ಮೈಸೂರಲ್ಲಿ ದಸರಾ ಸಿವಿಲ್ ಕಾಮಗಾರಿ ಆರಂಭ
ಮೈಸೂರು

ಮೈಸೂರಲ್ಲಿ ದಸರಾ ಸಿವಿಲ್ ಕಾಮಗಾರಿ ಆರಂಭ

September 14, 2019

ಮೈಸೂರು,ಸೆ.13(ಆರ್‍ಕೆ)- ಮೈಸೂರು ನಗರದ ವಿವಿಧೆಡೆ 5.7 ಕೋಟಿ ರೂ.ಗಳ ದಸರಾ ಸಿವಿಲ್ ಕಾಮಗಾರಿಗಳನ್ನು ಮಹಾ ನಗರಪಾಲಿಕೆಯು ತರಾತುರಿಯಲ್ಲಿ ಆರಂಭಿಸಿದೆ. ಕಳೆದ ಬಾರಿಯ ದಸರಾ ಅನುದಾನವೇ ಬಾಕಿ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅನುದಾನ ಕೊಡಿಸುತ್ತೇನೆ ಎಂದು ಧೈರ್ಯ ಹೇಳಿರುವುದರಿಂದ ಮೈಸೂರು ಮಹಾನಗರ ಪಾಲಿಕೆಯು ಸದ್ದಿಲ್ಲದೇ ಟೆಂಡರ್ ಮೂಲಕ 15 ದಿನಗಳ ಗಡುವು ನೀಡಿ ಹಲವು ಗುತ್ತಿಗೆದಾರರಿಗೆ ಕೆಲಸ ಮಾಡಲು ಆದೇಶ ನೀಡಿದೆ.

ಸೆಪ್ಟೆಂಬರ್ 11ರಿಂದ 15 ದಿನದಲ್ಲಿ ಅಥವಾ ಅತೀ ಹೆಚ್ಚು ಎಂದರೆ ಸೆಪ್ಟೆಂಬರ್ 30ರೊಳಗೆ ಕಾಮಗಾರಿಗಳನ್ನು ಮುಗಿಸಬೇಕೆಂಬ ಷರತ್ತಿನೊಂದಿಗೆ ವರ್ಕ್ ಆರ್ಡರ್ ನೀಡಿದ್ದು, ಕೆಲವರು ಗುರುವಾರ ದಿಂದಲೇ ಕಾಮಗಾರಿ ಆರಂಭಿಸಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ. ನಾಗ ರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಬನ್ನಿಮಂಟಪ ಹುಡ್ಕೋ ಬಡಾ ವಣೆಯ ರಸ್ತೆಗಳಲ್ಲಿ 40 ಲಕ್ಷ ರೂ. ಅನುದಾನದ ರಸ್ತೆ ಕಾಮಗಾರಿ (ಅರ್ಥ್ ವಕ್ರ್ಸ್) ಆರಂಭವಾಗಿದ್ದು, ಪಾಲಿಕೆ ಆಯುಕ್ತ ಗುರು ದತ್ ಹೆಗ್ಡೆ ಅವರು ಇಂದು ಕಾಮಗಾರಿ ಯನ್ನು ಪರಿಶೀಲಿಸಿದರು.

ನಜರ್‍ಬಾದಿನ ಚಾಮುಂಡಿ ವಿಹಾರ ಕ್ರೀಡಾಂಗಣ ಬಳಿಯ ರಸ್ತೆಯ ಆಸ್ಪಾ ಲ್ಟಿಂಗ್, ಕರ್ಬ್ ಸ್ಟೋನ್‍ಗಳಿಗೆ ಬಣ್ಣ ಬಳಿ ಯುವುದೂ ಸೇರಿದಂತೆ ಸಿವಿಲ್ ಕಾಮ ಗಾರಿ (35 ಲಕ್ಷ ರೂ.), ಬೆಂಗಳೂರು-ನೀಲಗಿರಿ ರಸ್ತೆ ಲೇನ್ ಪೇಂಟಿಂಗ್ (12 ಲಕ್ಷ ರೂ.), ಬಲ್ಲಾಳ್ ಸರ್ಕಲ್ ಸುತ್ತಲಿನ ರಸ್ತೆಗಳ ಗುಂಡಿ ಮುಚ್ಚುವ ಪ್ಯಾಚ್ ವಕ್ರ್ಸ್ (5 ಲಕ್ಷ ರೂ.), ಬಲ್ಲಾಳ್ ಸರ್ಕಲ್‍ನಿಂದ ಚಾಮುಂಡಿಪುರಂ ಸರ್ಕಲ್‍ವರೆಗೆ ಜೆಎಲ್‍ಬಿ ರಸ್ತೆ (5 ಲಕ್ಷ ರೂ.), ಚಾಮರಾಜ ಸರ್ಕಲ್ ಬಳಿ ಆಸ್ಪಾಲ್ಟಿಂಗ್ (11 ಲಕ್ಷ ರೂ.) ಹಾಗೂ ಇರ್ವಿನ್ ರಸ್ತೆಗೆ ಸಂಪರ್ಕ ಕಲ್ಪಿಸುವ ಚಿಕ್ಕ ರಸ್ತೆಗಳ ರಿಪೇರಿ ಸೇರಿದಂತೆ ಒಟ್ಟು 5.7 ಕೋಟಿ ರೂ.ಗಳ ದಸರಾ ಕಾಮಗಾರಿಗಳು ತರಾತುರಿಯಲ್ಲಿ ನಡೆಯುತ್ತಿವೆ. ಅಲ್ಲದೆ ಪಾಲಿಕೆಯ 14ನೇ ಹಣಕಾಸು ಆಯೋ ಗದ ಅನುದಾನದಲ್ಲಿ ಮೈಸೂರಿನ ಇನ್ನಿತರ ಬಡಾವಣೆಗಳ ಮುಖ್ಯ ರಸ್ತೆಗಳ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸೆಪ್ಟೆಂ ಬರ್ 30 ರೊಳಗಾಗಿ ಅಂತ್ಯಗೊಳಿಸಲು ಬಿರುಸಿನಿಂದ ಕೆಲಸಗಳು ನಡೆಯುತ್ತಿವೆ.

ನಗರಪಾಲಿಕೆ ವಲಯ ಕಚೇರಿ-1ರ ಭರತ್, 6ರ ನಾಗರಾಜ್, 7ರ ಶ್ರೀನಿವಾಸ್ ಸೇರಿದಂತೆ ಎಲ್ಲಾ ವಲಯ ಕಚೇರಿಗಳ ಇಂಜಿನಿಯರ್‍ಗಳು ಸಿವಿಲ್ ಕಾಮಗಾರಿಗಳನ್ನು ಮೇಲ್ವಿಚಾರಣೆ ನಡೆಸುತ್ತಿದ್ದು, ಎಕ್ಸಿ ಕ್ಯೂಟಿವ್ ಇಂಜಿನಿಯರ್ ಬಿ. ನಾಗರಾಜ್ ಅವರು ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದು, ಆಯಾ ವಾರ್ಡಿನ ಕಾರ್ಪೊರೇಟರ್‍ಗಳಿಂದ ಕಾಮಗಾರಿ ಗಳಿಗೆ ಚಾಲನೆ ಕೊಡಿಸಿದ್ದಾರೆ.

Translate »