ಮೈಸೂರು ಅರಮನೆಯಲ್ಲಿ ದಸರಾ ವೈಭೋಗ: ಚಾಮರಾಜನಗರದಲ್ಲಿ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಮನೆ ಅನಾಥ
ಚಾಮರಾಜನಗರ

ಮೈಸೂರು ಅರಮನೆಯಲ್ಲಿ ದಸರಾ ವೈಭೋಗ: ಚಾಮರಾಜನಗರದಲ್ಲಿ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಮನೆ ಅನಾಥ

October 20, 2018

ಚಾಮರಾಜನಗರ: ಮೈಸೂರಿನಲ್ಲಿ ನಡೆಯುವ ದಸರಾವನ್ನು ಇಡೀ ವಿಶ್ವವೇ ನೋಡಿದೆ. ಆದರೆ ಮೈಸೂರ ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳವಾದ ಚಾಮರಾಜನಗರದಲ್ಲಿರುವ ಜನನ ಮಂಟಪ ಭೂತಬಂಗಲೆಯಾಗಿ ಅನಾಥವಾಗಿದೆ. ಅಲ್ಲದೇ ಕುಡುಕರ ಆವಾಸ ಸ್ಥಾನ, ಕಸದ ಕೊಂಪೆ, ಮೂತ್ರ ವಿಸರ್ಜನೆಯ ತಾಣವಾಗಿರುವುದು ವಿಪರ್ಯಾಸ.

ಮೈಸೂರು ರಾಜಮನೆತನಕ್ಕೂ, ಚಾಮರಾಜನಗರಕ್ಕೂ ಅವಿನಾಭಾವ ಸಂಬಂಧವಿದೆ. ಮೈಸೂರು ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ 1776ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ಈ ನೆನಪಿಗಾಗಿಯೇ ಇಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ವೇಳೆ ಅರಿಕುಠಾರ ಎಂದು ಕರೆಯುತ್ತಿದ್ದ ಈ ಊರಿಗೆ ಚಾಮರಾಜನಗರ ಎಂದು ನಾಮಕರಣ ಮಾಡಲಾಯಿತು. ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಸ್ಥಳವನ್ನು ಜನನ ಮಂಟಪ ಎಂದೇ ಕರೆಯಲಾಗುತ್ತಿದೆ. ಈಗ ಈ ಜನನ ಮಂಟಪವನ್ನು ಹೇಳುವವರು, ಕೇಳುವವರು ಯಾರೂ ಇಲ್ಲದೆ, ಅನಾಥವಾಗಿದೆ.

ಶ್ರೀ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಈ ಜನನ ಮಂಟಪ ಇದ್ದು, ಈ ಮಂಟಪದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಈ ವಿವಾದ ನ್ಯಾಯಾಲಯದ ಹಂತಕ್ಕೂ ಸಹ ಹೋಗಿತ್ತು.

ಅರಸು ಮನೆತನ ಸೇರಿದಂತೆ ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜನನ ಮಂಟಪ, ಹಾಳು ಕೊಂಪೆಯಾಗಿದ್ದು, ಭೂತ ಬಂಗಲೆಯಂತೆ ಕಾಣುತ್ತಿದೆ. ಮಂಪಟದ ಸುತ್ತ ಕಸದ ರಾಶಿ ತುಂಬಿದ್ದು, ಕಣ್ಣಿಗೆ ರಾಚುತ್ತಿದೆ. ಅಲ್ಲದೆ ಮೂತ್ರ ವಿಸರ್ಜನೆಯ ಸ್ಥಳವಾಗಿ ಎಲ್ಲೆಡೆ ದುರ್ವಾಸನೆ ಬೀರುತ್ತಿದೆ. ಇದರಿಂದ ಈ ಜನನ ಮಂಟಪ ನೋಡಿದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರಿನ ದಸರಾ ಭಾಗವಾಗಿ ಚಾಮರಾಜನಗರದಲ್ಲಿ ಈ ಬಾರಿ ನಾಲ್ಕು ದಿನಗಳ ಕಾಲ ದಸರಾ ಮಹೋತ್ಸವ ವನ್ನು ಜಿಲ್ಲಾಡಳಿತ ಮತ್ತು ಮೈಸೂರು ದಸರಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಆಚರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ರಂಜನೀಯ ಕಾರ್ಯ ಕ್ರಮಗಳನ್ನು ನಡೆಸಲಾಯಿತು. ನಗರದ ಬಹುತೇಕ ರಸ್ತೆಗಳಿಗೆ ದೀಪಾಲಂಕಾರವನ್ನೂ ಮಾಡಲಾಗಿತ್ತು. ದಸರಾ ಮಹೋತ್ಸವವು ಅತ್ಯಂತ ಯಶಸ್ವಿಯೂ ಆಯಿತು. ಆದರೆ, ಮೈಸೂರು ಅರಸರಾಗಿದ್ದ ಚಾಮರಾಜೇಂದ್ರ ಒಡೆಯರ್ ಹುಟ್ಟಿದ ಜಾಗ ಜನನ ಮಂಟಪವನ್ನು ಉಳಿಸುವ ಆಲೋಚನೆ ಅರಸು ಮನೆ ತನಕ್ಕೆ ಆಗಲೀ ಅಥವಾ ಜಿಲ್ಲಾಡಳಿತಕ್ಕೆ ಆಗಲೀ ಇಲ್ಲದೇ ಇರುವುದು ವಿಪರ್ಯಾಸ ಎಂದು ನಾಗರಿಕರು ಅತ್ಯಂತ ಬೇಸರ ವ್ಯಕ್ತಪಡಿಸಿ ಮಾತನಾಡಿ ಕೊಳ್ಳುತ್ತಿದ್ದುದು ಕಂಡುಬಂತು.

Translate »