ಮೈದುಂಬಿದ ಹೇಮಾವತಿಗೆ ರೇವಣ್ಣ ದಂಪತಿ ಬಾಗಿನ
ಹಾಸನ

ಮೈದುಂಬಿದ ಹೇಮಾವತಿಗೆ ರೇವಣ್ಣ ದಂಪತಿ ಬಾಗಿನ

July 16, 2018

ಸಕಲೇಶಪುರದ: ಮಲೆನಾಡಿನಲ್ಲಿ ಪುನರ್ವಸು ಮಳೆಯ ಅಬ್ಬರದಿಂದ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದ್ದು, ಇಂದು ಲೋಕೋಪಯೋಗಿ ಸಚಿವ ರೇವಣ್ಣ ದಂಪತಿ ಇಲ್ಲಿನ ಹೊಳೆಮಲ್ಲೇಶ್ವರ ದೇವಾಲಯದ ಮುಂಭಾಗ ಬಾಗಿನ ಅರ್ಪಿಸಿದರು.

ವರುಣನ ಅಬ್ಬರದಿಂದ ಮಲೆನಾಡಿನ ಹಲವೆಡೆ ಕೆರೆ-ಕಟ್ಟೆಗಳು ತುಂಬಿಹರಿಯು ತ್ತಿರುವುದರಿಂದ ಹೇಮಾವತಿ ನದಿಯಲ್ಲೂ ನೀರು ಹೆಚ್ಚಿ ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಲೋಕೋಪಯೋಗಿ ಸಚಿವ ರೇವಣ್ಣ ದಂಪತಿ ಇಲ್ಲಿನ ಹೊಳೆಮಲ್ಲೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇಗುಲದ ಮುಂಭಾಗ ಹರಿ ಯುವ ನದಿಯಲ್ಲಿ ಬಾಗಿನ ಸಲ್ಲಿಸಿದರು.

ಈಶ್ವರ ದೇವಾಲಯ ಮುಳುಗಡೆ: ನದಿ ನೀರಿನ ಮಟ್ಟ ಹೆಚ್ಚಳದಿಂದ ಪಟ್ಟಣದ ಈಶ್ವರ ದೇವಾಲಯ ಬಹುತೇಕ ಮುಳುಗಿದೆ. ಹೇಮಾವತಿ ನದಿಯ ಒಳ ಹರಿವಿನ ಪ್ರಮಾಣ 28 ಸಾವಿರ ಕ್ಯೂಸೆಕ್ಸ್ ದಾಟಿದ್ದು, ಹೇಮಾವತಿ ಜಲಾಶಯದಿಂದ ಪ್ರತಿ ನಿತ್ಯ 16 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡು ಗಡೆ ಮಾಡಲಾಗಿದೆ. ಹಲವು ವರ್ಷಗಳ ಬಳಿಕ ತುಂಬಿ ತುಳುಕುತ್ತಿರುವ ಹೇಮಾವತಿ ಜಲಾಶಯಕ್ಕೆ ರೇವಣ್ಣ ದಂಪತಿ ಶನಿವಾರ ಪೂಜೆ ಸಲ್ಲಿಸಿ ನೀರು ಬಿಡುಗಡೆಗೊಳಿಸಿದರು.

ಐದು ಕೆರೆಗಳಿಗೆ ನೀರು: ಹೇಮಾವತಿ ಜಲಾಶಯದಿಂದ ನೀರನ್ನು ದಸರಿಘಟ್ಟದ ನಾಲೆಯಿಂದ ಹೊನ್ನವಳ್ಳಿ ಏತನೀರಾವರಿ ಕಾಲುವೆಯ ಪೈಪ್‍ಲೈನ್ ಮೂಲಕ ತಾಲೂಕಿನ ಕಣಕಟ್ಟೆ, ಕಾಮಸಮುದ್ರ, ಹೊಳಲಕೆರೆ, ಮಾಡಾಳು, ಹರಳಕಟ್ಟ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಸತತ ಬರಗಾಲದಿಂದ ಅರಸೀಕೆರೆ ತಾಲೂಕು ತತ್ತರಿಸಿ, ಕುಡಿಯುವ ನೀರಿಗೂ ಪರಿತಪಿ ಸುವಂತಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹೇಮಾವತಿ ಜಲಾಶಯ ತುಂಬಿದೆ. ಅರಸೀಕೆರೆ ತಾಲೂಕಿನ 5 ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ.

Translate »