ಕಾಡ್ಗಿಚ್ಚು ಸಂದರ್ಭ ಸೇನಾ ಹೆಲಿಕಾಪ್ಟರ್ ಬಳಸಿಕೊಳ್ಳಲು ನಿರ್ಧಾರ
ಮೈಸೂರು

ಕಾಡ್ಗಿಚ್ಚು ಸಂದರ್ಭ ಸೇನಾ ಹೆಲಿಕಾಪ್ಟರ್ ಬಳಸಿಕೊಳ್ಳಲು ನಿರ್ಧಾರ

January 2, 2020

ಮೈಸೂರು,ಜ.1(ಎಂಟಿವೈ)- ಬಂಡೀಪುರ, ನಾಗರ ಹೊಳೆ ಸೇರಿದಂತೆ ಮೈಸೂರು ಭಾಗದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ತಡೆಗೆ ಸೇನಾ ಹೆಲಿಕಾಪ್ಟರ್ ಬಳಸಿಕೊಳ್ಳಲು ನಿರ್ಧರಿಸಿದ್ದು, ಈ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವ ರೊಂದಿಗೆ ಚರ್ಚಿಸಲಾಗುತ್ತದೆ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಬಂಡೀಪುರ ಅರಣ್ಯದಲ್ಲಿ ಫೈರ್‍ಲೈನ್ ಇಲ್ಲದ ಕಾರಣ ಕಾಡ್ಗಿಚ್ಚು ಸಂಭವಿಸಿತ್ತು. ಸುಮಾರು 20 ಸಾವಿರ ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಆದರೆ ಈ ಬಾರಿ ಕಾಡ್ಗಿಚ್ಚು ಸಂಭವಿಸದಂತೆ ಕಟ್ಟೆಚ್ಚರ ವಹಿಸ ಲಾಗಿದೆ. ಮುಖ್ಯರಸ್ತೆಯ ಎರಡೂ ಬದಿಯಲ್ಲೂ 10 ಮೀಟರ್ ಅಗಲದ ವೀವ್ಯೂ ಲೈನ್ ಹಾಗೂ ಅರಣ್ಯದಲ್ಲಿ ಫೈರ್‍ಲೈನ್ ನಿರ್ಮಿಸುವ ಕೆಲಸ ಭರದಿಂದ ಸಾಗುತ್ತಿದೆ. ಕಾಡಂಚಿನ ಗ್ರಾಮಗಳ ಗ್ರಾಮಸ್ಥರ ವಿಶ್ವಾಸ ಗಳಿಸಲಾಗಿದೆ. ಅರಣ್ಯದಂಚಿನ ಗ್ರಾಮಸ್ಥರಿಗೆ ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ. ಆದರೂ ಈ ಬಾರಿ ಕಾಡ್ಗಿಚ್ಚು ಸಂಭವಿಸಿದರೆ ತುರ್ತಾಗಿ ಸ್ಪಂದಿಸಲು ಸೇನಾ ಹೆಲಿಕಾಪ್ಟರ್ ಬಳಕೆಗೆ ಚಿಂತನೆ ನಡೆಸಲಾಗಿದೆ. ಮೈಸೂರು ಏರ್‍ಬೇಸ್‍ನಲ್ಲಿ ತುರ್ತು ಒಂದು ಹೆಲಿಕಾಪ್ಟರ್ ನಿಲ್ಲಿಸಿಕೊಂಡಿದ್ದರೆ ಅಗತ್ಯವಿದ್ದಾಗ ಬಳಸಿಕೊಳ್ಳಬಹುದು. ಇದಕ್ಕೆ ಹೆಚ್ಚು ವೆಚ್ಚವಾಗುವುದಿಲ್ಲ. ಈ ಸಂಬಂಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಚರ್ಚಿಸಿ, ಹೆಲಿ ಕಾಪ್ಟರ್ ನೀಡುವಂತೆ ಮನವಿ ಮಾಡುತ್ತೇನೆ ಎಂದರು.

ತಡೆ ಗೋಡೆ ನಿರ್ಮಾಣ: ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷ, ಕಾಡಂಚಿನ ಗ್ರಾಮದಲ್ಲಿ ಬೆಳೆ ಹಾನಿ ತಡೆಯಲು ಆನೆ ಕಂದಕಗಳನ್ನು ನಿರ್ಮಿಸಲಾಗುತ್ತದೆ. ಕೆಲವೆಡೆ ಸೋಲಾರ್ ಬೇಲಿ ಅಳವಡಿಸಲಾಗಿದೆ. ಅಲ್ಲದೆ 100 ಕೋಟಿ ರೂ. ವೆಚ್ಚದಲ್ಲಿ ರೈಲು ಹಳಿಯಿಂದ ತಡೆಗೋಡೆ ನಿರ್ಮಾಣ ಮಾಡ ಲಾಗುತ್ತಿದೆ. ಈಗಾಗಲೇ ಜನವಸತಿ ಪ್ರದೇಶ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಪದಕ ವಿತರಿಸಲಾಗುವುದು: ಪೆÇಲೀಸ್ ಇಲಾಖೆ ಯಂತೆ ಸೇವೆಯಲ್ಲಿ ಸಾಧನೆ ಮೆರೆದ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಎಂ ಪದಕ ವಿತರಣೆ ಕಾರ್ಯಕ್ರಮ ಕೆಲ ಕಾರಣಗಳಿಂದ ವಿಳಂಬವಾಗಿದೆ. ಇದನ್ನು ಸರ್ಕಾರದ ನಿರ್ಲಕ್ಷ್ಯ ಎನ್ನುವುದು ಸರಿಯಲ್ಲ. ಶೀಘ್ರವೇ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಪದಕ ವಿತರಣೆ ಕಾರ್ಯಕ್ರಮ ನಡೆಸುತ್ತೇವೆ ಎಂದರು.

ಸಭೆ ನಡೆಸಿ ಕ್ರಮ: ಕೊಕ್ಕರೆ ಬೆಳ್ಳೂರು ಸೇರಿದಂತೆ ವಿವಿಧೆಡೆ ಪಕ್ಷಿಗಳ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಈ ವಾರ ಬೆಂಗಳೂರಿನಲ್ಲಿ ಇಲಾಖೆ ಹಿರಿಯ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ, ಪಕ್ಷಿಗಳ ಸಾವಿಗೆ ಕಾರಣ, ಅವುಗಳ ರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ಸಿಎಂ ನಿರ್ಧರಿಸಲಿದ್ದಾರೆ: ಸಚಿವ ಸಂಪುಟ ವಿಸ್ತರಣೆ ಹಾಗೂ ಡಿಸಿಎಂ ಹುದ್ದೆ ತೆಗೆದು ಹಾಕುವುದು ಇಲ್ಲ ಹಾಗೇ ಮುಂದುವರೆಸುವುದಕ್ಕೆ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ. ಅಲ್ಲದೆ, ಮೈಸೂರು ಭಾಗದ ಶಾಸಕರಿಗೆ ಸಚಿವ ಸ್ಥಾನ ನೀಡುವುದೂ ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದರು.

ಬೆಳಗಾವಿ ಎಂದೆಂದೂ ಕರ್ನಾಟಕದ್ದೇ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಯಾವ ಮಾರ್ಗದಲ್ಲಿ ಮುಖ್ಯ ಮಂತ್ರಿಯಾಗಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲಿನ ಜನರ ಓಲೈಕೆಗಾಗಿ ಬೆಳಗಾವಿ ಕುರಿತು ಹೇಳಿಕೆ ನೀಡಿರಬಹುದು. ಆದರೆ ಬೆಳಗಾವಿ ಹಿಂದೆಯೂ, ಮುಂದೆಯೂ ಹಾಗೂ ಎಂದೆಂದೂ ಕರ್ನಾಟಕಕ್ಕೆ ಸೇರಿದ್ದು ಎಂದು ಸ್ಪಷ್ಟ ಪಡಿಸಿದರು. ಈ ವೇಳೆ ಶಾಸಕ ಎಸ್.ಎ.ರಾಮದಾಸ್, ಮುಖಂಡ ಹೆಚ್.ವಿ.ರಾಜೀವ್ ಇನ್ನಿತರರು ಇದ್ದರು.

Translate »