ನರ ಮಾಂಸದ ರುಚಿ ಹತ್ತಿದ ವ್ಯಾಘ್ರ: ಹಾಡಿ ವಾಸಿಗಳಲ್ಲಿ ಪ್ರಾಣ ಭೀತಿ
ಮೈಸೂರು

ನರ ಮಾಂಸದ ರುಚಿ ಹತ್ತಿದ ವ್ಯಾಘ್ರ: ಹಾಡಿ ವಾಸಿಗಳಲ್ಲಿ ಪ್ರಾಣ ಭೀತಿ

December 27, 2018

ಮೈಸೂರು:  ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಮನ್ವ ಯತೆ ಕೊರತೆಯಿಂದಾಗಿ ಗಿರಿಜನ ಯುವಕ ನೊಬ್ಬನ ಮೃತದೇಹ ಸತತ 2 ದಿನ ಹುಲಿಗೆ ಆಹಾರವಾದ ಆತಂಕಕಾರಿ ಘಟನೆ ಹೆಚ್.ಡಿ. ಕೋಟೆ ತಾಲೂಕಿನ ಮಾನಿಮೂಲೆ ಹಾಡಿಯಲ್ಲಿ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಮಾನವೀಯ ವರ್ತನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪವ್ಯಕ್ತವಾಗಿದೆ. ಹಾಡಿವಾಸಿಗಳಲ್ಲಿ ಪ್ರಾಣ ಭೀತಿ ಉಂಟಾಗಿದೆ.

ಮಾನಿಮೂಲೆ ಹಾಡಿ ನಿವಾಸಿ ಲೇ.ದಾಸ ಎಂಬವರ ಮಗ ಮಧು(28) ಸೌದೆ ತರಲು ಕಾಡಿಗೆ ಹೋಗಿದ್ದ ವೇಳೆ ಹುಲಿ ದಾಳಿಗೆತುತ್ತಾಗಿ ಹತನಾಗಿದ್ದ. ಭಾನು ವಾರ ಬೆಳಿಗ್ಗೆ ಕಾಡಿಗೆ ಹೋಗಿ ಕಣ್ಮರೆ ಯಾಗಿದ್ದ ಈ ಯುವಕ ಸೋಮವಾರ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದ. ಆತನ ದೇಹದ ಕೆಲ ಭಾಗವನ್ನು ಹುಲಿ ತಿಂದು ಹಾಕಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿ ಸಿದ್ದ ಬೀಚನಹಳ್ಳಿ ಠಾಣೆಯ ಓರ್ವ ಪೇದೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಳು ಶವವನ್ನು ಪರಿಶೀಲಿಸಿದ್ದರು. ಬಳಿಕ ಮಹಜರು ಮಾಡುವುದಕ್ಕೆ ಸಿಬ್ಬಂದಿ ಯೊಂದಿಗೆ ಬರುವುದಾಗಿ ಹೇಳಿ ವಾಪ ಸ್ಸಾಗಿದ್ದ ಪೇದೆ ಸ್ಥಳಕ್ಕೆ ಬಂದಿರಲಿಲ್ಲ. ನಿಯಮಾನುಸಾರ ಮಹಜರು ನಡೆಸಿ ಮರಣೋತ್ತರ ಪರೀಕ್ಷೆ ನಡೆಸಲು ಕಳೆಬರ ಕೊಂಡೊಯ್ಯಬೇಕಾಗಿತ್ತು. ಆದರೆ ಪೊಲೀ ಸರು ಆ ಕೆಲಸ ಮಾಡದೇ ನಿರ್ಲಕ್ಷಿಸಿದ ಪರಿ ಣಾಮ ಹುಲಿ ಮತ್ತೊಂದು ಬಾರಿ ಮನು ಷ್ಯನ ಮಾಂಸದ ರುಚಿ ಕಾಣುವಂತಾಗಿದೆ.

