ಅರಸೀಕೆರೆ ನಗರಸಭೆಯ ಜಾಣ ಕುರುಡು
ಹಾಸನ

ಅರಸೀಕೆರೆ ನಗರಸಭೆಯ ಜಾಣ ಕುರುಡು

July 12, 2018

ಅರಸೀಕೆರೆ: ಅರ್ಧಶತಕಕ್ಕೂ ಹೆಚ್ಚು ಐತಿಹ್ಯ ಹೊಂದಿರುವ ಅರಸೀಕೆರೆ ಶುಕ್ರವಾರ ಸಂತೆ ಮೈದಾನದಲ್ಲಿ ಮೂಲ ಸೌಲಭ್ಯವಿಲ್ಲದೆ ರೈತರು, ವ್ಯಾಪಾರಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ನಗರಸಭೆ ಜಾಣ ಕುರುಡು ಪ್ರದರ್ಶಿಸುತ್ತಿದೆ.

ನಗರದ ಶುಕ್ರವಾರ ಸಂತೇಮೈದಾನ ದಲ್ಲಿ ನಗರಸಭೆ ನಿರ್ಲಕ್ಷದಿಂದ ರೈತರು, ವ್ಯಾಪಾರಿಗಳು ತೊಂದರೆ ಅನುಭವಿ ಸುತ್ತಿದ್ದಾರೆ. ತಮ್ಮ ಉತ್ಪನ್ನಕ್ಕೆ ಬೆಲೆ ಇಲ್ಲದೆ ನಷ್ಟವಾಗುವುದು ಒಂದೆಡೆಯಾದರೆ, ಮೈದಾನದಲ್ಲಿ ಸೂಕ್ತ ಛಾವಣಿ , ಮೂಲ ಸೌಕರ್ಯವಿಲ್ಲದೆ ಮತ್ತೊಂದು ರೀತಿ ಸಂಕಷ್ಟ ಎದುರಿಸುವಂತಾಗಿದೆ.

ತಾಲೂಕಿಗೆ ವಾಣಿಜ್ಯ ಕೇಂದ್ರ: ಈ ಸಂತೇ ಮೈದಾನವು ತಾಲೂಕಿನ ಕಸಬಾ, ಜಾವಗಲ್, ಬಾಣಾವರ, ಕಣಕಟ್ಟೆ, ಗಂಡಸಿ ಹೋಬಳಿ ಗಳ ರೈತರು ಸೇರಿದಂತೆ ಅಕ್ಕ-ಪಕ್ಕದ ಇನ್ನಿ ತರೆ ತಾಲೂಕುಗಳ ರೈತಾಪಿ ಜನರು ತಾವು ಬೆಳೆದ ತರಕಾರಿ ಮತ್ತು ಕಾಯಿಪಲ್ಲೆ ಮಾರಾಟ ಮಾಡುವ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದರೂ ಪೂರಕ ಸೌಕರ್ಯ ವಿಲ್ಲದೆ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ನಿರೀಕ್ಷಿಸಲು ಪರಿತಪಿಸುವಂತಾಗಿದೆ.

ಗುಣಮಟ್ಟಕ್ಕೆ ಹೆಣಗಾಟ: ರೈತರು ಬರದಲ್ಲೂ ತಮ್ಮ ಜಮೀನಿನಲ್ಲಿ ಲಭ್ಯ ವಿರುವ ವಿವಿಧ ಮೂಲಗಳ ನೀರನ್ನು ಬಳಸಿ ಹಲವಾರು ಬಗೆಯ ತರಕಾರಿಗಳನ್ನು ಬೆಳೆದು ವಾರದ ಸಂತೆಯಲ್ಲಿ ತಂದು ಮಾರುವ ಪರಿಪಾಠ ಸುಮಾರು ಎಪ್ಪತ್ತು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದರೂ, ಇನ್ನೂ ತರಕಾರಿಗಳನ್ನು ರಕ್ಷಿಸಲು ಆಗದೆ ಬಿಸಿಲು, ಗಾಳಿ-ಮಳೆಗೆ ತಮ್ಮ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳಲು ರೈತರು, ವ್ಯಾಪಾರಿಗಳು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.

