳು ಶೀಘ್ರವೇ ಸಿದ್ಧಪಡಿಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಕಾವೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಿ.ಎಸ್. ಪುಟ್ಟರಾಜು ಹೇಳಿದರು.

ಬೆಂಗಳೂರಿನ ವಿಧಾನ ಸೌಧದ ಕೊಠಡಿ ಸಂಖ್ಯೆ 303ರಲ್ಲಿ ಬುಧವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ವ್ಯವಸಾಯಕ್ಕೆ ಸಹಕಾರಿಯಾಗು ವಂತಹ ಬಹಳಷ್ಟು ಕೆರೆಗಳು ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿ ಬರುತ್ತದೆ. ಕೆರೆಗಳಿಗೆ, ನಾಲೆಗಳ ನೇರ ಸಂಪರ್ಕ ಕಲ್ಪಿಸುವುರಿಂದ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವುದರ ಜೊತೆಗೆ ಅಂತರ್ಜ ಲದ ಮಟ್ಟ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತವಾಗಿ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.

ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಬಹಳಷ್ಟು ಪ್ರದೇಶಗಳಲ್ಲಿ ಕೆರೆಗಳು ಒತ್ತು ವರಿಯಾಗಿವೆ. ಸಂಬಂಧಪಟ್ಟ ಅಧಿಕಾರಿ ಗಳು ಕೆರೆ ಒತ್ತುವರಿಯನ್ನು ಶೀಘ್ರ ತೆರವು ಗೊಳಿಸಲು ಕ್ರಮವಹಿಸಬೇಕು. ನೀರಿನ ಸಂಚಾರವನ್ನು ಸುಗಮಗೊಳಿಸಲು ಹಾಗೂ ಸಂಗ್ರಹಿಸಲು ಕೆರೆಗಳು ಮತ್ತು ನಾಲೆಗಳಲ್ಲಿ ಬೆಳೆದಿರುವ ಗಿಡಗಂಟಿಗಳು ಹಾಗೂ ಹೂಳನ್ನು ತೆಗೆಯಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು. ಭತ್ತದ ಬೀಜವನ್ನು ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಲು ಕೃಷಿ ಇಲಾಖೆ ಮುಂದಾಗಬೇಕು.

ವಿತರಣೆಯಾಗುವ ಭತ್ತದ ಬೀಜಗಳ ಬಗ್ಗೆ ರೈತರಿಂದ ದೂರುಗಳು ಕೇಳಿಬರಬಾರದು. ಸರಬರಾಜು ಮಾಡುವ ಭತ್ತದ ಬೀಜ ಗುಣಮಟ್ಟದಾಗಿರಬೇಕು. ರಾಜ್ಯದೆಲ್ಲಡೆ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಜಲಾಶಯಗಳಿಗೆ ನೀರಿನ ಒಳ ಹರಿವು ದಿನದಿಂದ ದಿನ ಹೆಚ್ಚುತ್ತಿರುವ ಕಾರಣ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿರುವ ಕೆರೆಗಳನ್ನು ತುಂಬಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ನಾಲೆಗಳಿಗೆ ಈಗಾಗಲೇ ನೀರನ್ನು ಜಲಾ ಶಯಗಳಿಂದ ಹರಿಸುತ್ತಿದ್ದು, ಜು. 20 ರಿಂದ ಬೆಳೆಗಳಿಗೆ ನೀರನ್ನು ಬಿಡಲು ಅಧಿ ಕಾರಿಗಳು ಕ್ರಮವಹಿಸಬೇಕು. ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳು ಭರ್ತಿಯಾಗಿರುವ ಕಾರಣ, ನೀರಿನ ಹೊರ ಹರಿವನ್ನು ಹೆಚ್ಚಿಸಲಾಗಿದೆ. ಕೃಷ್ಣ ರಾಜಸಾಗರ ಜಲಾಶಯ ತುಂಬಲು ಕೇವಲ 8 ಅಡಿ ಬಾಕಿ ಉಳಿದಿದ್ದು, ಅದುವೂ ತುಂಬುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿರುವ ಜಲಾಶಯಗಳು ತುಂಬಿರುವುದು ರೈತರಿಗೆ ಸಂತಸವನ್ನು ತಂದಿದೆ ಎಂದು ಹೇಳಿದರು.

ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಶಾಸಕರಾದ ಎಂ.ಶ್ರೀನಿವಾಸ್, ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಯತೀಂದ್ರ, ಅಶ್ವಿನಿಕುಮಾರ್, ಅನಿಲ್ ಚಿಕ್ಕಮಾಧು, ನಾಗೇಂದ್ರ, ಮಹದೇವು, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಅಪ್ಪಾಜಿಗೌಡ, ಧರ್ಮ ಸೇನಾ, ಕಾವೇರಿ ನೀರಾವರಿ ನಿಗಮ ವ್ಯವ ಸ್ಥಾಪಕ ನಿರ್ದೇಶಕರಾದ ಹೆಚ್.ಎಲ್.ಪ್ರಸನ್ನ, ಸೂಪರಿಂಟೆಂಡಿಂಗ್ ಎಂಜಿನಿಯರ್ ಅಮರ್ ನಾಥ್, ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕಾವೇರಿ ನೀರಾ ವರಿ ನಿಗಮದ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

Translate »