ಸುಲಲಿತವಾಗಿ ನಡೆದ ರಂಗಾಯಣ  `ಚಿಣ್ಣರ ಮೇಳ’ ಅರ್ಜಿ ವಿತರಣೆ
ಮೈಸೂರು

ಸುಲಲಿತವಾಗಿ ನಡೆದ ರಂಗಾಯಣ `ಚಿಣ್ಣರ ಮೇಳ’ ಅರ್ಜಿ ವಿತರಣೆ

April 8, 2019

ಮೈಸೂರು: ಈ ತಿಂಗಳ 13ರಿಂದ ಮೈಸೂರು ರಂಗಾ ಯಣ ಹಮ್ಮಿಕೊಂಡಿರುವ `ಚಿಣ್ಣರ ಮೇಳ’ಕ್ಕೆ ಅರ್ಜಿ ವಿತರಣೆ ಯಾವುದೇ ಗೊಂದಲ, ಗದ್ದಲಗಳಿಗೆ ಅವಕಾಶವಾಗದಂತೆ ಸುಲಲಿತವಾಗಿ ನಡೆಯಿತು.

26 ದಿನಗಳ ಚಿಣ್ಣರ ಮೇಳದ ಅರ್ಜಿ ಗಳನ್ನು ಭಾನುವಾರ ಬೆಳಿಗ್ಗೆ 10 ಗಂಟೆ ಯಿಂದ ನೀಡಲಾಗುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸೇರ್ಪಡೆ ಮಾಡುವ ಆಶಯದೊಂದಿಗೆ ಭಾನು ವಾರ ಮುಂಜಾನೆ 4 ಗಂಟೆಯಿಂದಲೇ ರಂಗಾಯಣ ಆವರಣದಲ್ಲಿ ಜಮಾಯಿ ಸಿದ್ದರು. ಕೆಲವರು ಶನಿವಾರ ರಾತ್ರಿ ಯಿಂದಲೇ ರಂಗಾಯಣ ಹೊರ ಆವ ರಣದಲ್ಲಿ ಕಾದು ಕುಳಿತಿದ್ದರು.

ಮುಂಜಾನೆಯೇ ಆಗಮಿಸಿದ್ದ ಪೋಷ ಕರ ಒಂದು ತಂಡ ಅವರೇ ಸರತಿಯ ಸಾಲಿನಲ್ಲಿ ನಿಂತಿದ್ದವರ ಪೈಕಿ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತೆ 300 ಜನರ ಪಟ್ಟಿ ತಯಾರಿಸಿದರು. ಆ ಪಟ್ಟಿ ಪ್ರಕಾರವೇ ಅವರುಗಳೇ ನಿಂತು ರಂಗಾಯಣ ಸಿಬ್ಬಂದಿಗೆ ಸಹಕಾರ ನೀಡಿ, ಕ್ರಮಸಂಖ್ಯೆ ಪ್ರಕಾರವೇ ಅರ್ಜಿಗಳನ್ನು ವಿತರಿಸಲು ನೆರವಾದರು. ಇದರಿಂದಾಗಿ ಅರ್ಜಿ ವಿತರಣೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಅರ್ಜಿಗಳನ್ನು ವಿತರಿಸಲಾಯಿತು.

300 ಮಂದಿಗೆ ಮಾತ್ರ ಅರ್ಜಿ ನೀಡುವ ಕುರಿತು ಮೊದಲೇ ಪ್ರಕಟಿಸ ಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ಆರಂಭ ವಾದ ಅರ್ಜಿ ವಿತರಣೆ ಕಾರ್ಯ 11.30ರ ವೇಳೆಗೆ ಸುಲಲಿತವಾಗಿ ಅಂತ್ಯಗೊಂಡಿತು.

ಕೊನೆಯಲ್ಲಿ 10-12 ಅರ್ಜಿಗಳ ವಿತರಣೆ ಸಂದರ್ಭದಲ್ಲಿ ಒಂದಷ್ಟು ಸಣ್ಣ ಗೊಂದಲ ಬಿಟ್ಟರೆ ಬಹುತೇಕ ಶಾಂತಿ ಯುತವಾಗಿ ಅರ್ಜಿ ವಿತರಣೆಗೊಂಡಿತು.
ಪೋಷಕರಾದ ನಂದೀಶ್, ರಮೇಶ್, ಎಂ.ವೈ.ಅನಂತಕುಮಾರ್, ಅಭಿ, ಶ್ರೀಕಾಂತ್ ಇನ್ನಿತರರ ತಂಡ ಅರ್ಜಿ ವಿತರಣೆ ಸುಲಲಿತವಾಗಿ ನಡೆಯಲು ಕಾರಣರಾಗಿದ್ದು ಅಲ್ಲಿದ್ದ ಪೋಷಕರ ಪ್ರಶಂಸೆಗೆ ಪಾತ್ರರಾದರು.

Translate »