ದುಸ್ಥಿತಿಯಲ್ಲಿದೆ ಪ್ಲಾಟ್‍ಫಾರಂ: ಇಲ್ಲಿಯ ನಗರಸಭೆ ಈ ಹಿಂದೆಯೇ ರೈತರಿಗೆ ಅನುಕೂಲವಾಗಲೆಂದು ಪ್ಲಾಟ್‍ಫಾರಂ ಗಳನ್ನು ನಿರ್ಮಿಸಿದ್ದರೂ ಈಗಿವು ದುಸ್ಥಿತಿ ತಲುಪಿವೆ. ನಿರ್ಮಾಣವಾದಾಗಿನಿಂದಲೂ ಸೂಕ್ತ ರೀತಿಯಲ್ಲಿ ನಿರ್ವಹಿಸದಿರುವುದೇ ಇಂದಿನ ದುಸ್ಥಿತಿಗೆ ಕಾರಣವಾಗಿದೆ.

ಪ್ಲಾಸ್ಟಿಕ್ ಟಾರ್ಪಾಲೇ ಮೇಲ್ಛಾವಣಿ : ಮೇಲ್ಛಾವಣಿ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸದ ಪರಿಣಾಮ ಕೃಷಿ ಉತ್ಪನ್ನಗಳನ್ನು ಸಂತೇ ರಸ್ತೆಬದಿಯಲ್ಲೇ ಇಟ್ಟು ಮಾರಾಟ ಮಾಡುವಂತಾಗಿದೆ. ಬಿಸಿಲು ಮಳೆಯಿಂದ ತಮ್ಮನ್ನು ಹಾಗೂ ಉತ್ಪನ್ನಗಳನ್ನು ರಕ್ಷಿಸಲು ಪ್ಲಾಸ್ಟಿಕ್ ಟಾರ್ಪಾಲ್‍ಗಳನ್ನೇ ಮೇಲ್ಛಾವಣಿಗಾಗಿ ಬಳಸುವಂತಾಗಿದ್ದು, ಬಲವಾದ ಗಾಳಿ, ಬಿಸಿಲು, ಮಳೆ ಪ್ರಭಾವದಿಂದ ಕೃಷಿ ಉತ್ಪನ್ನಗಳನ್ನು ರಕ್ಷಿಸಲಾಗದೇ ರೈತರು, ವ್ಯಾಪಾರಸ್ಥರು ಕೈಕೈಹಿಸುಕಿಕೊಳ್ಳುತ್ತಿದ್ದಾರೆ.

ಮೂಲ ಸೌಕರ್ಯ ಕೊರತೆ: ರಕ್ಷಣೆ ಕೊರತೆ ಒಂದೆಡೆಯಾದರೆ ಮತ್ತೊಂದೆಡೆ ಮೂಲ ಸೌಲಭ್ಯಗಳ ಕೊರತೆ ಸಂತೆ ಮೈದಾನಕ್ಕೆ ಬರುವವರಿಗೆ ಪ್ರಮುಖ ಸಮಸ್ಯೆ ಯಾಗಿದೆ. ಸಾರ್ವಜನಿಕ ಶೌಚಾಲಯವಿಲ್ಲದೆ ಬಯಲನ್ನೇ ಆಶ್ರಯಿ ಸಬೇಕಿದ್ದು, ಕುಡಿಯುವ ನೀರಿಗೆ ಸಂಕಷ್ಟವಿದೆ. ಸ್ವಚ್ಛತೆಯಂತೂ ಇಲ್ಲಿ ಮರೀಚಿಕೆಯಾಗಿದೆ. ಇದರಿಂದ ಸಂತೆಗೆ ಬರುವವರೆಲ್ಲರೂ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಪ್ರತಿ ಸಂತೆಯಲ್ಲೂ ನೆಲ ಬಾಡಿಗೆ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ವಸೂಲಿ ಮಾಡುವ ಅರಸೀಕೆÀರೆ ನಗರಸಭೆ ಅಲ್ಲಿನ ಸಮಸ್ಯೆಗಳನ್ನು ಕಂಡೂ ಕಾಣದಂತಿರುವುದು ರೈತಾಪಿ ವರ್ಗ ಹಾಗೂ ಅವರ ಉತ್ಪನ್ನಗಳಿಗೆ ಯಾವ ರೀತಿ ನಿರ್ಲಕ್ಷ್ಯ ತೋರಲಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಜಾಣ ಕುರುಡನ್ನು ಪ್ರದರ್ಶಿಸುವ ಮೂಲಕ ನಗರಸಭೆ ಕೈ ಕಟ್ಟಿ ಕುಳಿತಿದೆಯೇ ಎಂಬ ಅನುಮಾನ ಕಾಡುತ್ತಿದ್ದು, ತಾಲೂಕಿನ ರೈತರ ಬಗ್ಗೆ ಸದಾ ಹೋರಾಟ ಮಾಡುವ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಈ ಸಮಸ್ಯೆಗಳು ಗಮನಕ್ಕೆ ಬಂದಿಲ್ಲವೇ ಎಂದು ರೈತರು, ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.

Translate »