ಚುನಾವಣೆ ವೆಚ್ಚಕ್ಕೆ ಜಿ.ಮಾದೇಗೌಡರಿಂದ ಹಣದ ಬೇಡಿಕೆ
ಮಂಡ್ಯ, ಮೈಸೂರು

ಚುನಾವಣೆ ವೆಚ್ಚಕ್ಕೆ ಜಿ.ಮಾದೇಗೌಡರಿಂದ ಹಣದ ಬೇಡಿಕೆ

April 8, 2019

ಮಂಡ್ಯ:ಇಡೀ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವೆನಿಸಿ ಕೊಂಡಿರುವ ಮಂಡ್ಯದಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ಆರೋಪಗಳ ನಡುವೆಯೇ ಹಿರಿಯ ಕಾಂಗ್ರೆಸ್ ಮುತ್ಸದ್ಧಿ, ಮಾಜಿ ಸಂಸದ ಜಿ.ಮಾದೇಗೌಡರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟ ರಾಜು ಬಳಿ ಹಣದ ಬೇಡಿಕೆಯಿಟ್ಟ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಕ್ಷೇತ್ರದಲ್ಲಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಣದ ಹೊಳೆಯೇ ಹರಿಯಲಿದೆ ಎಂಬ ಮಾತುಗಳಿಗೆ ಈ ಆಡಿಯೋ ಪುಷ್ಟಿ ನೀಡಿದಂತಿದೆ. ಪುಟ್ಟರಾಜು ಅವರ ಜೊತೆ ಜಿ.ಮಾದೇ ಗೌಡರು ಸುಮಾರು 1.50 ಸೆಕೆಂಡ್ ಮಾತನಾಡಿರುವ ಆಡಿಯೋದಲ್ಲಿ ಮೊದಲಿಗೆ ವ್ಯಕ್ತಿಯೊಬ್ಬರು ಪುಟ್ಟರಾಜು ಅವರಿಗೆ ಕರೆ ಮಾಡಿ ಜಿ.ಮಾದೇಗೌಡರು ಮಾತನಾಡುತ್ತಾರೆ ಎಂದು ಹೇಳಿದ ನಂತರ ಪುಟ್ಟರಾಜು ಜೊತೆ ಮಾತು ಆರಂಭಿಸಿದ ಮಾದೇಗೌಡರು, ತಮ್ಮ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಮೊದಲಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ. ರಾತ್ರಿ ನಾನು ಮೀಟಿಂಗ್‍ನಲ್ಲಿ ಬಿಜಿಯಾಗಿದ್ದೆ. ಇಂದು ಕರೆ ಮಾಡಿದಾಗ ನಿಮ್ಮ ಲೈನ್ ಸಿಗಲಿಲ್ಲ ಎಂದು ಪುಟ್ಟರಾಜು ಸಮಜಾಯಿಷಿ ನೀಡುತ್ತಾರೆ.

ಮಾತು ಮುಂದುವರೆಸಿದ ಮಾದೇಗೌಡರು, ಮಂಡ್ಯದಲ್ಲಿ ಡಿ.ಸಿ.ತಮ್ಮಣ್ಣ ಮತ್ತು ನಮ್ಮದು ಪ್ರತ್ಯೇಕ ಗುಂಪುಗಳಿವೆ. ಅದು ನಿಮಗೆ ಗೊತ್ತಲ್ಲಾ. ನನ್ನಿಂದ ಓಡಾಡಲು ಆಗುವುದಿಲ್ಲ. ನನ್ನ ಮಗ ಮಧುಗೆ ಹೇಳಿದ್ದೇನೆ. ಅವನು ಓಡಾಡು ತ್ತಿದ್ದಾನೆ. ಈಗಾಗಲೇ ತಮ್ಮಣ್ಣ ಹಣ ಖರ್ಚು ಮಾಡಿಕೊಂಡು ಓಡಾಡುತ್ತಿದ್ದಾರೆ. ನಮ್ಮ ಜನ ಹಣ ಕೇಳುತ್ತಿದ್ದಾರೆ. ಆದ್ದರಿಂದ ನನ್ನ ಮಗನಿಗೆ ಒಂದಷ್ಟು ಹಣ ಕೊಟ್ಟುಬಿಡಿ ಎಂದು ಹೇಳುತ್ತಾರೆ. ಆಯ್ತು, ನಾನ್ ಆರೇಂಜ್ ಮಾಡುತ್ತೇನೆ ಎಂದು ಪುಟ್ಟರಾಜು ಹೇಳಿದಾಗ, ಈಗಾಗಲೇ ದಿನ ಆಗಿದೆ. ತಕ್ಷಣ ಆರೇಂಜ್ ಮಾಡಿ. ಟೈಮ್ ಜಾಸ್ತಿ ಇಲ್ಲ. ಅದ್ಯಾರ್ ಹಣ ಕೊಡ್ತಾರೆ ಹೇಳಿ. ನಾನೇ ಬೇಕಾದ್ರೆ ಅವರ ಜೊತೆ ಮಾತನಾಡ್ತೇನೆ ಎಂದು ಮಾದೇಗೌಡರು ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪುಟ್ಟರಾಜು, ಇಲ್ಲ ಅಪ್ಪಾಜಿ, ತಕ್ಷಣದಲ್ಲೇ ನಾನೇ ಹಣ ಆರೇಂಜ್ ಮಾಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಈ ಆಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಮಾದೇಗೌಡರು ಹಣ ಕೇಳಿದ್ದರಲ್ಲಿ ತಪ್ಪೇನಿದೆ?

