ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ
ಮೈಸೂರು

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ

December 16, 2019

ಮುಂಬೈ, ಡಿ.15-`ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ’ ಎಂದು ಹೇಳಿಕೆ ನೀಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಚ್ಚರಿಕೆ ನೀಡಿದ್ದಾರೆ.

ಮುಂಬೈನಲ್ಲಿ ಭಾನುವಾರ ಪ್ರತಿಭಟನಾ ಸಮಾವೇಶ ಆಯೋಜಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ ಗಳು ದೇವರ ಸಮಾನವಾಗಿ ಪೂಜಿಸುವ ವೀರ್ ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಕೆಳ ಮಟ್ಟಕ್ಕೆ ಇಳಿಸುವ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಹುಲ್ ಗಾಂಧಿ ಈ ಹಿಂದೆಯೂ ಕೂಡ ವೀರ್ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ತಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರಲ್ಲದೇ, ತಾವೂ ಕೂಡ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಹುಲ್ ಹೇಳಿಕೆ ಸಂಬಂಧ ತಾವು ಶಿವಸೇನೆ ಮುಖ್ಯಸ್ಥ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಚರ್ಚಿಸಲಿರುವುದಾಗಿ ಹೇಳಿದ ಅವರು, ಶಿವಸೇನೆ ಹಿಂದುತ್ವ ಸಿದ್ಧಾಂತಕ್ಕೆ ಕಟಿಬದ್ಧವಾಗಿರಬೇಕು. ಕಾಂಗ್ರೆಸ್ ಜೊತೆಗಿನ ಸ್ನೇಹವನ್ನು ಕಡಿತಗೊಳಿಸಿಕೊಳ್ಳಬೇಕು. ಉದ್ಭವ್ ಠಾಕ್ರೆ ತಮ್ಮ ಸಂಪುಟದಲ್ಲಿರುವ ಕಾಂಗ್ರೆಸ್ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ವೀರ್ ಸಾವರ್ಕರ್ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿರುದ್ಧ ಈಗಾಗಲೇ ಶಿವಸೇನೆ ಪ್ರತಿಕ್ರಿಯಿಸಿದೆ. ಶಿವಸೇನೆ ಸಂಸದ ಸಂಜಯ್ ರಾವತ್, `ತಮ್ಮ ಪಕ್ಷ ಹಿಂದುತ್ವ ಸಿದ್ಧಾಂತಗಳ ಬಗ್ಗೆ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ. ವೀರ್ ಸಾವರ್ಕರ್ ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಆದರ್ಶಪ್ರಾಯ ವ್ಯಕ್ತಿ. ಮಹಾತ್ಮಗಾಂಧಿ ಅವರಂತೆ ವೀರ್ ಸಾವರ್ಕರ್ ದೇಶಕ್ಕಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ. ಅಂತಹ ದೇಶಭಕ್ತರನ್ನು ಗೌರವಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Translate »