ಚುನಾವಣೆ ನಂತರ ಮೈತ್ರಿ ಸರ್ಕಾರ ಪತನ
ಮೈಸೂರು

ಚುನಾವಣೆ ನಂತರ ಮೈತ್ರಿ ಸರ್ಕಾರ ಪತನ

April 8, 2019

ಮೈಸೂರು:ಲೋಕಸಭಾ ಚುನಾವಣೆ ನಂತರ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.

ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಅಧಿಕಾರದ ಆಸೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಇದೀಗ ಲೋಕಸಭಾ ಚುನಾ ವಣೆ ಎದುರಿಸಲು ಮುಂದಾಗಿದ್ದಾರೆ. ದೊಡ್ಡವರ ಮಟ್ಟದಲ್ಲಿ ಮಾಡಿಕೊಂಡಿ ರುವ ಮೈತ್ರಿಗೆ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಸಹಮತವಿಲ್ಲದ ಕಾರಣ ಈ ಚುನಾವಣೆಯಲ್ಲಿ ಅವರು ನೆಲಕಚ್ಚುವುದು ಗ್ಯಾರಂಟಿ ಎಂದು ವ್ಯಂಗ್ಯ ಮಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಆದರೆ ಎಲ್ಲೂ ಹೊಂದಾಣಿಕೆ ಕಾಣಿಸುತ್ತಿಲ್ಲ. ಅಧಿ ಕಾರಕ್ಕಾಗಿ ನಾಯಕರು ಒಂದಾಗಿ ದ್ದಾರೆಯೇ ಹೊರತು, ಕಾರ್ಯ ಕರ್ತರ ನಡುವೆ ಒಮ್ಮತ ಮೂಡಿಲ್ಲ. ಆದ್ದರಿಂದಲೇ ಮೈತ್ರಿ ಸಭೆಗಳಲ್ಲಿ ಭಿನ್ನಮತ ಸ್ಫೋಟವಾಗುತ್ತಿದೆ ಎಂದರು. ಮೊನ್ನೆ ಮೈಸೂರಲ್ಲಿ ನಡೆದ ಜೆಡಿಎಸ್ ಸಭೆಯಲ್ಲೇ ಭಿನ್ನರಾಗ ಭುಗಿಲೆದ್ದು ಕಾರ್ಯ ಕರ್ತರು ಮೋದಿಗೆ ಜೈಕಾರ ಹಾಕಿರುವುದೇ ಒಗ್ಗಟ್ಟಿಲ್ಲ ಎಂಬು ದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ದ್ವೇಷ ಸಾಧನ: ಚಾಮುಂಡೇಶ್ವರಿಯಲ್ಲಿ ಸೋತ ನಂತರ ಸಿದ್ದರಾಮಯ್ಯ ಹೆಚ್.ಡಿ.ದೇವೇಗೌಡರ ಮನೆ ಬಾಗಿಲಿಗೆ ಹೋಗಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದಾರಾದರೂ, `ಹಾವಿನ ದ್ವೇಷ ಹನ್ನೆರಡು ವರುಷ’ ಎಂಬಂತೆ ದೇವೇಗೌಡರ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅವರು ನುಡಿದರು. ಅದಕ್ಕಾಗಿಯೇ ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಎದುರಾಳಿಗಳನ್ನು ಕಣಕ್ಕಿಳಿಸಿರುವ ಸಿದ್ದರಾಮಯ್ಯ, ದೇವೇಗೌಡ ಮತ್ತು ಮೊಮ್ಮಕ್ಕಳನ್ನು ಸೋಲಿಸಲು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದು, ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ದ್ವೇಷ ತೀರಿಸಿಕೊಳ್ಳಲು ರಣತಂತ್ರ ಹೆಣೆದಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು. ಮೈಸೂರಲ್ಲೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವ ಮೂಲಕ ಸಿದ್ದ ರಾಮಯ್ಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯ ಎಂದು ಕಾಯುತ್ತಿದ್ದಾರೆ. ಎಂದು ಅವರು ಮೈತ್ರಿಗಳ ವಿರುದ್ಧ ಟಾಂಗ್ ನೀಡಿದರು.

