ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ‘ಬ್ಲಾಕ್ ಲಿಸ್ಟ್’ಗೆ ಸೇರಿಸಲು ನಿರ್ಣಯ
ಮೈಸೂರು

ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ‘ಬ್ಲಾಕ್ ಲಿಸ್ಟ್’ಗೆ ಸೇರಿಸಲು ನಿರ್ಣಯ

July 25, 2018

ಕೆ.ಆರ್.ನಗರ: ಟೆಂಡರ್ ಪಡೆದು ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸದ ಮತ್ತು ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ‘ಬ್ಲಾಕ್‍ಲಿಸ್ಟ್’ಗೆ ಸೇರಿಸಬೇಕೆಂದು ಪುರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.

ಇಂದು ಪುರಸಭಾ ಸಭಾಂಗಣದಲ್ಲಿ ನೂತನ ಅಧ್ಯಕ್ಷೆ ಹರ್ಷಲತಾ ಶ್ರೀಕಾಂತ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಕಳೆದ 3-4 ವರ್ಷ ಗಳಲ್ಲಿ ಕೈಗೊಂಡ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಹಾಗೂ ಕಳಪೆ ಕಾಮಗಾರಿ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ನಂತರ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸುವುದಕ್ಕೆ ಎಲ್ಲಾ ಸದಸ್ಯರ ಒಪ್ಪಿಗೆ ಇದೆ ಎಂದು ಎಲ್ಲರೂ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಸಾಮಾನ್ಯ ಜನತೆ ತಮ್ಮ ಮನೆ ನಿವೇಶನಗಳ ಖಾತೆಗೆ ಬಂದಾಗ ವಿನಾಕಾರಣ ಅಲೆಸುವುದರ ಜತೆಗೆ 5 ರಿಂದ 10 ಸಾವಿರ ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದ ಹಿರಿಯ ಸದಸ್ಯ ಕೆ.ಎಲ್.ಜಗದೀಶ್ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್‍ರವರು ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಈ ಹಣವನ್ನು ಎಲ್ಲಾ ಸದಸ್ಯರಿಗೆ ಹಂಚಬೇಕೆಂದು ಹೇಳಿ ಸದಸ್ಯರ ಮಾನ ಹರಾಜು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪುರಸಭೆಯಲ್ಲಿ ನಾವುಗಳು ಸಾಮಾನ್ಯ ಸಭೆಗೆ ಬರೋದು, ತಿನ್ಕೊಂಡು ಹೋಗೊದು ಅಷ್ಟಕ್ಕೆ ಸೀಮಿತವಾಗಿದೆ ಯಾವುದೇ ಅಭಿವೃದ್ದಿ ಕೆಲಸ ಅಗುತ್ತಿಲ್ಲಾ, ನಮ್ಮ ತೀರ್ಮಾನಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಹಾಗಾಗಿ ಸಭೆಗಳು, ಚರ್ಚೆ ಗಳೆಲ್ಲಾ ಯಾತಕ್ಕಾಗಿ ಬೇಕೆಂದು ಮಾಜಿ ಅಧ್ಯಕ್ಷೆ ಗೀತಾಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಸ್ವಚ್ಛತೆ ಇಲ್ಲದೆ ಸಾರ್ವಜನಿಕರಿಗೆ ಕಿರಿ ಕಿರಿ ಉಂಟಾಗಿದೆ ಮೊದಲು ಸ್ವಚ್ಛತೆ ಬಗ್ಗೆ ಕ್ರಮ ವಹಿಸಿ ಎಂದು ಕೆ.ಎಲ್.ಕುಮಾರ್ ಗಮನ ಸೆಳೆದಾಗ, ಸದಸ್ಯ ಸುಬ್ರಮಣ್ಯ ಧ್ವನಿಗೂಡಿಸಿದರು.

ಪುರಸಭೆಗೆ ಸೇರಿದ ಎಲ್ಲಾ ಮಳಿಗೆ ಬಾಡಿಗೆ ದಾರರಿಂದ ಕಡ್ಡಾಯವಾಗಿ ‘ಟ್ರೇಡ್‍ಲೈಸೆನ್ಸ್’ನ್ನು ಪಡೆಯಬೇಕು ಅದೇ ರೀತಿ ಇತರೆ ವ್ಯಾಪಾರಿಗಳಿಗೆ ಅವರ ಸ್ಥಳ ಮತ್ತು ವ್ಯವಹಾರದ ಅಧಾರದ ಮೇಲೆ ಶುಲ್ಕವನ್ನು ನಿಗದಿಗೊಳಿಸ ಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸಲಹೆ ನೀಡಿದರು.

ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಾಗ, ಬೀದಿದೀಪ ಅಳವಡಿಸುವಾಗ ತಾರತಮ್ಯ ಮಾಡದೆ ಅಗತ್ಯಕ್ಕೆ ಅನುಗುಣವಾಗಿ ಕೆಲಸ ಮಾಡಿಸಬೇಕೆಂದು ಸದಸ್ಯ ಬಾಂಬೆರಾಜಣ್ಣ, ಟಿ.ಆರ್.ಪ್ರಕಾಶ್ ತಿಳಿಸಿದರು.

ಪುರಸಭಾ ಸದಸ್ಯರುಗಳು ತಮ್ಮ ವಾರ್ಡ್ ಗಳಲ್ಲಿ ಅತ್ಯಗತ್ಯವಾಗಿ ಅಗಬೇಕಾಗಿರುವ ಕಾಮಗಾರಿ ಅನುಮೋದನೆ ನೀಡುವ ಬಗ್ಗೆ ಶೀಘ್ರ ಕ್ರಮ ತೆಗೆದುಕೊಂಡು ಕಾಮಗಾರಿ ಗಳನ್ನು ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಮುಖ್ಯಾಧಿಖಾರಿ ನಾಗಶಟ್ಟಿ, ಉಪಾಧ್ಯಕ್ಷೆ ಪಾರ್ವತಿನಾಗರಾಜು, ಅಧಿಕಾರಿ ಗಳಾದ ಪುಟ್ಟಸ್ವಾಮಿ, ಸುದರ್ಶನ್, ಸ್ವಪ್ನ ಸದಸ್ಯರುಗಳಾದ ನಟರಾಜು, ಸರೋಜ ಮಹದೇವ್, ಮಾಜಿ ಅಧ್ಯಕ್ಷೆ ಕವಿತಾ ವಿಜಯ್ ಕುಮಾರ್, ಫರೀದಾಖಾನಂ, ಕೆ.ಬಿ.ಸುಬ್ರ ಮಣ್ಯ, ಹೊಮ, ಬೂಸನಂಜುಂಡ ಮುಂತಾದವರು ಹಾಜರಿದ್ದರು

Translate »