ಮಂಡ್ಯ: ಮಾದೇಗೌಡರು ನನ್ನ ಬಳಿ ಹಣ ಕೇಳಿದ್ದು ಸತ್ಯ ಎಂದು ಸಚಿವ ಸಿ.ಎಸ್.ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಜಿ.ಮಾದೇಗೌಡರು ಸಿ.ಎಸ್.ಪುಟ್ಟರಾಜು ಅವರಿಗೆ ಕರೆ ಮಾಡಿ ಹಣ ಕೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್‍ಗೆ “ಇದು ನಿಜ’’ ಎಂದು ಸಚಿವ ಪುಟ್ಟರಾಜು ಮಾಧ್ಯಮ ವರಿಗೆ ಸ್ಪಷ್ಟಪಡಿಸಿದರು. ಮಾದೇಗೌಡರು ನನ್ನೊಂದಿಗೆ ಮಾತ ನಾಡಿರುವುದು ಸತ್ಯ. ಚುನಾವಣಾ ಪ್ರಚಾರಕ್ಕೆ ಆಯೋಗವೇ ಅಭ್ಯರ್ಥಿಗಳಿಗೆ 70 ಲಕ್ಷ ಖರ್ಚು ಮಾಡಲು ಅವಕಾಶ ಮಾಡಿ ಕೊಟ್ಟಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಗಳಾಗಿರುವುದರಿಂದ ಅವರು ನಮಗೆ ಸಪರೇಟ್ ಆಗಿ ಚುನಾವಣೆಗೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಹೇಳಿರುವಂತದ್ದು ನಿಜ. ಹಾಗೆಯೇ ನಾನು ಕೂಡ ಅರೆಂಜ್ ಮಾಡಿಕೊಡುತ್ತೇನೆ ಎಂದು ಹೇಳಿದ್ದು ಕೂಡ ಅಷ್ಟೇ ಸತ್ಯ. ಚುನಾವಣಾ ಪ್ರಚಾರ ಮಾಡಲು ವ್ಯವಸ್ಥೆಗಳನ್ನು ಮಾಡಲು ತಮ್ಮಣ್ಣನ ಬಳಿ ನಮ್ಮ ಹುಡುಗರು ಹೋಗೋದಿಲ್ಲ.

ಹೀಗಾಗಿ ಜಿಲ್ಲಾ ಮಂತ್ರಿ, ಮೈತ್ರಿ ಧರ್ಮ ಪಾಲನೆ ಮಾಡಿ ಚುನಾವಣೆ ಚೆನ್ನಾಗಿ ನಡೆಸಬೇಕು. ಅದಕ್ಕೆ ಅರೆಂಜ್‍ಮೆಂಟ್ ಮಾಡಿಕೊಡಿ ಎಂದು ಮಾದೇಗೌಡರು ಕೇಳಿದ್ದಾರೆ ಅದರಲ್ಲಿ ತಪ್ಪೇನಿದೆ? ಎಂದು ಸಚಿವರು ಸಮರ್ಥಿಸಿಕೊಂಡರು.

