ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆ ವಿನ್ಯಾಸಕ್ಕೆ ಮಾರುಹೋದ ಡಿಸಿಎಂ ಗೋವಿಂದ ಕಾರ್ಜೋಳ
ಮೈಸೂರು

ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆ ವಿನ್ಯಾಸಕ್ಕೆ ಮಾರುಹೋದ ಡಿಸಿಎಂ ಗೋವಿಂದ ಕಾರ್ಜೋಳ

January 22, 2020

ಮೈಸೂರು,ಜ.21(ಎಸ್‍ಪಿಎನ್)-ಮೈಸೂರಿನ ಜಯದೇವ ಆಸ್ಪತ್ರೆಯನ್ನು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗೂ ಕಡಿಮೆ ಇಲ್ಲ ದಂತೆ ನಿರ್ವಹಣೆ ಮಾಡಿರು ವುದು ಸಂತೋಷದ ಸಂಗತಿ ಎಂದು ಉಪ ಮುಖ್ಯ ಮಂತ್ರಿ ಗೋವಿಂದ ಎಂ. ಕಾರ್ಜೋಳ ಅಭಿಪ್ರಾಯ ಪಟ್ಟರು. ಮೈಸೂರು ಕೆಆರ್‍ಎಸ್ ರಸ್ತೆಯಲ್ಲಿರುವ ಜಯದೇವ ಹೃದ್ರೋಗಗಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದರು.

ಮೈಸೂರಿನಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದ ವಿನ್ಯಾಸ ತುಂಬಾ ಚೆನ್ನಾಗಿ ಮೂಡಿಬಂದಿದೆ. ಖ್ಯಾತ ಹೃದಯ ತಜ್ಞ ಡಾ.ಮಂಜುನಾಥ್ ಸಾರಥ್ಯದಲ್ಲಿ ಈ ಆಸ್ಪತ್ರೆ ನಿರ್ವಹಣೆಯಾಗಿರುವುದು ಸಂತೋಷದ ಸಂಗತಿ. ಇದೆ ರೀತಿ ಕಲ್ಬುರ್ಗಿಯಲ್ಲೂ 400 ಹಾಸಿಗೆಯುಳ್ಳ ಹೃದ್ರೋಗ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ ಎಂದರು.

ರಾಜ್ಯ ಸರ್ಕಾರ ಜನ ಸಾಮಾನ್ಯರ ಆರೋಗ್ಯಕ್ಕಾಗಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಅಗತ್ಯವಾದರೆ, ಮತ್ತಷ್ಟು ಅನುದಾನ ನೀಡಲು ಸರ್ಕಾರ ಸಿದ್ದವಿದೆ ಎಂದರಲ್ಲದೆ, ಸೋಮವಾರ ರಾತ್ರಿ 10 ಗಂಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದ ಬೆಳವಣಿಗೆ ಬಗ್ಗೆ ವೀಡಿಯೋ ಕಾನ್ಫೋರೆನ್ಸ್ ಮೂಲಕ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೈಸೂರಿನ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇದಕ್ಕೆ ಸ್ವಂತ ಕಟ್ಟಡ ಹೊಂದಲು ನಿವೇಶನ ಗುರುತಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ, ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಈ ಬಾರಿಯ ಬಜೆಟ್ ನಲ್ಲಿ ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆ ಮೈಸೂರು ಮುಖ್ಯಸ್ಥರಾದ ಡಾ. ಕೆ.ಎಸ್.ಸದಾನಂದ, ಡಾ. ಹರ್ಷ ಬಸಪ್ಪ, ಡಾ.ಪಾಂಡುರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

Translate »