ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ
ಮಂಡ್ಯ

ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ

April 15, 2019
  • ಅಂಧಾಭಿಮಾನ ಪಕ್ಕಕ್ಕಿಟ್ಟು ಸ್ವಾಭಿಮಾನ ಎತ್ತಿ ಹಿಡಿಯಿರಿ
  • ಕೈ ಕೊಟ್ಟ ಮೈಕ್, ಗಂಟಲು, ಕೈ ಬೇನೆಯಿಂದ ಪ್ರಚಾರ ಮೊಟಕು

ಮಂಡ್ಯ,: ಈ ಬಾರಿಯ ಚುನಾವಣೆಯಲ್ಲಿ ಅಂಧಾಭಿಮಾನವನ್ನು ಪಕ್ಕಕ್ಕಿಟ್ಟು ಜಿಲ್ಲೆಯ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕು,ಆ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಕೈ ಹಿಡಿಯಬೇಕು ಎಂದು ಚಿತ್ರನಟ ದರ್ಶನ್ ಮನವಿ ಮಾಡಿದರು.

ಕೊಪ್ಪದಲ್ಲಿ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಪರವಾಗಿ ಪ್ರಚಾರದ ವೇಳೆ ಮಾತನಾಡಿದ ಅವರು, ಮಂಡ್ಯದತ್ತ ಇಡೀ ದೇಶ ನೋಡುತ್ತಿದೆ. ಮಂಡ್ಯದ ಜನ ಸ್ವಾಭಿಮಾನಕ್ಕೆ ಹೆಸರಾದವರು. ಎಂದಿಗೂ ಸ್ವಾಭಿಮಾನವನ್ನು ಬಿಡದೆ ಸುಮಲತಾ ಅಂಬರೀಶ್ ಅವರನ್ನು ಅತ್ಯಂತ ಅಧಿಕ ಮತ ಗಳಿಂದ ಗೆಲ್ಲಿಸಬೇಕು. ಕ್ರಮ ಸಂಖ್ಯೆ 20 ಕಹಳೆ ಊದುತ್ತಿರುವ ರೈತನ ಗುರುತಿಗೆ ಮತ ನೀಡಬೇಕು, ಯಾವುದೇ ಕಾರಣಕ್ಕೂ ಮತದಾನದ ದಿನ ಮತವನ್ನು ಮಾರಿಕೊಳ್ಳ ಬಾರದು ಎಂದು ಮನವಿ ಮಾಡಿದರು.
ಅಂಬರೀಶ್ ಅವರ ಕೈ ಇಂದು ನಮ್ಮ ಮೇಲಿಲ್ಲಾ. ನಿಮ್ಮಗಳ ಆಶೀರ್ವಾದ ಸುಮಲತಾ ಅವರಿಗೆ ಬೇಕಾಗಿದೆ. ಅಂಬರೀಶ್ ಅವರಿಗೆ ತೋರಿದ ಪ್ರೀತಿಯನ್ನು ಸುಮಲತಾ ಅವರಿಗೂ ತೋರಿಸಬೇಕಿದೆ. ಯಾವುದೇ ಅಪ ಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.

ಪ್ರಚಾರ ಮೊಟಕು!: ಕಳೆದ ಕೆಲ ದಿನ ಗಳಿಂದ ಪ್ರಚಾರ ಮಾಡಿದ್ದರಿಂದ ದರ್ಶನ್ ಅವರಿಗೆ ಗಂಟಲು ನೋವು, ಕೈನೋವು ಕಾಣಿಸಿಕೊಂಡಿತ್ತು. ಗಂಟಲು ನೋವಿದ್ದರೂ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು. ಇಂದು ಪ್ರಚಾರ ನಡೆಸುತ್ತಿದ್ದಾಗ ಮೈಕ್ ಆಗಾಗ ಕೈ ಕೊಡುತಿತ್ತು. ಗಂಟಲು ಕಟ್ಟಿಕೊಂ ಡಿದ್ದ ಕಾರಣ ಮೈಕ್ ಇಲ್ಲದೆ ಭಾಷಣ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಇಂದು ಕೇವಲ ನಾಲ್ಕು ಊರುಗಳಲ್ಲಿ ಮಾತ್ರ ಪ್ರಚಾರ ಮಾಡಿ ನಂತರ ತಮ್ಮ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿದರು.

ನಾಳೆ ಮತ್ತೆ ದರ್ಶನ್ ತಮ್ಮ ಪ್ರಚಾರ ಮುಂದುವರಿಸಲಿದ್ದಾರೆ. ಇತ್ತ ದರ್ಶನ್ ವಾಪಸ್ ಹೋದ ವಿಷಯ ಗೊತ್ತಿಲ್ಲದೇ ಹೆಮ್ಮನಹಳ್ಳಿ, ಸೋಮನಹಳ್ಳಿ ಸೇರಿ ಹಲವು ಗ್ರಾಮಗಳ ಜನ ರಸ್ತೆಯಲ್ಲಿ ಸಾರಥಿಗಾಗಿ ಕಾದು ನಿಂತಿದ್ದುದು ಕಂಡು ಬಂತು.

ದರ್ಶನ್‍ಗೆ ಹಾರ ತುರಾಯಿ; ಮದ್ದೂರಿನ ತೂಬಿನಕೆರೆಯಲ್ಲಿ ದರ್ಶನ್‍ಗೆ ಅಭಿಮಾನಿ ಗಳು ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿ ದರು. ಎರಡು ಜೆಸಿಬಿ ಮೂಲಕ ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿ ಅಭಿಮಾನಿ ಗಳು ಸಂಭ್ರಮಿಸಿದರು. ಪ್ರಚಾರ ಮಾರ್ಗದ ನಡುವೆ ರೈತ ಸಂಘದ ಹಸಿರು ಶಾಲನ್ನು ತಿರುಗಿಸಿ ರೈತರ ಗಮನ ಸೆಳೆದರು. ಮುಸ್ಲಿಂ ಯುವಕರಿಂದ ಅಭಿನಂದನೆ ಸ್ವೀಕರಿಸಿದರು. ಮಾಜಿ ಶಾಸಕ ಎನ್. ಚಲುವರಾಯಸ್ವಾಮಿ ಮತ್ತು ಅಂಬರೀಶ್ ಪರ ಘೋಷಣೆಗಳು ಮೊಳಗಿದವು. ಅಭಿಮಾನಿಯೊಬ್ಬ ದರ್ಶನ್‍ಗೆ ಮುತ್ತು ನೀಡಿ ಅಭಿಮಾನ ಮೆರೆದರು. ನೂಕು ನುಗ್ಗಲು ಉಂಟಾಗಿ ಪೊಲೀಸರು ಅಭಿಮಾನಿ ಗಳ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಮದ್ದೂರಿನ ಕೆಸ್ತೂರಿನಲ್ಲಿ ಮಾತನಾಡು ವಾಗಲೂ ಮೈಕ್ ಕೈ ಕೊಡ್ತಿದ್ದ ಕಾರಣ ದರ್ಶನ್ ಸಿಟ್ಟಾದರು. ಅಲ್ಲದೆ ತಮ್ಮ ಕೈಲಿದ್ದ ಮೈಕನ್ನು ಕೆಳಕ್ಕೆ ಎಸೆದ ಪ್ರಸಂಗವೂ ನಡೆಯಿತು.ಗ್ರಾಪಂ ಮಾಜಿ ಸದಸ್ಯ ಕೊಪ್ಪ ದಿವಾಕರ್ ಸೇರಿದಂತೆ ಇತರರು ಇದ್ದರು.

Translate »