ಮೈಸೂರಲ್ಲಿ ದಸರಾ ಭದ್ರತಾ ಸಭೆ ನಡೆಸಿದ ಎಡಿಜಿಪಿ ಅಮರ್‍ಕುಮಾರ್ ಪಾಂಡೆ
ಮೈಸೂರು

ಮೈಸೂರಲ್ಲಿ ದಸರಾ ಭದ್ರತಾ ಸಭೆ ನಡೆಸಿದ ಎಡಿಜಿಪಿ ಅಮರ್‍ಕುಮಾರ್ ಪಾಂಡೆ

September 14, 2019

ಮೈಸೂರು, ಸೆ. 13(ಆರ್‍ಕೆ)- ಎಡಿಜಿಪಿ (ಕಾನೂನು-ಸುವ್ಯವಸ್ಥೆ) ಅಮರ್‍ಕುಮಾರ್ ಪಾಂಡೆ ಅವರು ಇಂದು ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ದಸರಾ ಮಹೋ ತ್ಸವದ ಬಂದೋಬಸ್ತ್ ಕುರಿತಂತೆ ಸಭೆ ನಡೆಸಿದರು.
ಆರಂಭದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ದಸರಾಗೆ ಮಾಡಿಕೊಂಡಿರುವ ಭದ್ರತಾ ಹಾಗೂ ಸುಗಮ ಸಂಚಾರ ಸಿದ್ಧತೆಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಪಾಂಡೆ ಅವರಿಗೆ ವಿವರಿಸಿದರು.

ಈ ಬಾರಿ ದಸರಾದಲ್ಲಿ ಅತೀ ಹೆಚ್ಚು ಕಾರ್ಯಕ್ರಮಗಳನ್ನು ಆಯೋ ಜಿಸುತ್ತಿರುವುದರಿಂದ ಹಾಗೂ ವಿಜಯದಶಮಿ ಮೆರವಣಿಗೆ ನೋಡಲು ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇರುವುದರಿಂದ ನಿರ್ಲಕ್ಷ್ಯ ಮಾಡದೇ ಪ್ರತಿಯೊಂದು ಹಂತದಲ್ಲಿ ಭದ್ರತಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು, ಎಲ್ಲಿಯೂ ಲೋಪವಾಗದಂತೆ ಬಂದೋಬಸ್ತ್ ಯೋಜನೆ ಸಿದ್ಧಪಡಿಸಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಎಡಿಜಿಪಿಯವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅರಮನೆ ಒಳ ಹಾಗೂ ಹೊರ ಆವರಣ, ಜಂಬೂ ಸವಾರಿ ಮಾರ್ಗ, ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಿಸಿ ಕ್ಯಾಮರಾಗಳು, ಬ್ಯಾರಿ ಕೇಡ್‍ಗಳನ್ನು ಅಳವಡಿಸಿ ಆಂಟಿ ಸಬಾಟಿಕ್ ಚೆಕ್ ಟೀಂ, ಭಯೋ ತ್ಪಾದನಾ ನಿಗ್ರಹ ದಳ, ಬಾಂಬ್ ಪತ್ತೆ ದಳ, ಶ್ವಾನ ದಳದ ಸಿಬ್ಬಂದಿ ಗಳನ್ನು ನಿಯೋಜಿಸಿ, ಹೊರ ಜಿಲ್ಲೆಗಳಿಂದ ಬರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಭದ್ರತಾ ಸೂಕ್ಷ್ಮತೆ ಹಾಗೂ ಗಂಭೀರತೆ ಬಗ್ಗೆ ವಿವರಿಸಿ, ಉತ್ತಮ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿ ದರು. ರಾಜ್ಯಪಾಲರು, ಮುಖ್ಯಮಂತ್ರಿಗಳು, ನ್ಯಾಯಮೂರ್ತಿಗಳು, ನ್ಯಾಯಾಧೀಶರು ಸೇರಿದಂತೆ ವಿವಿಧ ಗಣ್ಯರು ಆಗಮಿಸುವ ಪಂಜಿನ ಕವಾಯತು ಮೈದಾನ ಮತ್ತು ಅರಮನೆಯಲ್ಲಿ ಶಿಸ್ತುಬದ್ಧವಾಗಿ ಸಂಚಾರ ವ್ಯವಸ್ಥೆ, ನೂಕು-ನುಗ್ಗಲು ಉಂಟಾಗದಂತೆ ಭದ್ರತೆಯನ್ನು ರೂಪಿಸುವ ಮೂಲಕ ಗೊಂದಲವಾಗದಂತೆ ನೋಡಿಕೊಳ್ಳಬೇ ಕೆಂದೂ ನಿರ್ದೇಶನ ನೀಡಿದರು. ಕೆಎಸ್‍ಆರ್‍ಪಿ, ಸಿಎಆರ್, ಡಿಎಆರ್, ಮೌಂಟೆಡ್, ಚಾಮುಂಡಿ ಕಮಾಂಡೋ ಪಡೆಗಳನ್ನು ದಸರಾಗೆ ಸಮರ್ಥವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಡಿಸಿಪಿಗಳಾದ ಎಂ.ಮುತ್ತುರಾಜ್, ಬಿ.ಟಿ.ಕವಿತಾ, ಚೆನ್ನಯ್ಯ, ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಸೇರಿದಂತೆ ಮೈಸೂರು ನಗರದ ಎಲ್ಲಾ ಎಸಿಪಿಗಳು ಹಾಗೂ ಇನ್ಸ್‍ಪೆಕ್ಟರ್‍ಗಳು ಸಭೆಯಲ್ಲಿ ಹಾಜರಿದ್ದರು.

Translate »