ಅಕ್ರಮ ಮೀನುಗಾರಿಕೆ ತಡೆಗೆ ಆಗ್ರಹ
ಹಾಸನ

ಅಕ್ರಮ ಮೀನುಗಾರಿಕೆ ತಡೆಗೆ ಆಗ್ರಹ

July 16, 2018

ಬೇಲೂರು: ಇಲ್ಲಿನ ಮೀನು ಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಗಚಿ ಜಲಾಶಯದಲ್ಲಿ ರಾತ್ರಿ ವೇಳೆ ನಡೆಯುತ್ತಿದ್ದ ಅಕ್ರಮ ಮೀನುಗಾರಿಕೆ ಬೆಳಕಿಗೆ ಬಂದಿದ್ದು, ಯಗಚಿ ಮೀನುಗಾರರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಆರೋಪಿಯೋರ್ವನನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ರಾತ್ರಿ ವೇಳೆ ಯಗಚಿ ಜಲಾಶಯದ ಬೆಣ್ಣೂರು ಸಮೀಪದ ಹಿನ್ನೀರಿನಲ್ಲಿ ಕೆಲವು ಮೀನುಗಾರರು ಮೀನು ಹಿಡಿಯಲು ಬಲೆ ಹಾಕಿರುವ ಸುದ್ದಿ ತಿಳಿದು ಶನಿವಾರ ಬೆಳಿಗ್ಗೆ ಸಂಘ ಅಧ್ಯಕ್ಷ ಹನುಮಂತು ತಮ್ಮ ಸದಸ್ಯರೊಂದಿಗೆ ಸ್ಥಳಕ್ಕೆ ತೆರಳಿದಾಗ ಜಲಾಶಯದಲ್ಲಿ ಮೀನು ಹಿಡಿಯಲು ಬಲೆ ಹಾಕಿರುವುದು ದೃಢಪಟ್ಟಿದೆ. ಅಲ್ಲದೆ ಹಿನ್ನೀರಿನ ಸಮೀಪದ ನಾರಾಯಣಪುರ ರಸ್ತೆಯಲ್ಲಿ ಬೇಲೂರಿನ ಮೀನು ಮಾರಾಟಗಾರ ತೋಫಿಕ್ ಎಂಬಾತ ಕಾರಿನಲ್ಲಿ ಸುಮಾರು 50 ಕೆ.ಜಿ.ಯಷ್ಟು ಮೀನು ತುಂಬಿರುವ ಬಾಕ್ಸ್ ಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನನ್ನು ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು.

ಈ ವೇಳೆ ಮಾತ ನಾಡಿದ ಸಂಘದ ಅಧ್ಯಕ್ಷ ಹನುಮಂತು, ಬೇಲೂರು ತಾಲೂಕಿನ ಚಿಕ್ಕ ಬ್ಯಾಡಿಗೆರೆ ಸಮೀಪವಿರುವ ಯಗಚಿ ಜಲಾಶಯದಲ್ಲಿ ಜೂನ್, ಜುಲೈ ತಿಂಗಳು ಮೀನುಗಾರಿಕೆ ಮಾಡದಂತೆ ಸರ್ಕಾರದ ಆದೇಶವಿದ್ದರೂ ಕೆಲವರು ರಾತ್ರಿ ವೇಳೆ ಕಳ್ಳತನದಿಂದ ಮೀನು ಹಿಡಿಯುತ್ತಿ ದ್ದಾರೆ. ಈ ಬಗ್ಗೆ ಇಲ್ಲಿನ ಮೀನುಗಾರಿಕೆ ಇಲಾ ಖಾಧಿಕಾರಿ ಅಮೃತ್‍ಗೆ ಸಾಕಷ್ಟು ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳದೆ ಉಡಾಫೆಯಿಂದ ವರ್ತಿಸುತ್ತಾರೆ ಎಂದು ದೂರಿದರಲ್ಲದೆ, ಮೀನುಗಾರಿಕೆ ಅಧಿಕಾರಿಗಳೇ ಅಕ್ರಮ ಮೀನುಗಾರಿಕೆಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ಇದ್ದು, ಕೂಡಲೇ ರಾತ್ರಿ ವೇಳೆ ಅಕ್ರಮ ವಾಗಿ ಮೀನು ಹಿಡಿಯುತ್ತಿರುವ ಖದೀಮರ ಮೇಲೆ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನದಲ್ಲಿ ಯಗಚಿ ಮೀನುಗಾರರ ಅಭಿವೃದ್ಧಿ ಸಂಘದಿಂದ ಕಚೇರಿಯ ಮುಂಭಾಗ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಸಂಘದ ಕಾರ್ಯದರ್ಶಿ ತಾಶಿಫ್ ಅಹಮದ್.

ಸದಸ್ಯರಾದ ಸಮೀವುಲ್ಲಾ, ಇಸ್ಮಾಯಿಲ್, ಅಹ್ಮದ್ ಷರೀಫ್ ಭಾಷಾ ಹಾಗೂ ಇತರರಿದ್ದರು.

Translate »