ರಾತ್ರಿ ಕಾವಲಿಗೆ ಮಳೆ ಅಡ್ಡಿ: ಮಹಜರು ಮಾಡಲು ಪೊಲೀಸರು ಬಾರದೆ ಇದ್ದ ಹಿನ್ನೆಲೆಯಲ್ಲಿ ಶವ ಕಾಡಿನಲ್ಲಿಯೇ ಇತ್ತು. ಸೋಮವಾರ ರಾತ್ರೀ ಬೆಂಕಿ ಹಾಕಿಕೊಂಡು ಐದಾರು ವಾಚರ್‍ಗಳು ಹಾಡಿ ನಿವಾಸಿ ಗಳೊಂದಿಗೆ ಕಾವಲು ಕಾಯುತ್ತಿದ್ದರು. ರಾತ್ರಿ 11 ಗಂಟೆಗೆ ಆರಂಭವಾದ ಭಾರಿ ಮಳೆಯಿಂದಾಗಿ ಕಾವಲು ಕಾಯುತ್ತಿದ್ದ ವರು ಹಾಡಿಗೆ ಹಿಂದಿರುಗಿದ್ದರು. ಈ ವೇಳೆ ಮತ್ತೊಮ್ಮೆ ಶವವಿದ್ದ ಸ್ಥಳಕ್ಕೆ ಬಂದ ಹುಲಿಯು ಮಧುವಿನ ಮೃತದೇಹವನ್ನು ಸುಮಾರು 300 ಮೀಟರ್ ಕಾಡಿನೊಳಗೆ ಎಳೆದುಕೊಂಡು ಹೋಗಿ ಕೆಲವೇ ಕೆಲವು ಭಾಗವನ್ನು ಬಿಟ್ಟು ದೇಹದ ಅಳಿದುಳಿದ ಭಾಗಗಳನ್ನು ತಿಂದುಹಾಕಿದೆ.
ಮಂಗಳವಾರ ಬೆಳಿಗ್ಗೆ ಕಾಡಿಗೆ ಹೋಗಿ ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮೃತದೇಹ ಇಲ್ಲದೇ ಇರುವುದನ್ನು ಕಂಡು ಗಾಬರಿಯಾಗಿ ದ್ದಾರೆ. ಹುಡುಕಾಡಿದಾಗ 300 ಮೀಟರ್ ದೂರದಲ್ಲಿ ದೇಹ ಕೆಲ ಅಂಗಾಂಗಗಳಷ್ಟೇ ಸಿಕ್ಕಿವೆ. ಕೂಡಲೆ ಮಹಜರ್ ಮಾಡಿ, ಹೆಚ್.ಡಿ. ಕೋಟೆ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಸ್ಥಳೀಯರ ಅಸಮಾಧಾನ: ಮಹಜರು ಮಾಡದೆ ಮೃತದೇಹವನ್ನು ಕಾಡಿನಲ್ಲಿಯೇ ಬಿಟ್ಟು ಬಂದಿದ್ದ ಅಧಿಕಾರಿಗಳ ವರ್ತನೆಗೆ ಹಾಡಿ ನಿವಾಸಿಗಳು ಬೇಸರ ವ್ಯಕ್ತಪಡಿಸಿ ದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತದೆ. ಇದರ ಪರಿಣಾಮವಾಗಿ ಎರಡನೇ ದಿನವೂ ಹುಲಿ ಮಾನವನ ಮಾಂಸದ ರುಚಿ ನೋಡುವಂತಾಗಿದೆ.

ಇದರಿಂದ ಮುಂದಿನ ದಿನಗಳಲ್ಲಿ ಹಾಡಿ ಜನರ ಮೇಲೆರಗುವ ಆತಂಕವಿದೆ. ಮಧು ಬಡಕುಟುಂಬಕ್ಕೆ ಸೇರಿದ ಯುವಕನಾಗಿದ್ದು, ಪ್ರಶ್ನಿಸುವವರು ಯಾರಿಲ್ಲ ಎಂಬ ಕಾರಣ ದಿಂದ ಮೃತದೇಹವನ್ನು ಕಾಡಿನಲ್ಲಿ ಅನಾಥವಾಗಿ ಬಿಟ್ಟು ಬಂದಿದ್ದಾರೆ ಎಂದು ದೂರಿದ್ದಾರೆ.