ಶುಕ್ರವಾರ ರಾತ್ರಿಯೇ ಅವರು ನನ್ನ ಜೊತೆ ಫೋನ್‍ನಲ್ಲಿ ಮಾತನಾಡಿದ್ದಾರೆ, ನಿನ್ನೆ ಬ್ಯಾಂಕ್ ರಜೆ ಇತ್ತು. ಹೀಗಾಗಿ ಹಣ ಹೊಂದಿಸುತ್ತಿದ್ದೇವೆ. ಇದು ಬಿಟ್ಟು ಎಲೆಕ್ಷನ್ ದಿಕ್ಕು ತಪ್ಪಿಸುವಂತದ್ದು ಏನೂ ಇಲ್ಲ. ಇದರಿಂದ ಫೋನ್ ಟ್ರ್ಯಾಪ್ ಮಾಡುತ್ತಾರೆ ಎಂದು ಗೊತ್ತಾಗುತ್ತೆ ಅಲ್ವ ಎಂದರು. ಆದಾಯ ತೆರಿಗೆ ಇಲಾಖೆಯ ಮುಖಾಂತರ ಫೋನ್ ಕದ್ದಾಲಿಕೆ ಮಾಡುತ್ತಾರೆ ಎಂಬ ಮಾಹಿತಿ ನಮಗೆ ಲಭಿಸಿದೆ. ಹೀಗಾಗಿ ಐಟಿ ಇಲಾಖೆಯೇ ಅವರ ಪರ ಕೆಲಸ ಮಾಡುತ್ತದೆ ಎಂದು ಇದರಿಂದ ಸಾಬೀತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು. ನಾವು ಹೋಟೆಲಿನಲ್ಲಿ ಉಳಿದುಕೊಂಡರೂ ಬಂದು ರೇಡ್ ಮಾಡುತ್ತಾರೆ. ಅಲ್ಲದೆ ಹಿಂದೆ ಬಿದ್ದು ನನ್ನ ಕುಟುಂಬದ ಫೋನ್‍ಗಳನ್ನು ಟ್ರ್ಯಾಪ್ ಮಾಡುತ್ತಿದ್ದಾರೆ ಅನ್ನೋ ಮಾಹಿತಿಯೂ ನನಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ದುಡ್ ಖರ್ಚು ಮಾಡದೇ ಎಲೆಕ್ಷನ್ ಮಾಡೋರು ಯಾರಾದ್ರೂ ಇದ್ದಾರಾ?

ಮಂಡ್ಯ: ಸಚಿವ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿ ರುವ ಮಾಜಿ ಸಂಸದ ಜಿ.ಮಾದೇ ಗೌಡ, ಅದು ನನ್ನದೆ, ಹಣ ಕೊಡದೆ ಯಾರು ಚುನಾವಣೆ ಮಾಡ್ತಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಪ್ರಚಾರಕ್ಕೆ ಬಂದವರಿಗೆ ಹಣಕೊಡಿ ಅಂತ ಕೇಳಿದ್ದೀನಿ. ಕ್ಯಾನ್ವಾಸ್‍ಗೆ ಬಂದವರಿಗೆ ತಿಂಡಿ, ಊಟ ಕೊಡಿಸಬೇಕು ಅಲ್ವಾ.ಅದ್ಕೆ ನಮ್ ಸಚಿವ ಪುಟ್ಟರಾಜುಗೆ ಕೇಳ್ದೆ ತಪ್ಪೇನಿದೆ. ನನ್ಗೆ ತಪ್ ಕಾಣಿಸ್ತಾ ಇಲ್ಲ ಎಂದರು.

ಇಂಡಿಯಾದಲ್ಲಿ ದುಡ್ಡು ಖರ್ಚು ಮಾಡದೇ ಯಾರಾದ್ರೂ ಎಲೆಕ್ಷನ್ ಮಾಡೋರು ಇದಾರಾ. ಮೋದಿಯಿಂದ ಹಿಡಿದು ದುಡ್ ಖರ್ಚ್ ಮಾಡದೇ ಇರೋರು ಯಾರಾದರೂ ಇದ್ದಾರಾ? ಮೊನ್ನೆ ಹುಡುಗರು ಬಂದು ನನ್ ಹತ್ರ ದುಡ್ ಕೇಳ್ತಾರೆ. ನನ್ ಹತ್ರ ದುಡ್ ಇಲ್ಲ. ಕಾಫಿ ಕೊಡಿಸ್ಬೇಕು, ಊಟ ಕೂಡಿಸ್ಬೇಕು, ಎಣ್ಣೆ ಕೊಡಿಸ್ಬೇಕು ಅಂತ ಕೇಳ್ತಾರೆ. ಇದು ಕಾಮನ್ ಅಗಿದೆ. ಅದಕ್ಕೆ ನಾನ್ ಎಲ್ಲಿಂದ ತಂದ್ ಕೊಡ್ಲಿ, ನನ್ ಹತ್ರ ದುಡ್ಡಿಲ್ಲ. ಹಾಗಾಗಿ ಮಿನಿಸ್ಟರ್‍ಗೆ ಕೇಳ್ದೆ. ನಾನು ಲಂಚ ಕೇಳಿಲ್ಲ. ನನ್ ಹತ್ರ ಬಂದ ಹುಡುಗರಿಗೆ ದುಡ್ ಕೇಳ್ದೆ. ಇದರಲ್ಲಿ ಕೆಟ್ ಹೋದ್ರೆ ಸಂತೋಷ. ನಾನು ಹೆಸರಿಗಾಗಿ ಹೋರಾಟ ಮಾಡ್ತಾ ಇಲ್ಲ. ನಾನೇನು ಸಿಎಂ ಆಗಬೇಕಾ, ಮಿನಿಸ್ಟರ್ ಆಗಬೇಕಾ. ಜನ ಬೈದರೆ ಬೈಸಿಕೊಳ್ಳಲು ನಾನು ಸಿದ್ಧ ಎಂದರು.

Translate »