ಅ.2ಕ್ಕೆ ಬಾನೆತ್ತರದಲ್ಲಿ ಚಿತ್ತಾರ ಮೂಡಿಸುವ ದಸರಾ ಏರ್‍ಶೋ
ಮೈಸೂರು

ಅ.2ಕ್ಕೆ ಬಾನೆತ್ತರದಲ್ಲಿ ಚಿತ್ತಾರ ಮೂಡಿಸುವ ದಸರಾ ಏರ್‍ಶೋ

September 20, 2019

ಮೈಸೂರು, ಸೆ.19(ಪಿಎಂ)-ದಸರಾ ಮಹೋ ತ್ಸವದ ವಿಶಿಷ್ಟ ಆಕರ್ಷಣೆ ಬಾನೆತ್ತರದಲ್ಲಿ ನಡೆಯುವ ವಿಮಾನಗಳ ಕರಾಮತ್ತು. ಇಂತಹ ವೈಮಾನಿಕ ವೈಶಿಷ್ಟ್ಯ `ಏರ್ ಶೋ’ ಈ ಬಾರಿ ಅ.2ರಂದು ನಡೆ ಯುವುದು ಬಹುತೇಕ ಖಚಿತವಾಗಿದೆ.

ಕಳೆದ ವರ್ಷದ `ಏರ್ ಶೋ’ ಅಂತಹ ವೈವಿಧ್ಯತೆ ಇಲ್ಲದೆ, ಬಹುಬೇಗನೆ ಅಂತ್ಯಗೊಂಡಿತು ಎಂಬ ಸಾರ್ವ ಜನಿಕರ ಬೇಸರವನ್ನು ಗಂಭೀರವಾಗಿ ಪರಿಗಣಿಸಿ, ಈ ಬಾರಿ ಪರಿಪೂರ್ಣ `ಏರ್ ಶೋ’ ನೀಡಬೇಕೆಂದು ರಕ್ಷಣಾ ಸಚಿವಾಲಯಕ್ಕೆ ಮನವಿ ಸಹ ಮಾಡಲಾಗಿದೆ. ಹೀಗಾಗಿ ಏರ್ ಶೋ ನಡೆಯುವ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಅಂದು ಲೋಹದ ಹಕ್ಕಿಗಳ ಕಲರವ ವೈವಿಧ್ಯಮಯದಿಂದ ಕಳೆಗಟ್ಟುವ ನಿರೀಕ್ಷೆ ಇದೆ.

ಗುರುವಾರ ಬನ್ನಿಮಂಟಪ ಪಂಜಿನ ಕವಾಯತು ಮೈದಾನಕ್ಕೆ ಭೇಟಿ ನೀಡಿದ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ವಿಜಯ ದಶಮಿಯ ರಾತ್ರಿಯಂದು ನಡೆಯಲಿರುವ ಪಂಜಿನ ಕವಾಯತು ಕಾರ್ಯಕ್ರಮ ಸಂಬಂಧ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಪೂರ್ವ ಸಿದ್ಧತೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿ ವರು, ಒಂದು ಸಣ್ಣ ನ್ಯೂನತೆಯೂ ಆಗದಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಿದರು.

ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅ.2ರಂದು ಇಲ್ಲಿ ಏರ್ ಶೋ ನಡೆಯಲಿದ್ದು, ಈ ಬಾರಿ ಪರಿಪೂರ್ಣ ಪ್ರದರ್ಶನ ನೀಡುವಂತೆ ಮನವಿ ಮಾಡಲಾ ಗಿದೆ. ಇದರ ಜವಾಬ್ದಾರಿಯನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ನೀಡಲಾಗಿದೆ. ಶೀಘ್ರದಲ್ಲೇ ಅವರು ಈ ಬಗ್ಗೆ ಸಂಪೂರ್ಣ ವಿವರ ನೀಡಲಿದ್ದಾರೆ. ಅ.6ರೊಳಗೆ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಪೂರ್ಣ ಪ್ರಮಾಣದ ಸಿದ್ಧತೆ ನಡೆಸಲಾಗುವುದು. ಸಾಮಾನ್ಯ ಜನತೆ ಕಾರ್ಯ ಕ್ರಮ ನೋಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು, ನ್ಯಾಯಮೂರ್ತಿ ಗಳು ಸೇರಿದಂತೆ ಗಣ್ಯಾತಿಗಣ್ಯರಿಗೆ ಸೂಕ್ತ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನ 30 ಎಕರೆ ವಿಸ್ತೀರ್ಣ ಹೊಂದಿದ್ದು, ಇದೀಗ 32 ಸಾವಿರಕ್ಕೆ ಆಸನ ವ್ಯವಸ್ಥೆ ವಿಸ್ತರಿಸಲಾಗಿದೆ. ಆ ಮೂಲಕ ಬಹು ಆಕರ್ಷಣೀಯವಾದ ಪಂಜಿನ ಕವಾಯತು ಪ್ರದರ್ಶನ ವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು ವೀಕ್ಷಿ ಸಲು ಅವಕಾಶ ಕಲ್ಪಿಸಲಾಗಿದೆ. ಪಂಜಿನ ಕವಾಯತು ಮೈದಾನದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 6.45 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಎಲ್ಲಾ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಾಡಹಬ್ಬ ಆಚರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಸೆ.25ಕ್ಕೆ ಸಭೆ: ಪ್ರತಿಯೊಬ್ಬ ಸಚಿವರೂ ಒಂದೊಂದು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿ ಸಲು ಉದ್ದೇಶಿಸಲಾಗಿದೆ. ದಸರಾ ಮಹೋತ್ಸವದಲ್ಲಿ ಕಾನೂನು-ಸುವ್ಯವಸ್ಥೆ ಕಾಯ್ದುಕೊಳ್ಳುವ ಸಂಬಂಧ ಸೆ.25ರಂದು ಡಿಐಜಿ, ಮೈಸೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಲು ಉದ್ದೇಶಿಸಿದ್ದೇನೆ. ಸಾಧ್ಯವಾದರೆ ಗೃಹ ಸಚಿ ವರು ಹಾಗೂ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಈ ಬಗ್ಗೆ ಗೃಹ ಸಚಿವರೊಂದಿಗೆ ಪ್ರಸ್ತಾಪಿಸಿದ್ದು, ಅವರಿಂದ ಸಕಾರಾ ತ್ಮಕ ಸ್ಪಂದನೆ ಸಿಕ್ಕಿದೆ ಎಂದು ವಿ.ಸೋಮಣ್ಣ ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಧ್ಯಮ ದವರೊಂದಿಗೆ ಮಾತನಾಡಿ, ಅ.2ಕ್ಕೆ ಏರ್ ಶೋ ನಡೆ ಯುವುದು ಬಹುತೇಕ ಖಚಿತವಾಗಿದೆ. ಏರ್ ಶೋ ಆಯೋಜನೆ ಕುರಿತಂತೆ ರಕ್ಷಣಾ ಮಂತ್ರಿಗಳು ಹಾಗೂ ಏರ್ ಚೀಫ್ ಮಾರ್ಷಲ್ ಅವರಿಗೆ ಪತ್ರ ಬರೆಯ ಲಾಗಿತ್ತು. ಈ ಬಗ್ಗೆ ರಕ್ಷಣಾ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರಂತರ ಸಂಪರ್ಕದಲ್ಲಿದ್ದು, ಹೀಗಾಗಿ ಅ.2ಕ್ಕೆ ಏರ್ ಶೋ ನಡೆ ಯುವುದು ಬಹುತೇಕ ಖಚಿತ. ಕಳೆದ ವರ್ಷ ಕೇವಲ 4 ಚಟುವಟಿಕೆಗಳಿಗೆ ಏರ್ ಶೋ ಸೀಮಿತಗೊಂಡಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚು ವೈವಿಧ್ಯತೆಯ ಕಾರ್ಯಕ್ರಮ ನೀಡಬೇಕೆಂದು ಮನವಿ ಮಾಡಲಾಗಿದೆ. ಈ ಬಗ್ಗೆ ಯಾವ ನಿಲುವು ತಾಳಲಾಗುತ್ತದೆ ಎಂದು ಕಾದು ನೋಡಬೇಕು ಎಂದರು. ಮೇಯರ್ ಪುಷ್ಪಲತಾ ಜಗನ್ನಾಥ್, ಡಿಸಿಪಿ ಮುತ್ತುರಾಜ್, ಮುಡಾ ಆಯುಕ್ತ ಕಾಂತರಾಜು, ಉಪ ವಿಭಾಗಾಧಿಕಾರಿ ವೆಂಕಟರಾಜು, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್, ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಮತ್ತಿತರರು ಹಾಜರಿದ್ದರು.