5 ಲಕ್ಷ ಪರಿಹಾರ: ಹುಲಿ ದಾಳಿಗೆ ಗಿರಿ ಜನ ಯುವಕ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಹೊಳೆ ಅಭ ಯಾರಣ್ಯದ ಸಿಎಫ್ ನಾರಾಯಣ ಸ್ವಾಮಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಹುಲಿ ದಾಳಿಗೆ ಮೃತಪಟ್ಟ ಮಾನಿಮೂಲೆ ಹಾಡಿಯ ಮಧುವಿನ (28) ಪೋಷಕರಿಗೆ 5 ಲಕ್ಷ ರೂ ಪರಿ ಹಾರ ನೀಡಲಾಗುತ್ತದೆ. ಶೀಘ್ರದಲ್ಲಿಯೇ ಪರಿಹಾರ ಚೆಕ್ ವಿತರಿಸುತ್ತೇವೆ ಎಂದರು.

ಯಕ್ಷ ಪ್ರಶ್ನೆ: ಹುಲಿ ಹತ್ಯೆ ಮಾಡಿದ ಸ್ಥಳದಿಂದ ಕೇವಲ 150 ಮೀಟರ್ ಅಂತರ ದಲ್ಲೇ ಮಾನಿಮೂಲೆ ಹಾಡಿಯಿದೆ. ಈ ಹಾಡಿಯಲ್ಲಿ ಹಸು ಸಾಕಿದ್ದಾರೆ. ಹಸು ವಿನ ಮೇಲೆ ದಾಳಿ ಮಾಡದ, ಹುಲಿ ಮನುಷ್ಯನ ಮೇಲೆ ದಾಳಿ ಮಾಡಿರು ವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಇದುವರೆಗೆ ಹಾಡಿಯಲ್ಲಿರುವ ಜಾನುವಾರು ಗಳ ಮೇಲೆ ಹುಲಿದಾಳಿ ನಡೆಸಿರಲಿಲ್ಲ. ಸೌದೆ ತರಲು ಕಾಡಿಗೆ ಹೋಗಿದ್ದ ಯುವಕ ಆಕಸ್ಮಿಕವಾಗಿ ಹುಲಿಗೆ ಎದುರಾಗಿದ್ದರಿಂದ ಈ ಘಟನೆ ಸಂಭವಿಸಿರ ಬಹುದು ಎಂದು ನಾರಾಯಣಸ್ವಾಮಿ ವಿಶ್ಲೇಷಿಸಿದ್ದಾರೆ.

ಜನರ ರಕ್ಷಣೆಗೆ ಕ್ರಮ: ಮಾನಿಮೂಲೆ ಹಾಡಿ ಜನರಲ್ಲಿ ಮೂಡಿರುವ ಭಯದ ವಾತಾವರಣ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಹುಲಿ ಚಲನವಲನ ವನ್ನು ವೀಕ್ಷಿಸುವು ದಕ್ಕೆ ಸಿಬ್ಬಂದಿಯನ್ನು ಹಾಡಿಗೆ ನಿಯೋಜಿಸಲಾಗಿದೆ.

ನಿವಾಸಿಗಳ ಕೋರಿಕೆ ಮೇರೆಗೆ ಮಾನಿಮೂಲೆ ಹಾಡಿಸುತ್ತಾ ಆನೆ ದಾಟ ದಂತೆ ಕಂದಕ ನಿರ್ಮಿಸಲಾಗುತ್ತದೆ. ಅದರ ಸುತ್ತಲೂ ಯಾವುದೇ ಪ್ರಾಣಿ ಹಾಡಿ ಯೊಳಗೆ ಬರದಂತೆ ತಡೆಗಟ್ಟಲು ಸೋಲಾರ್ ಬೇಲಿ ಹಾಕಲಾಗುತ್ತದೆ. ಆ ಮೂಲಕ ಹಾಡಿ ನಿವಾಸಿಗಳ ರಕ್ಷಣೆಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದರು.

Translate »