ಮೈಸೂರಲ್ಲಿ ಭರದಿಂದ ಸಾಗಿದೆ ದೀಪಾಲಂಕಾರ
ಮೈಸೂರು

ಮೈಸೂರಲ್ಲಿ ಭರದಿಂದ ಸಾಗಿದೆ ದೀಪಾಲಂಕಾರ

September 14, 2019

ಮೈಸೂರು,ಸೆ.13(ವೈಡಿಎಸ್)-ದಸರಾಗೆ ದಿನಗಣನೆ ಆರಂಭ ವಾಗಿದ್ದು, ನಗರದಲ್ಲೆಡೆ ದೀಪಾಲಂಕಾರ ಕಾರ್ಯ ಭರ ದಿಂದ ಸಾಗುತ್ತಿದೆ. ನಗರದ ಮುಖ್ಯರಸ್ತೆಗಳಲ್ಲಿ ದೀಪಾಲಂಕರದ ಸಿದ್ಧತೆ ಬಿರುಸುಗೊಂಡಿದ್ದು, ಹಾರ್ಡಿಂಜ್ ವೃತ್ತದಿಂದ ಜೆಎಸ್‍ಎಸ್ ಮಹಾವಿದ್ಯಾಪೀಠ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ, ಜೆಎಲ್‍ಬಿ ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ಮಾನಸ ಗಂಗೋತ್ರಿ ಬಯಲುರಂಗ ಮಂದಿರ ರಸ್ತೆ ಸೇರಿದಂತೆ ಮತ್ತಿತರೆ ರಸ್ತೆಗಳಲ್ಲಿ ದೀಪಾಲಂಕಾರ ಅಳವಡಿಕೆ ಕಾರ್ಯ ಆರಂಭಗೊಂಡಿದೆ.

ಕೆ.ಆರ್.ಆಸ್ಪತ್ರೆ ಸಮೀಪದಲ್ಲಿ ಹಸಿರು ಚಪ್ಪರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜತೆಗೆ ನ್ಯಾಯಾಲಯದ ಮುಂಭಾಗ ವಿರುವ ಮರಗಳಿಗೆ ಬಣ್ಣದ ದೀಪಗಳನ್ನು ಅಳವಡಿಸಲಾಗುತ್ತಿದೆ.

ಬಣ್ಣದ ದೀಪಗಳಿಂದ ಮಿಂದೆದ್ದ ಗಂಗೋತ್ರಿ ರಸ್ತೆ: ಮಾನಸಗಂಗೋ ತ್ರಿಯ ಬಯಲು ರಂಗಮಂದಿರದಲ್ಲಿ ಸೆ.17ರಿಂದ ದಸರಾ ಯುವ ಸಂಭ್ರಮ ಆರಂಭವಾಗಲಿದ್ದು, ಈಗಾಗಲೇ ಈ ರಸ್ತೆಗೆ ದೀಪಾ ಲಂಕಾರ ವ್ಯವಸ್ಥೆ ಮಾಡಲಾಗುತ್ತಿದೆ. ಅಳವಡಿಸಿದ್ದ ಲೈಟಿಂಗ್ ಪರೀಕ್ಷಿಸಲು ಇಂದು ಸಂಜೆ ಆನ್ ಮಾಡಿದಾಗ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ಚಾಮರಾಜ ಒಡೆಯರ್ ವೃತ್ತದ ಡಾ.ರಾಜ್‍ಕುಮಾರ್ ಉದ್ಯಾನವನದ ಬಳಿಯ ಚರಂಡಿಯ ಹೂಳನ್ನು ತೆಗೆದು ಸ್ಲ್ಯಾಬ್ ಅಳವಡಿಸಲಾಗುತ್ತಿದೆ. ಜತೆಗೆ ತಿಲಕ್ ನಗರದ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಂಭಾಗದ ಚರಂಡಿಯ ಹೂಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ.

ದಸರಾ ಸಮೀಪಿಸುತ್ತಿದ್ದರೂ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಜಿಲ್ಲಾಡಳಿತದಿಂದ ಯಾವುದೇ ಸಿದ್ಧತೆಗಳ ಆರಂಭ ವಾಗಿಲ್ಲ. ಆದರೆ, ಪೊಲೀಸರು ಮಾತ್ರ, ಮೈದಾನದ ನಕ್ಷೆ ಹಿಡಿದು, ಪಂಜಿನ ಕವಾಯಿತಿಗೆ ಬರುವ ಗಣ್ಯರು, ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತು ಪರಿಶೀಲನೆ ನಡೆಸಿದ್ದಾರೆ.

