ಪುತ್ರನ ನಂತರ ತಂದೆ ಪೇದೆಯೂ ಸಾವು, ಐಸಿಯುನಲ್ಲಿ ತಾಯಿಗೆ ಚಿಕಿತ್ಸೆ
ಮೈಸೂರು

ಪುತ್ರನ ನಂತರ ತಂದೆ ಪೇದೆಯೂ ಸಾವು, ಐಸಿಯುನಲ್ಲಿ ತಾಯಿಗೆ ಚಿಕಿತ್ಸೆ

February 15, 2020

ಹುಟ್ಟೂರು ಗಂಧನಹಳ್ಳಿಯಲ್ಲಿ ಅಂತ್ಯಕ್ರಿಯೆ
ಮೈಸೂರು, ಫೆ. 14(ಆರ್‍ಕೆ, ಕೆಟಿಆರ್)- ನೀರಿನ ಒಲೆ ಹೊತ್ತಿಸುವಾಗ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಪುತ್ರ ಸಾವನ್ನಪ್ಪಿದ ಬೆನ್ನಲ್ಲೇ ಇಂದು ಸುಟ್ಟ ಗಾಯಗಳಾಗಿದ್ದ ತಂದೆಯೂ ಸಾವನ್ನಪ್ಪಿದ್ದು, ತಾಯಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಸಿಎಆರ್ ಮುಖ್ಯಪೇದೆ ರೇಣುಕಾಸ್ವಾಮಿ (46) ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು. ಪತ್ನಿ ಶ್ರೀಮತಿ ಪುಷ್ಪಲತಾ ಅವರು ಚಿಕಿತ್ಸೆ ಪಡೆಯು ತ್ತಿದ್ದಾರೆ. ಕೆ.ಆರ್.ನಗರದ ಈಶ್ವರ ಬಡಾವಣೆಯ ನಿವಾಸದಲ್ಲಿ ಸ್ನಾನಕ್ಕೆ ನೀರು ಕಾಯಿಸಲೆಂದು ಒಲೆ ಹೊತ್ತಿಸುವಾಗ ಆಕಸ್ಮಿಕ ವಾಗಿ ಬೆಂಕಿ ತಗುಲಿತ್ತು. ಘಟನೆಯಿಂದ ಪುತ್ರ ತೇಜಸ್‍ಗೆ ತೀವ್ರ ಸುಟ್ಟ ಗಾಯಗಳಾಗಿ ಆತ ಗುರುವಾರ ಸಾವನ್ನಪ್ಪಿದ್ದ. ಗಾಯಗಳಾಗಿದ್ದ ದಂಪತಿಗೆ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದ ರೇಣುಕಾ ಸ್ವಾಮಿ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 11.30 ಗಂಟೆ ವೇಳೆಗೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ ಮತ್ತು ಮಗನ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇಂದು ಸಂಜೆ ಕೆ.ಆರ್.ನಗರ ತಾಲೂಕಿನ ಸ್ವಗ್ರಾಮ ಗಂಧನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Translate »