ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತ ಸಂಘದ ಸಭೆ: ಫೆ.24ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ
ಮೈಸೂರು ಗ್ರಾಮಾಂತರ

ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ರೈತ ಸಂಘದ ಸಭೆ: ಫೆ.24ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆಗೆ ನಿರ್ಧಾರ

February 4, 2020

ಹುಣಸೂರು, ಫೆ.3(ಕೆಕೆ)- ತಾಲೂ ಕಿನ ಮೂಲಕ ಹಾದು ಹೋಗುವ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ-275ರ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಎದುರು ಫೆ.24ರಂದು ಪ್ರತಿಭಟಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತೀರ್ಮಾನಿಸಿದ್ದು, ಹೋರಾಟ ಸಮಿತಿ ರಚಿಸಲಾಯಿತು.

ತಾಲೂಕಿನ ಹೆಜ್ಜೊಡ್ಲು ಗ್ರಾಮದ ರೈಸ್ ಮಿಲ್ ಆವರಣದಲ್ಲಿ ಭಾನುವಾರ ಕರ್ನಾ ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆದ ರೈತರ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಭೂಮಿ ಕಳೆದುಕೊಳ್ಳುವ ರೈತರ ರಕ್ಷಣೆ ಕುರಿತು ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮೈಸೂರು ಮಹಾರಾಜರ ಕಾಲದಲ್ಲಿ ನಿರ್ದಿಷ್ಟವಾಗಿ ಉಪಯೋಗಿಸುತ್ತಿರುವ ಈಗಿರುವ ರಸ್ತೆಯನ್ನೇ ಈ ಉದ್ದೇಶಕ್ಕೆ ಉಪಯೋಗಿಸಬಹುದಾಗಿದ್ದು, ರಾಷ್ಟ್ರೀಯ ಹೆದ್ದಾರಿ-275ರ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಹೆದ್ದಾರಿ-275ರ ಉದ್ದೇಶಕ್ಕೆ ಸರ್ವೇ ಮಾಡಿರುವ ಮಾರ್ಗದಲ್ಲಿ ಅತ್ಯಂತ ಫಲವತ್ತಾದ ಭೂಮಿ ಸೇರಿದಂತೆ ಫಲಭರಿತ ತೆಂಗು, ಮಾವು, ಅಡಿಕೆ ತೋಟಗಳಿವೆ. ಈ ಯೋಜನೆಯಿಂದ ಹಲವು ರೈತರ ಸಂಪೂರ್ಣ ಭೂಮಿ ಸ್ವಾಧೀನವಾಗಲಿದ್ದು, ರೈತ ಕುಟುಂಬಗಳು ಬೀದಿಗೆ ಬೀಳಲಿವೆ. ಅಲ್ಲದೆ ಪರಿಸರ ಅಸಮತೋಲನ ಉಂಟಾಗಲಿದೆ. ಹಾಗಾಗಿ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಭೂಮಿ ನೀಡದಿರುವಂತೆ ಸಭೆಯ ತೀರ್ಮಾನಕ್ಕೆ ರೈತರು ಸಮ್ಮತಿಸಿದರು.

ಸಭೆಯು ಮೊದಲನೇ ಹಂತದಲ್ಲಿ ಜಿಲ್ಲಾ ಧಿಕಾರಿ ಕಚೇರಿ ಎದುರು ಫೆ.24ರಂದು ಬೆಳಿಗ್ಗೆ 11 ಗಂಟೆಯಲ್ಲಿ ಪ್ರತಿಭಟನೆ ಹಮ್ಮಿ ಕೊಳ್ಳಲು ನಿರ್ಧಾರ ಕೈಗೊಳ್ಳಲಾಯಿತು. ಹೋರಾಟ ಯಶಸ್ಸಿಗೆ ಹೋರಾಟ ಸಮಿತಿ ಸಹ ರಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷ ನೇತ್ರಾ ವತಿ, ಜಿಲ್ಲಾ ಕಾರ್ಯದರ್ಶಿ ರಾಮೇಗೌಡ, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ರೈತ ಮುಖಂಡರಾದ ಕಲ್ಲಹಳ್ಳಿ ಜಯಣ್ಣ, ಕಿರಿಜಾಜಿ ಧನಂಜಯ, ಮೋದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ಹೆಜ್ಜೊಡ್ಲು ಶಿವಣ್ಣ, ತೊಂಡಾಳು ಮಹದೇವೇಗೌಡ, ಕೃಷ್ಣಶೆಟ್ಟಿ, ಪ್ರಕಾಶ್ ತೊಂಡಾಳು ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದ ಹೆಜ್ಜೊಡ್ಲು, ಉಂಡವಾಡಿ, ತೊಂಡಾಳು, ಅಗ್ರಹಾರ ಗ್ರಾಮಸ್ಥರು ಇದ್ದರು.

Translate »