ದಸರಾ ವಸ್ತುಪ್ರದರ್ಶನ ನಿರ್ವಹಣೆಗೆ ಮೂವರಿಂದ ಟೆಂಡರ್ ಸಲ್ಲಿಕೆ
ಮೈಸೂರು,ಸೆ.13(ವೈಡಿಎಸ್)- ದಸರಾ ಮಹೋತ್ಸವದಲ್ಲಿ ಅಕರ್ಷಣೀಯವಾಗಿರುವ ದಸರಾ ವಸ್ತುಪ್ರದರ್ಶನ ನಿರ್ವಹಣೆಗೆ ಗುತ್ತಿಗೆದಾರರು ಉತ್ಸುಕತೆ ತೋರಿದ್ದು, ಪ್ರಾಧಿ ಕಾರವು ನಿಗದಿಪಡಿಸಿರುವ ಟೆಂಡರ್‍ಗಿಂತ ಹೆಚ್ಚಿನ ಮೊತ್ತಕ್ಕೆ ಗುತ್ತಿಗೆದಾರರು ಕೋಟ್ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ದಸರಾಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ಪ್ರಾಧಿಕಾರವು 7.34 ಕೋಟಿ ರೂ.ಗೆ ಟೆಂಡರ್ ಕರೆದಿದ್ದು, ಇದರಲ್ಲಿ ಮೂವರು ಗುತ್ತಿಗೆ ದಾರರು ಭಾಗವಹಿಸಿದ್ದಾರೆ. ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದು, ಸೆ.16 ಅಥವಾ 17ರಂದು ಅನುಮತಿ ಸಿಗಲಿದೆ. ಈ ಮೂವರು ಗುತ್ತಿಗೆದಾರರಲ್ಲಿ ಫನ್ ವಲ್ರ್ಡ್ ಅಂಡ್ ರೆಸಾರ್ಟ್ ಇಂಡಿಯಾ ಪ್ರೈ.ಲೀ ವಿನೋದ್ ಕುಮಾರ್ (8.25 ಕೋಟಿ ರೂ.), ಅಶ್ವಿನಿ ಎಂಟರ್‍ಪ್ರೈಸರ್ಸ್ ಅಂಡ್ ಬಿಲ್ಡಿಂಗ್‍ನ ಜಿ.ಮಂಜು (7,77,99,999 ರೂ.) ಹಾಗೂ ಬೆಂಗಳೂರು ಸೇಲ್ಸ್ ಅಂಡ್ ಮಾರ್ಕೆಟಿಂಗ್‍ನ ಬಾಬುಲಾಲ್ (7,46,19,333 ರೂ.) ಅವರು ಟೆಂಡರ್ ಮೊತ್ತಕ್ಕಿಂತ ಹೆಚ್ಚಿನ ಮೊತ್ತ ಕೋಟ್ ಮಾಡಿ ಟೆಂಡರ್ ಸಲ್ಲಿಸಿದ್ದಾರೆ.

`ಲಾನ್’ ಅಭಿವೃದ್ಧಿ: ವಸ್ತುಪ್ರದರ್ಶನದ ಮುಂಭಾಗದಲ್ಲಿ ಮುರಿದು ಬಿದ್ದಿದ್ದ ವಿದ್ಯುತ್ ಕಂಬವನ್ನು ದುರಸ್ತಿಗೊಳಿಸುವ ಜತೆಗೆ ಸಿಮೆಂಟ್‍ನಿಂದ ಭದ್ರಪಡಿಸಲಾಗುತ್ತಿದೆ. ಹಾಗೆಯೇ ಆವರಣದಲ್ಲಿನ ಪ್ರಾಧಿಕಾರದ ಕಚೇರಿ ಸಮೀಪದ ಹಾಗೂ ರಸ್ತೆಯ ಎರಡೂ ಬದಿಗಳಲ್ಲಿ ನೀರಿನ ಕಾರಂಜಿಗಳಿದ್ದ `ಲಾನ್’ನ ಅಭಿವೃದ್ಧಿ ಕಾರ್ಯವೂ ಚುರುಕಾಗಿ ನಡೆಯುತ್ತಿದೆ.

ಹುಲ್ಲು ಹಾಸು: ಕಳೆದ 20 ವರ್ಷದಿಂದ ಅಭಿವೃದ್ಧಿ ಕಾಣದ ಲಾನ್ ಅನ್ನು ಜನಾಕರ್ಷಿ ಸುವಂತೆ ಮಾಡಲಾಗುತ್ತಿದ್ದು, ಹೊರಗಿನಿಂದ ಕೆಮ್ಮಣ್ಣು ತಂದು ಅದರೊಂದಿಗೆ ಗೊಬ್ಬರ, ಬೇವಿನ ಹಿಂಡಿ ಮಿಶ್ರಣ ಮಾಡಿ ಲಾನ್‍ನ ಮಧ್ಯಭಾಗಕ್ಕೆ ಸುರಿದು ಸಮತಟ್ಟು ಮಾಡಲಾಗುತ್ತಿದೆ. ನಂತರ ಅವರ ಮೇಲೆ ಹುಲ್ಲುಹಾಸು ಹಾಕುತ್ತಿದ್ದು, ಮತ್ತಷ್ಟು ಕಂಗೊಳಿಸುವಂತೆ ಮಾಡಲಾಗುತ್ತಿದೆ ಎಂದು ಸಿಇಓ ಗಿರೀಶ್ ತಿಳಿಸಿದರು.

Translate »