ಮನೆಗಳ್ಳರ ಬಂಧನ: 18.56 ಲಕ್ಷ ಮೌಲ್ಯದ ವಸ್ತುಗಳ ವಶ
ಮಂಡ್ಯ

ಮನೆಗಳ್ಳರ ಬಂಧನ: 18.56 ಲಕ್ಷ ಮೌಲ್ಯದ ವಸ್ತುಗಳ ವಶ

July 12, 2018

ಶ್ರೀರಂಗಪಟ್ಟಣ:  ಹಗಲು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ 18,56,800ರೂ. ಮೌಲ್ಯದ ಚಿನ್ನ, ಬೆಳ್ಳಿ, ಟಿವಿ, ಸೀರೆಯನ್ನು ಕೆಆರ್‌ಎಸ್‌ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಾಲರಾಜ್(62), ಸೋಮಶೇಖರ್ ಅಲಿಯಾಸ್ ಸೋಮ(32), ಶ್ರೀಕಂಠ ಅಲಿಯಾಸ್ ಕಂಠ (32), ರಾಜು ಬಿನ್ ನಾಗರಾಜ(19) ಬಂಧಿತರಾಗಿದ್ದು, ಇವರೆಲ್ಲರು ಮೈಸೂರು ಜಿಲ್ಲೆ ಕೆ.ಆರ್.ನಗರದ ಪಟ್ಟಣದ ಬೋವಿ ಜನಾಂಗದ ಶ್ರೀರಾಮ ಬ್ಲಾಕ್‍ನ ನಿವಾಸಿ ಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು.

ಈ ನಾಲ್ವರು ಟಾಟಾ ಏಸ್ ವಾಹನವನ್ನು ಬಳಸಿಕೊಂಡು ಹಾಡುಹಗಲೇ ಮನೆಗಳ ಕಳ್ಳತನ ಮಾಡುತ್ತಿರುವ ಬಗ್ಗೆ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಇವರೆಲ್ಲರ ವಿರುದ್ಧ 14 ಪ್ರರಣಗಳು ದಾಖಲಾಗಿರು ವುದು ತಿಳಿದುಬಂದಿದೆ.

ಬಂಧಿತರಿಂದ 383 ಗ್ರಾಂ ಚಿನ್ನ, 2.890 ಕೆ.ಜಿ ಬೆಳ್ಳಿ, 10 ಸೀರೆಗಳು, ಒಂದು ಎಲ್‍ಇಡಿ ಟಿ.ವಿ ಹಾಗೂ ಒಂದು ಟಾಟಾ ಏಸ್ ಗೂಡ್ಸ್ ವಾಹನ ಸೇರಿದಂತೆ ಒಟ್ಟು 18,56,800 ಮೌಲ್ಯದಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಹಾಗೂ ಡಿವೈಎಸ್‍ಪಿ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಸಿ.ಎಂ.ರವೀಂದ್ರ, ಕೆಆರ್‌ಎಸ್‌ ಠಾಣೆಯ ಪಿಎಸ್‍ಐ ಬ್ಯಾಟರಾಯನಗೌಡ, ಗ್ರಾಮಾಂತರ ಠಾಣೆಯ ಪಿಎಸ್‍ಐ ಬಿ.ಎನ್.ಪುನೀತ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Translate »