ಬಿಜೆಪಿ ಬೆಂಬಲಿಸುವಂತೆ ನಾಯಕ ಸಮುದಾಯಕ್ಕೆ ಶ್ರೀರಾಮುಲು ಕರೆ
ಮೈಸೂರು: ಈ ಬಾರಿಯ ಲೋಕಸಭಾ ಚುನಾ ವಣೆಯಲ್ಲಿ ಮೈಸೂರು-ಕೊಡಗು ಮತ್ತು ಚಾಮರಾಜನಗರ ಕ್ಷೇತ್ರಗಳಲ್ಲಿ ನಾಯಕ ಸಮುದಾಯದವರು ಬಿಜೆಪಿ ಅಭ್ಯರ್ಥಿಗಳಾದ ಪ್ರತಾಪ್ ಸಿಂಹ ಮತ್ತು ವಿ.ಶ್ರೀನಿವಾಸಪ್ರಸಾದ್ ಅವರಿಗೆ ಮತ ನೀಡಬೇಕೆಂದು ಮಾಜಿ ಸಚಿವ ಶ್ರೀರಾಮುಲುಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕ ಸಮುದಾಯದ ಪಂಗಡಗಳೇ ಆದ ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿಸಲು ನಾವು ಮಾಡಿರುವ ಪ್ರಯತ್ನ ಯಶಸ್ವಿಯಾಗಿದೆ ಎಂದರು. ಸಂಸದ ಪ್ರತಾಪ್ ಸಿಂಹ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ದಿವಂಗತ ಅನಂತಕುಮಾರ್ ನೆರವಿನಿಂದ ಈ ಸಮುದಾಯಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಶ್ರಮಿಸಿದ ಫಲವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಚುನಾವಣೆಯಲ್ಲಿ ಪ್ರತಾಪ್ ಸಿಂಹ ಮತ್ತು ಶ್ರೀನಿವಾಸಪ್ರಸಾದ್ ಗೆದ್ದು ಬಂದ
ನಂತರ ನಡೆಯಲಿರುವ ಮೊದಲ ಅಧಿವೇಶನದಲ್ಲೇ ಈ ಬಗ್ಗೆ ಗಮನ ಸೆಳೆದು ಪರಿವಾರ ಮತ್ತು ತಳವಾರ ಪಂಗಡಗಳನ್ನು ಎಸ್ಟಿ ವರ್ಗಕ್ಕೆ ಸೇರಿಸಿ ಗೆಜೆಟ್‍ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಶ್ರೀನಿವಾಸಪ್ರಸಾದ್, ಈ ಬೇಡಿಕೆ ಬಹಳ ಹಿಂದೆಯೇ ಇತ್ತು. ನಾವೂ ಕೂಡ ಇದಕ್ಕಾಗಿ ಹೋರಾಟ ನಡೆಸಿದ್ದೆವು. ರಾಜೀವ್ ಗಾಂಧಿ, ಬೂಟಾಸಿಂಗ್ ಅವರ ಬಳಿ ನಿಯೋಗ ಕೊಂಡೊಯ್ದು ಪ್ರಯತ್ನ ಪಟ್ಟಿದ್ದೆವು. ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದರು. ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬಿಎಸ್‍ಪಿ ಮಾಜಿ ಅಧ್ಯಕ್ಷ ದೇವದತ್ತ, ಹೆಚ್.ಡಿ.ಕೋಟೆ ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಪುಟ್ಟೇಗೌಡ ಸೇರಿದಂತೆ ಹಲವು ಮುಖಂಡರು ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಅಭ್ಯರ್ಥಿಗಳಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್‍ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ರಾಜ್ಯ ಉಪಾಧ್ಯಕ್ಷ ಡಿ.ರಾಜೇಂದ್ರ, ಮುಖಂಡರಾದ ಆರ್.ರಘು, ಅಪ್ಪಣ್ಣ, ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಸಿದ್ದರಾಜು, ಬೋರೇಗೌಡ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪರಿವಾರ, ತಳವಾರ ಸಮುದಾಯ ಎಸ್ಟಿಗೆ ಸೇರಿಸಲು ಮೊದಲ ಅಧಿವೇಶನದಲ್ಲೇ ಪ್ರಸ್ತಾಪ
ಮೈಸೂರು: ಈ ಬಾರಿ ತಾವು ಗೆದ್ದು ಬಂದ ನಂತರ ಮೊದಲ ಸಂಸತ್ ಅಧಿವೇಶನದಲ್ಲೇ ಪರಿವಾರ ಮತ್ತು ತಳವಾರ ಸಮುದಾಯ ಗಳನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಬಗ್ಗೆ ಪ್ರಸ್ತಾಪಿಸಿ, ಈ ಸಮುದಾಯಗಳನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆಗೊಳಿಸಿದ ಆದೇಶವನ್ನು ಗೆಜೆಟ್‍ನಲ್ಲಿ ಪ್ರಕಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಪರಿವಾರ ಮತ್ತು ತಳವಾರ ಸಮುದಾಯಗಳು ನಾಯಕ ಸಮುದಾಯದ ಪಂಗಡಗಳೇ ಆಗಿದ್ದು, ಈಗಾಗಲೇ ನಾಯಕ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಅದೇ ರೀತಿ ಪರಿವಾರ ಮತ್ತು ತಳವಾರ ಸಮು ದಾಯಗಳನ್ನೂ ಕೂಡ ಎಸ್ಟಿ ವರ್ಗಕ್ಕೆ ಸೇರಿಸಬೇಕೆಂಬ ಹಲವಾರು ವರ್ಷಗಳ ಬೇಡಿಕೆ ನ್ಯಾಯಯುತವಾಗಿದೆ. ಆದ್ದರಿಂದ ಈ ಸಮುದಾಯಗಳಿಗೆ ನ್ಯಾಯ ಒದಗಿಸಲು ತಾವು ಬದ್ಧರಿರುವುದಾಗಿ ಪ್ರತಾಪ್ ಸಿಂಹ ತಿಳಿಸಿದರು.

Translate »