ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆಯಿಂದ ಅಹೋರಾತ್ರಿ ಧರಣಿ
ಮೈಸೂರು

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಆಗ್ರಹಿಸಿ ನಾಳೆಯಿಂದ ಅಹೋರಾತ್ರಿ ಧರಣಿ

May 4, 2019

ಮೈಸೂರು: ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿಗಳ ಒಕ್ಕೂಟದ ವತಿಯಿಂದ ಮೇ 6ರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಒಕ್ಕೂಟಗಳ ಸಂಚಾಲಕ ಶೈಲೇಂದ್ರ ಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂದು ಜಿಲ್ಲೆಯ ಹೆಚ್‍ಡಿ ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗೆ 11ರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗು ವುದು. ಆದಿವಾಸಿಗಳ ಸ್ಥಳಾಂತರಕ್ಕೆ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲು ಆಗ್ರಹಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಹೆಚ್‍ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲೂಕುಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ವಾಸ ಮಾಡುತ್ತಿವೆ. ಇವರನ್ನು 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಷ್ಠಾನದ ನೆಪದಲ್ಲಿ ಹಾಗೂ ನುಗು, ತಾರಕ, ಕಬಿನಿ, ಅಣೆಕಟ್ಟುಗಳನ್ನು ಕಟ್ಟುವ ಸಂದರ್ಭದಲ್ಲಿ ಅರಣ್ಯದಿಂದ ಒಕ್ಕಲೆಬ್ಬಿಸಲಾಯಿತು. ಆದರೆ ಪುನರ್ವಸತಿ ಸೇರಿದಂತೆ ಯಾವುದೇ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಿಲ್ಲ. ಇಂತಹ ಸನ್ನಿವೇಶ ಅವಲೋಕಿಸಿಯೇ ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಲಾಯಿತು. ಆದರೆ ಅದರ ಸಮರ್ಪಕ ಅನುಷ್ಠಾನ ಜಿಲ್ಲೆಯಲ್ಲಿ ಆಗಿಲ್ಲ ಎಂದು ಆರೋಪಿಸಿದರು.

ಮೂರು ತಾಲೂಕುಗಳ 179 ಹಾಡಿಗಳಿಂದ 300ಕ್ಕೂ ಹೆಚ್ಚು ಮಂದಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಹೆಚ್‍ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಮಹದೇವು, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಎ.ಹೆಚ್.ವಿಶ್ವನಾಥ್ ಅವರು ಮಧ್ಯೆ ಪ್ರವೇಶಿಸಿ ಆದಿವಾಸಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಆಶ್ರಮ ಶಾಲೆಗಳನ್ನು ಉನ್ನತೀಕರಿಸಿ ಶಿಕ್ಷಣ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಬೇಕು. ಕೊಡಗು, ಮೈಸೂರು ಜಿಲ್ಲೆಗಳ ಈ ಶಾಲೆಗಳಲ್ಲಿ ಈಗಾಗಲೇ ಆದಿವಾಸಿ ಯುವಜನರು 10-12 ವರ್ಷಗಳಿಂದ ಕಡಿಮೆ ವೇತನಕ್ಕೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದು, ಇವರನ್ನು ಖಾಯಂಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಆಯಾಯ ಗ್ರಾಪಂಗಳಲ್ಲಿ ವೈಯಕ್ತಿಕ ಅರಣ್ಯ ಹಕ್ಕು ಹಾಗೂ ಸಾಮೂಹಿಕ ಅರಣ್ಯ ಹಕ್ಕಿನ ಅರ್ಜಿ ಗಳನ್ನು ಸ್ವೀಕರಿಸಬೇಕು. ಮುಜಾಫರ್ ಅಸ್ಸಾದಿ ವರದಿಯಂತೆ ನಾಗರಹೊಳೆ ಅರಣ್ಯದಿಂದ ಒಕ್ಕಲೆಬ್ಬಿಸಿದ 1106 ಆದಿವಾಸಿ ಕುಟುಂಬಗಳಿಗೆ ತುರ್ತಾಗಿ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪಿರಿಯಾಪಟ್ಟಣ ತಾಲೂಕಿನ ಆದಿವಾಸಿ ಮಹಿಳೆ ಜಾನಕಮ್ಮ, ಹುಣಸೂರು ತಾಲೂಕಿನ ಆದಿವಾಸಿಗಳಾದ ಬಾಬು, ಈಶ್ವರಿ, ಲಕ್ಷ್ಮಿ ಗೋಷ್ಠಿಯಲ್ಲಿದ್ದರು.

Translate »