ಮೈಸೂರು: ಸರ್ಕಾರಿ ಅಧಿಕಾರಿಗಳಿಗೆ ಅಧಿಕಾರದ ಮದ ತಲೆಗೇರಿದರೆ ಉತ್ತಮ ಅಧಿಕಾರಿ ಎನಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಸರ್ಕಾರಿ ಕೆಲಸ ಅನೇಕ ಸವಾಲು ಹೊಂದಿರುವುದಲ್ಲದೆ, ಕಠಿಣವಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಪಂ ಸಿಇಒ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಲಕ್ಷ್ಮೀಪುರಂ ಪ್ರೌಢಶಾಲೆಯ ಕೊಠಡಿಯಲ್ಲಿ ಭಾನುವಾರ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಬಡವರು, ಗ್ರಾಮೀಣ ಜನರು ಹಾಗೂ ರೈತರಿಗೆ ನೆರವಾಗುವುದಕ್ಕೆ ಮಾನವೀಯ ಮೌಲ್ಯವುಳ್ಳವರು ಹಾಗೂ ಬಡವರ ಪರ ಅನುಕಂಪ, ಕರುಣೆ, ಕಾಳಜಿಯುಳ್ಳವರು ಮಾತ್ರ ಸರ್ಕಾರಿ ಕೆಲಸಕ್ಕೆ ಸೇರುವುದು ಒಳ್ಳೆಯದು. ಸರ್ಕಾರಿ ಕೆಲಸ ಸಿಕ್ಕಿದ ನಂತರ ತಮ್ಮ ತವರು ಜಿಲ್ಲೆಯಲ್ಲಿಯೇ ಸೇವೆ ಸಲ್ಲಿಸಬೇಕು ಎಂದು ಪಟ್ಟುಹಿಡಿಯುವುದು ಸರಿಯಲ್ಲ. ನನ್ನ ಸೇವಾ ಅವಧಿಯಲ್ಲಿ 19 ಜಿಲ್ಲೆಗಳಿಗೆ ವರ್ಗಾವಣೆಗೊಂಡು ಕೆಲಸ ಮಾಡಿದ್ದೇನೆ. ಕೆಲವು ವೇಳೆ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಪೀಡಿತ ಪ್ರದೇಶ, ಗುಡ್ಡ ಕುಸಿದಿರುವ ಪ್ರದೇಶಗಳಲ್ಲಿಯೂ ಅಧಿಕಾರಿಗಳು ಸೇವೆ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಯಾವುದೇ ಜಿಲ್ಲೆಗಳಲ್ಲಿಯೂ ಕೆಲಸ ಮಾಡುವುದಕ್ಕೆ ಸಿದ್ಧವಿರುವ ದೃಢ ಸಂಕಲ್ಪ ಮಾಡಿಕೊಳ್ಳಬೇಕು. ಕೆಲಸ ಸಿಕ್ಕಾಗ ಇದೇ ಜಿಲ್ಲೆ ಬೇಕು ಎಂದು ಕೇಳಬಾರದು. ಸರ್ಕಾರವೇ ನಿಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ನೀವಾಗಿಯೇ ಅರ್ಜಿ ಸಲ್ಲಿಸಿ ಕೆಲಸಕ್ಕೆ ಸೇರಿರುವುದರಿಂದ ಯಾವುದೇ ಜಿಲ್ಲೆಗೆ ನಿಯೋಜನೆಗೊಂಡರೂ ಸೇವೆ ಸಲ್ಲಿಸುವುದಕ್ಕೆ ಸಿದ್ಧರಿರಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಅಧಿಕಾರಿಗಳಲ್ಲಿ ಎರಡು ವಿಧಗಳಿರುತ್ತವೆ. ಜನಪರ ಅಧಿಕಾರಿಗಳು ಹಾಗೂ ಜನಪ್ರಿಯ ಅಧಿಕಾರಿಗಳೆಂದು ವಿಂಗಡಿಸಬಹುದಾಗಿದೆ. ಸೇವೆಯಲ್ಲಿ ಬಡವರು, ಶೋಷಿತರ ಪರ ಕೆಲಸ ಮಾಡಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮನೋಭಾವವುಳ್ಳ ಜನಪರ ಅಧಿಕಾರಿಗಳಿದ್ದರೆ, ಮತ್ತಷ್ಟು ಮಂದಿ ಜನಪ್ರಿಯ ಅಧಿಕಾರಿಗಳಿದ್ದಾರೆ. ಜನಪರ ನಿಲುವು ಹೊಂದಿರುವ ಅಧಿಕಾರಿಗಳು ತಮ್ಮ ಸೇವೆಯಿಂದ ಜನಪ್ರಿಯರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಜನಪ್ರಿಯ ಅಧಿಕಾರಿಯಾಗಬೇಕೆಂಬ ಮನೋಭಾವದಿಂದ ಹಿಂದೆ ಸರಿದು, ಜನಪರ ಅಧಿಕಾರಿಯಾಗಬೇಕೆಂದು ಪಣ ತೊಡುವಂತೆ ಸಲಹೆ ನೀಡಿದ ಅವರು, ಹಣ ಮಾಡುವುದಕ್ಕಾಗಿ ಸರ್ಕಾರಿ ಕೆಲಸಕ್ಕೆ ಸೇರಬಾರದು. ಸರ್ಕಾರಿ ಕೆಲಸದಲ್ಲಿ ಹಣ ಮಾಡುವುದಕ್ಕೆ ಸಾಧ್ಯವಿಲ್ಲ. ಹಣ ಮಾಡಬೇಕು, ಸುಲಭವಾಗಿ ಜನಪ್ರಿಯತೆ ಗಳಿಸಬೇಕು ಎಂಬ ಮನೋಭಾವವಿದ್ದರೆ ಪ್ರತಿದಿನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಬೆಳಿಗ್ಗೆ ಗುಡ್ ಮಾರ್ನಿಂಗ್, ರಾತ್ರಿ ಗುಡ್ ನೈಟ್ ಹೇಳಿ ಮಲಗಿಸಿ ಬರಬೇಕಾದ ದುಸ್ಥಿತಿ ಒದಗಿ ಬರುತ್ತದೆ. ನಮ್ಮ ನಡುವೆ ಅಂತಹ ಅಧಿಕಾರಿಗಳು ಇದ್ದಾರೆ ಎಂದು ಅವರು ವಿಷಾದಿಸಿದರು.
ತ್ಯಾಗ ಮಾಡಿ: ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾಗಿರುವ ಅಭ್ಯರ್ಥಿಗಳು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಕೆಲವು ತ್ಯಾಗ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮೊಬೈಲ್, ಕಂಪ್ಯೂಟರ್ ಸೇರಿದಂತೆ ವಿವಿಧ ಯಾಂತ್ರಿಕ ವಸ್ತುಗಳ ಮೇಲೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರು ಮೊಬೈಲ್ ಬಳಕೆಯನ್ನು ತ್ಯಜಿಸಬೇಕು. ಕೆಲವು ಸಣ್ಣ ಪುಟ್ಟ ತ್ಯಾಗ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದರು.
ಓದುವ ಹವ್ಯಾಸ ಬೆಳೆಸಿಕೊಳ್ಳಿ: ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇದರಿಂದ ನಮ್ಮ ಸುತ್ತಮುತ್ತ ನಡೆಯುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಗಳು, ಪುಸ್ತಕಗಳು, ನಿಯತಕಾಲಿಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಸಾಧಿಸುವ ಛಲವಿದ್ದರೂ ಕೀಳರಿಮೆ, ಭಾಷೆಯ ಬಗೆಗಿನ ಭಯ ಮುಂತಾದ ಸಮಸ್ಯೆಗಳಿಂದ ನಲುಗುತ್ತಿರುತ್ತಾರೆ. ಅಂತಹವರು ನಿಮ್ಮ ಬಗೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಮ್ಮನ್ನು ಕಾಯುವವರು ನಾವೇ ಹೊರತು ಬೇರಾರೂ ಅಲ್ಲ. ಬೇರೆಯವರ ಮಾತಿಗೆ ಕಿವಿಗೊಡದೆ, ನಿಮ್ಮ ಕೆಲಸವನ್ನು ಮಾಡಿದಲ್ಲಿ ನೀವು ಗೆಲ್ಲುವುದು ಖಚಿತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಪ್ರೊಬೆಷನರಿ ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಬಗ್ಗೆ ಮಾರ್ಗದರ್ಶನ ನೀಡಿದರು. ಸಹಕಾರ ಇಲಾಖೆಯ ಜಂಟಿ ನಿಬಂಧಕ ಡಾ.ಹೆಚ್.ಆರ್.ಕೃಷ್ಣಯ್ಯಗೌಡ, ಪ್ರೊ.ರಾಫೆಲ್, ರವೀಂದ್ರಸ್ವಾಮಿ, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿದ್ದರು.