ಚಿತ್ರ ಸಂತೆ-ಹಸಿರು ಸಂಜೆ ಸ್ವರೂಪದಲ್ಲಿ ಓಪನ್ ಸ್ಟ್ರೀಟ್ ಫೆಸ್ಟಿವಲ್
ಮೈಸೂರು: ಓಪನ್ ಸ್ಟ್ರೀಟ್ ಫೆಸ್ಟಿವಲ್ ರದ್ದು ಎನ್ನುವುದಕ್ಕಿಂತ ಅದರ ಸ್ವರೂಪ ಬದಲಾಗಿದೆ. ಅದೇ ಮಾದರಿಯಲ್ಲಿ ಚಿತ್ರ ಸಂತೆ ಹಾಗೂ ಹಸಿರು ಸಂತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ತಿಳಿಸಿದರು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ಓಪನ್ ಸ್ಟ್ರೀಟ್ ಫೆಸ್ಟಿವಲ್ ರದ್ದು ಎನ್ನಲಾಗದು. ಅದೇ ಮಾದರಿಯಲ್ಲಿ ಚಿತ್ರ ಸಂತೆ-ಹಸಿರು ಸಂತೆ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಿತ್ರಕಲಾ ಪರಿಷತ್ ಎದುರು ನಡೆಯುವಂತೆ ಈ ಕಾರ್ಯಕ್ರಮ ನಡೆಸಲು ಉದ್ದೇ ಶಿಸಿದ್ದು, ಮಕ್ಕಳು, ಯುವ ಜನರ ಚಿತ್ರಕಲೆ ಅನಾವರಣಕ್ಕೆ ಇಲ್ಲಿ ಅವ ಕಾಶ ದೊರೆಯಲಿದೆ. ಜೊತೆಗೆ ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ಕಳೆದ ವರ್ಷ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆದ ಮೈಸೂರಿನ ಕೃಷ್ಣರಾಜ -ಬುಲೇವಾರ್ಡ್ ರಸ್ತೆಯಲ್ಲಿ ಚಿತ್ರಸಂತೆ-ಹಸಿರು ಸಂತೆ ಆಯೋಜಿಸಲು ಸಿದ್ಧತೆ ನಡೆದಿದೆ. ಕಳೆದ ಬಾರಿ ಇಲ್ಲಿ ಬೀದಿದೀಪ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿ ಕೆಲ ಅಹಿತಕರ ಘಟನೆ ನಡೆದಿತ್ತು. ಹೀಗಾಗಿ ಯಾವುದೇ ಅನಾಹುತಕ್ಕೆ ಆಸ್ಪದ ನೀಡಬಾರದೆಂಬ ದೃಷ್ಟಿಯಿಂದ ಬೆಳಕಿರುವಾಗಲೇ ಕಾರ್ಯಕ್ರಮ ಮುಕ್ತಾಯಗೊಳಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ ಎಂದು ವಿವರಿಸಿದರು.

Translate »